ಗುರುವಾರ , ಜೂನ್ 17, 2021
21 °C
ಮನೆಯಲ್ಲೇ ನಮಾಜ್‌, ಬಡವರಿಗೆ ರಂಜಾನ್‌ ಕಿಟ್ ವಿತರಣೆ

ಯಾದಗಿರಿ: ರಂಜಾನ್‌ ಸರಳ ಆಚರಣೆಗೆ ಒತ್ತು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮುಸ್ಲಿಮರ ಪವಿತ್ರ ಉಪವಾಸ ವ್ರತದ ರಂಜಾನ್‌ ಹಬ್ಬವನ್ನು ಕೋವಿಡ್‌ ಕಾರಣದಿಂದ ಸರಳವಾಗಿ ಆಚರಿಸಲು ಮುಸ್ಲಿಂ ಸಮುದಾಯವರು ನಿರ್ಧರಿಸಿದ್ದಾರೆ.

ಕಳೆದ ಬಾರಿಯೂ ಕೋವಿಡ್‌ ಕಾರಣದಿಂದ ಮನೆಯಲ್ಲಿ ಸರಳವಾಗಿ ನಮಾಜ್‌ ಮಾಡಲಾಗಿತ್ತು. ಈ ಬಾರಿಯೂ ಕೋವಿಡ್‌ ಎರಡನೇ ಅಲೆಯ ಪರಿಣಾಮ ಮೌಲ್ವಿಯವರು ಮಾತ್ರ ಮಸೀದಿಗೆ ತೆರಳಿ ನಮಾಜ್‌ ಮಾಡುತ್ತಾರೆ.

30 ದಿನಗಳ ಉಪವಾಸ ವ್ರತ: ಚಂದ್ರದರ್ಶನದಿಂದ ಆರಂಭಗೊಂಡ ಉಪವಾಸ ವ್ರತ 30 ದಿನಗಳ ನಂತರ ಚಂದ್ರ ಕಾಣಿಸಿಕೊಂಡ ನಂತರ ಮುಕ್ತಾಯವಾಗುತ್ತದೆ. ಈ ಸಂದರ್ಭದಲ್ಲಿ ಕಠಿಣ ಉಪವಾಸ ವ್ರತ ಆಚರಣೆ ಮಾಡುವ ಮೂಲಕ ಅಲ್ಲಾಹನ ಕೃಪೆಗೆ ಪಾತ್ರರಾಗುತ್ತಾರೆ.

ಸೂರ್ಯೋದಕ್ಕಿಂತ ಮುಂಚೆಯೇ ಊಟ: ಉಪವಾಸ ವ್ರತದಲ್ಲಿ ಮುಸ್ಲಿಮರು ವಿಶಿಷ್ಟ ಆಚರಣೆಯನ್ನು ಕೈಗೊಳ್ಳುತ್ತಾರೆ. ಸೂರ್ಯೋದಕ್ಕಿಂತ ಮುಂಚಿತವಾಗಿಯೇ ಊಟ ಸೇವಿಸುವುದು ಮತ್ತು ಸೂರ್ಯಾಸ್ತದ ನಂತರವೇ ಊಟ ಮಾಡುವುದು ವಿಶೇಷವಾಗಿದೆ. ಉಪವಾಸ ಕೈಗೊಳ್ಳುವುದಕ್ಕೆ ಬೆಳಿಗ್ಗೆ ಸಹರಿ ಎಂತಲೂ ಉಪವಾಸ ವ್ರತ ಕೊನೆಗೊಳಿಸಲು ಇಫ್ತಾರ್‌ ಎಂದು ಹೆಸರಿಸಲಾಗಿದೆ.

ಲಾಕ್‌ಡೌನ್‌ ಕರಿನೆರಳು ರಂಜಾನ್‌ ಹಬ್ಬದ ಮೇಲೆ ಬಿದ್ದಿದೆ. ಮೊದಲು ಜನತಾ ಕರ್ಫ್ಯೂ ಜಾರಿಗೊಳಿಸಿದಾಗ ಮೇ 12ಕ್ಕೆ ಮುಕ್ತಾಯವಾಗುತ್ತಿತ್ತು. ಆದರೆ, ಮತ್ತೆ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದ್ದು, ಮೇ 24ರ ವರೆಗೆ ಕರ್ಫ್ಯೂ ಇರುವುದರಿಂದ ಹೊಸ ಬಟ್ಟೆ ಖರೀದಿಗೆ ಅವಕಾಶವಿಲ್ಲದಂತಾಗಿದೆ.

ಕೆಲವರು ಮಾತ್ರ ಮೊದಲೇ ಚಿಕ್ಕಮಕ್ಕಳಿಗೆ ಬಟ್ಟೆ ಖರೀದಿಸಿದ್ದಾರೆ. ಆದರೆ, ದೊಡ್ಡವರು ಖರೀದಿ ಮಾಡಲು ಅವಕಾಶವೇ ಇಲ್ಲದಂತಾಗಿದೆ. ಹಬ್ಬಕ್ಕಾಗಿ ಬಟ್ಟೆ ತಂದ ವ್ಯಾಪಾರಿಗಳಿಗೂ ಅಂಗಡಿ ಬಾಗಿಲು ಹಾಕಿದ್ದರಿಂದ ದಿಕ್ಕೇ ತೋಚದಂತಾಗಿದೆ.

ವಿಶೇಷ ನಮಾಜ್‌: ರಂಜಾನ್‌ ತಿಂಗಳಲ್ಲಿ ಪ್ರತಿ ದಿನ ಐದು ಬಾರಿ ಪ್ರಾರ್ಥನೆ ಮಾಡುವುದರ ಜೊತೆಗೆ ‘ನಮಾಜ್‌ ತರಾವಿ’ ವಿಶೇಷ ಪ್ರಾರ್ಥನೆ ಮಾಡುವುದು ವಾಡಿಕೆಯಾಗಿದೆ.

ಶಬ್‌ ಈ– ಕದರ್‌ ಎನ್ನುವುದು ರಂಜಾನ್‌ ತಿಂಗಳಲ್ಲಿ ಪ್ರತಿಯೊಬ್ಬ ಮುಸ್ಲಿಮರು ಮಾಡುವ ವಿಶೇಷ ಪ್ರಾರ್ಥನೆಯಾಗಿದೆ. ಇದೇ ಮೇ 9ರಂದು ರಾತ್ರಿ ಕುರಾನ್‌ ‍ಪಠಾನ್‌ ಮಾಡಿ ರಾತ್ರಿ ‍ಪೂರ್ತಿ ಪ‍್ರಾರ್ಥನೆಯಲ್ಲಿ ತೊಡಿಸಿಕೊಂಡಿದ್ದರು.

ಹಬ್ಬದ ಸಂಭ್ರಮ ಕಸಿದ ಕೋವಿಡ್‌: ಉಪವಾಸ ಬಿಡುವ ಇಫ್ತಾರ್‌ ವೇಳೆ ವಿವಿಧ ಸಮುದಾಯದವರು ಸೇರಿ ಮುಸ್ಲಿಮರಿಗೆ ಫಲಾಹಾರದ ವ್ಯವಸ್ಥೆ ಮಾಡುತ್ತಿದ್ದರು. ಆದರೆ, ಕೋವಿಡ್‌ ಕಾರಣದಿಂದ ಇದು ಸಾಧ್ಯವಾಗದಂತೆ ಆಗಿದೆ. ಜೊತೆಗೆ ಗುಂಪುಗೂಡಲು ಅವಕಾಶವಿಲ್ಲದಿದ್ದರಿಂದ ಹಲವಾರು ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.

2,000 ರಂಜಾನ್‌ ಕಿಟ್‌ ವಿತರಣೆ: ಪ್ರತಿ ವರ್ಷವೂ ನಗರದ ಬಡವರಿಗೆ ತಂಜುಮುಸ್ಲಿಂಮೀನ್ ಮತ್ತು ಬೈಹೆತುಲಮಹಲ್ ವತಿಯಿಂದ ರಂಜಾನ್‌ ಕಿಟ್‌ ವಿತರಿಸಲಾಗುತ್ತದೆ. ಈ ವರ್ಷವೂ ಸಮುದಾಯದ ಶ್ರೀಮಂತರು ಸೇರಿ ಹಣ ಕೂಡಿ ಹಾಕಿ ಬಡವರಿಗೆ ಹಬ್ಬದ ಸಾಮಗ್ರಿ ವಿತರಿಸಿದ್ದಾರೆ.

‘ರಂಜಾನ್‌ ಕಿಟ್‌ನಲ್ಲಿ 3 ಕೆಜಿ ಅಕ್ಕಿ, ಅರ್ಧ ಕೆಜಿ ಬೆಳೆ, ಅರ್ಧ ಕೆಜಿ ಎಣ್ಣೆ, ಹಾಲಿನ ಪ್ಯಾಕೆಟ್‌, ಒಣ ಹಣ್ಣುಗಳ ಪ್ಯಾಕೆಟ್‌, ಒಂದು ಕೆ.ಜಿ ಸಕ್ಕರೆ, 1 ಕೆ.ಜಿ ಕಜ್ಜೂರ, 250 ಶ್ಯಾವಿಗಿ ನಗರದ ಕಡು ಬಡವರಿಗೆ 2000 ಕಿಟ್‌ ವಿತರಿಸಲಾಗಿದೆ’ ಎಂದು ತಂಜುಮುಸ್ಲಿಂಮೀನ್ ಮತ್ತು ಬೈಹೆತುಲಮಹಲ್ ಅಧ್ಯಕ್ಷ ಲಾಯಕ್ ಬಾದಲ್ ಹುಸೇನ್ ಮಾಹಿತಿ ನೀಡುತ್ತಾರೆ.

****

‘ದಾನವೇ ಶ್ರೇಷ್ಠ’

‘ಪವಿತ್ರ ರಂಜಾನ್‌ ತಿಂಗಳಲ್ಲಿ ಊಟ ಬಿಟ್ಟು ಉಪವಾಸ ಮಾಡುವುದು ಮಾತ್ರವಲ್ಲ ಮಾನಸಿಕ, ದೈಹಿಕ ಚಟುವಟಿಕೆಗಳನ್ನು ನಿಯಂತ್ರಣ ಮಾಡುವುದಾಗಿದೆ’ ಎನ್ನುತ್ತಾರೆ ಗುಲಸರಂನ ಮೌಲ್ವಿ ಸೈಯದ್‌ ಶಮ್ಸ್‌ ಅಲಂ ಹುಸೇನಿ ಅವರು.

‘ಅನ್ನ, ನೀರು ತ್ಯಜಿಸುವುದು ಮಾತ್ರ ಉಪವಾಸ ಎನಿಸಿಕೊಳ್ಳುವುದಿಲ್ಲ. ಲೈಂಗಿಕ ಕ್ರಿಯೆ, ಸುಳ್ಳು ಆಡದಿರುವುದು, ಮೋಸ ಮಾಡದೇ ಇರುವುದು, ಬಡವರ ಬಗ್ಗೆ ಕನಿಕರ ತೋರಿಸುವುದು, ಐದು ಬಾರಿ ನಮಾಜ್‌ ಮಾಡುವುದು ಸೇರಿದಂತೆ ಅಲ್ಲಾಹನಿಗೆ ಮೆಚ್ಚುಗೆಯಾಗಿ ಜೀವಿಸುವುದು ರಂಜಾನ್‌ ತಿಂಗಳ ಉಪವಾಸ ಗುಟ್ಟಾಗಿದೆ. ಈಗ ಕೋವಿಡ್‌ ಕಾರಣದಿಂದ ಮಸೀದಿಗೆ ತೆರಳದೇ ಮನೆಯಲ್ಲಿ ನಮಾಜ್‌ ಮಾಡಲಾಗುತ್ತಿದೆ. ಅಲ್ಲದೆ ಪ್ರತಿಯೊಬ್ಬ ಮುಸ್ಲಿಮನು ತಮಗಿರುವುದನ್ನು ಇನ್ನೊಬ್ಬರಿಗೆ ದಾನ ಮಾಡುವುದು ಕಡ್ಡಾಯವಾಗಿದೆ. ಇದು ಎಲ್ಲಕ್ಕಿಂತ ಶ್ರೇಷ್ಠವಾಗಿದೆ’ ಎನ್ನುತ್ತಾರೆ ಅವರು.

***

ಸಾರ್ವಜನಿಕರ ಪ್ರಾರ್ಥನೆ, ಮಸೀದಿಯಲ್ಲಿ ನಮಾಜ್‌ಗೆ ಅವಕಾಶವಿಲ್ಲ. ಮನೆಯಲ್ಲಿ ರಂಜಾನ್‌ ಹಬ್ಬ ಆಚರಣೆ ಮಾಡಿಕೊಳ್ಳಬೇಕು

-ಲಾಯಕ್ ಬಾದಲ್ ಹುಸೇನ್, ಅಧ್ಯಕ್ಷ, ತಂಜುಮುಸ್ಲಿಂಮೀನ್ , ಬೈಹೆತುಲಮಹಲ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು