ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರ ಕಾರ್ಮಿಕರನ್ನು ಕೇಂದ್ರಸ್ಥಾನಕ್ಕೆ ನಿಯುಕ್ತಿಗೊಳಿಸಿ’

Last Updated 20 ಜೂನ್ 2022, 3:02 IST
ಅಕ್ಷರ ಗಾತ್ರ

ಸುರಪುರ: ‘ಕೆಂಭಾವಿ ಮತ್ತು ಕಕ್ಕೇರಾ ಪುರಸಭೆಗೆ ನಿಯುಕ್ತಿಗೊಂಡಿರುವ ಸುರಪುರದ ಪೌರ ಕಾರ್ಮಿಕರನ್ನು ಸುರಪುರ ನಗರಸಭೆಗೆ ವರ್ಗಾಯಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣದ ಮುಖಂಡರು ಶನಿವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ
ನಡೆಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಕೆಂಭಾವಿ ಮತ್ತು ಕಕ್ಕೇರಾ ಪುರಸಭೆಯ ಕರ್ತವ್ಯಕ್ಕೆ ನಿಯುಕ್ತಿಗೊಂಡಿರುವ ಸುರಪುರದ ಕೆಲ ಪೌರಕಾರ್ಮಿಕರು 4 ವರ್ಷಗಳಿಂದ ಪ್ರತಿ ದಿನ ಆಟೋದಲ್ಲಿ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರು ಪರಿಶಿಷ್ಟ ಜಾತಿ ಎಂಬ ಕಾರಣಕ್ಕೆ ಯಾರೊಬ್ಬರು ಮನೆ ಬಾಡಿಗೆ ನೀಡುತ್ತಿಲ್ಲ. ಹೀಗಾಗಿ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲು ದಿನನಿತ್ಯ ಸಂಕಷ್ಟ ಎದುರಿಸುವಂತಾಗಿದೆ’ ಎಂದು ದೂರಿದರು.

‘ಬೆಳಗಿನ ಸಮಯದಲ್ಲಿ ಸ್ವಚ್ಛತೆಯ ಕೆಲಸವಿರುತ್ತದೆ. ಆ ಸಮಯದಲ್ಲಿ ಬಸ್ ಸೌಕರ್ಯ ಇಲ್ಲ. ಆಟೋದಲ್ಲಿ ಹೋಗುವ ಅನಿವಾರ್ಯತೆ ಇದೆ. ಇದರಿಂದ ಕಾರ್ಮಿಕರು ಜೀವನ ಸಾಗಿಸುವುದು ಕಷ್ಟವಾಗಿದೆ. ಅವರನ್ನು ಸುರಪುರ ನಗರಸಭೆಗೆ ವರ್ಗಾಯಿಸಬೇಕು’ ಎಂದು ಒತ್ತಾಯಿಸಿದರು.

‘ಸುರಪುರ ನಗರಸಭೆಯಲ್ಲಿ ಕೆಲ ನೌಕರರು 10 ವರ್ಷಕ್ಕೂ ಹೆಚ್ಚಿನ ಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ಸ್ಥಳೀಯರಾಗಿದ್ದು ಕಚೇರಿಗೆ ಬರುವ ಜನರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಮನಸ್ಸೋ ಇಚ್ಛೆ ವರ್ತಿಸುತ್ತಾರೆ. ಆಸ್ತಿ ದಾಖಲಾತಿ ನೀಡಲು ಸಿಕ್ಕಾಪಟ್ಟೆ ಹಣ ಕೇಳುತ್ತಾರೆ. ಈ ಬಗ್ಗೆ ಕೇಳಿದರೆ ಹೆದರಿಸುತ್ತಾರೆ’ ಎಂದು ಆರೋಪಿಸಿದರು.

‘ವರ್ಗಾವಣೆ ಆಗಿದ್ದರು ರಾಜಕೀಯ ಪ್ರಭಾವ ಬಳಸಿ ನಿಯೋಜತ ಸ್ಥಳಕ್ಕೆ ಹೋಗದೆ ಇಲ್ಲಿಯೇ ಉಳಿದಿದ್ದಾರೆ. 10 ವರ್ಷ ಮೇಲ್ಪಟ್ಟು ಸೇವೆಯಲ್ಲಿರುವ ನೌಕರರನ್ನು ಬೇರೆಡೆಗೆ ವರ್ಗ ಮಾಡಬೇಕು. ನಿರ್ಲಕ್ಷ ವಹಿಸಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ’ ಎಚ್ಚರಿಸಿದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಪತ್ರ
ಸಲ್ಲಿಸಿದರು.

ರಾಮು ಶೆಳ್ಳಗಿ, ಮಾನಪ್ಪ ಬಿಜಾಸ್ಪೂರ, ಮೂರ್ತಿ ಬೊಮ್ಮನಳ್ಳಿ, ಧರ್ಮರಾಜ ಬಡಿಗೇರ, ಮಲ್ಲು ಬಿಲ್ಲವ್, ಮಲ್ಲಪ್ಪ ಕೆಸಿಪಿ, ಖಾಜಾಹುಸೇನ ಗುಡುಗುಂಟಿ, ರಮೇಶ ಅರಿಕೇರಿ, ಜಟ್ಟೆಪ್ಪ ನಾಗರಾಳ, ಮುತ್ತುರಾಜ, ಹುಲಗಪ್ಪ ಜಾಂಗೀರ, ರಾಮಣ್ಣ ಬಬಲಾದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT