ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ, ನಿಷೇಧಾಜ್ಞೆ ಜಾರಿ

Last Updated 6 ಏಪ್ರಿಲ್ 2023, 4:02 IST
ಅಕ್ಷರ ಗಾತ್ರ

ಶಹಾಪುರ (ಯಾದಗಿರಿ ಜಿಲ್ಲೆ): ಒಳಮೀಸಲಾತಿ ವರ್ಗೀಕರಣದ ವಿರುದ್ಧ ಮೀಸಲು ಸಂರಕ್ಷಣಾ ಒಕ್ಕೂಟವು ಶಹಾಪುರ ನಗರದಲ್ಲಿ ಗುರುವಾರ ಪ್ರತಿಭಟನೆಗೆ ಕರೆ ನೀಡಿದ್ದರಿಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಆದೇಶ ಹೊರಡಿಸಿದ್ದಾರೆ.‌

ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 14ರನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ನಗರದ ಬಸವೇಶ್ವರ ವೃತ್ತದಿಂದ ಹೊಸ ತಹಶೀಲ್ದಾರ್ ಕಾರ್ಯಾಲಯದವರೆಗೆ ಕಾಲ್ನಡಿಗೆಯಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿಯನ್ನು ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಮ್ಮಿಕೊಂಡಿರುವುದರಿಂದ ಈ ಪ್ರತಿಭಟನೆಗೆ ಶಹಾಪುರ, ವಡಗೇರಾ ತಾಲ್ಲೂಕುಗಳ ವ್ಯಾಪ್ತಿಯ ಹಾಗೂ ಯಾದಗಿರಿ ಜಿಲ್ಲೆಯ ಕೆಲವು ತಾಂಡಾಗಳಿಂದ ಜನರು ಪ್ರತಿಭಟನೆಗೆ ಆಗಮಿಸುವ ಸಂಭವವಿರುತ್ತದೆ. ಈ ಸಂದರ್ಭದಲ್ಲಿ ಶಾಂತಿ ಕದಡಿ ಸಾರ್ವಜನಿಕರ ಆಸ್ತಿ- ಪಾಸ್ತಿಗೆ ನಷ್ಟ ಉಂಟಾಗುವ ಸಾದ್ಯತೆಗಳಿರುತ್ತವೆ. ಅಲ್ಲದೆ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮತ್ತು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವುದರಿಂದ ಶಹಾಪುರ ನಗರ ಮತ್ತು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಹಾಪುರ ನಗರದಾದ್ಯಂತ ಹಾಗೂ ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಾರಿಗೊಳಿಸಬೇಕು ಎಂದು ಪೊಲೀಸರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರಿಂದ ಈ ಕ್ರಮ‌ಕೈಗೊಂಡಿದ್ದಾರೆ.‌

ಶಹಾಪುರ ನಗರದಲ್ಲಿ ಮತ್ತು ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚಿನ ಯಾವುದೇ ವ್ಯಕ್ತಿ, ಗುಂಪು ಕೂಡುವುದು, ಮೆರವಣಿಗೆ ಸಭೆ ಸಮಾರಂಭ ಬಹಿರಂಗ ಘೋಷಣೆ ಕೂಗುವುದನ್ನು ನಿಷೇಧಿಸಿದೆ.

ಯಾವುದೇ ಮಾರಕಾಸ್ತ್ರಗಳನ್ನು (ಬಂದೂಕು, ಭರ್ಚಿ, ಕತ್ತಿ, ಚಾಕು, ಕುಡುಗೋಲು, ಕೊಡಲಿ, ಬಡಿಗೆ, ಇತ್ಯಾದಿ) ಮತ್ತು ಸ್ಫೋಟಕ ವಸ್ತುಗಳನ್ನು ಸಂಗಡ ಕೊಂಡೊಯ್ಯುವುದನ್ನು ನಿಷೇಧಿಸಿದೆ.

ಸಾರ್ವಜನಿಕವಾಗಿ ಭಾಷಣ, ಕೂಗಾಡುವುದು, ಹಾಡುವುದು. ವಾದ್ಯ ಬಾರಿಸುವುದು, ಅಣಕವಾಡುವುದು ಮುಂತಾದ
ಕಾರ್ಯಗಳನ್ನು ನಿಷೇಧಿಸಲಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಾಯ್ದೆ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು. ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಈ ಆದೇಶ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT