ಭಾನುವಾರ, ಜೂನ್ 13, 2021
21 °C
ಮೂರು ವರ್ಷಗಳಿಂದ ರಂಜಾನ್ ವೇಳೆ ಉಪವಾಸ ಆಚರಿಸುತ್ತಿರುವ ಚೇತನ ಬಾವಿಮನಿ

ಹಿಂದೂ ಯುವಕನಿಂದ ರಂಜಾನ್‌ ಉಪವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಸಗರನಾಡು ಸೌಹಾರ್ದದ ಬದುಕಿಗೆ ಕೊಂಡಿಯಾಗಿದೆ. ಮುಸ್ಲಿಂ ಸಮುದಾಯದವರು ಪವಿತ್ರ ಹಬ್ಬ ರಂಜಾನ್ ವೇಳೆ ಒಂದು ತಿಂಗಳು ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ವಿಶೇಷವೆಂಬಂತೆ ತಾಲ್ಲೂಕಿನ ಭೀಮರಾಯನಗುಡಿಯ ಹಿಂದೂ ಸಮುದಾಯದ ಯುವಕ ಚೇತನ ಬಾವಿಮನಿ ಅವರು ಮೂರು ವರ್ಷದಿಂದ ರಂಜಾನ್ ವೇಳೆ ತಪ್ಪದೆ ಉಪವಾಸ ಕೈಗೊಳ್ಳುತ್ತಿದ್ದಾರೆ.

‘ನಾನು ಡಿಪ್ಲೋಮಾ ಎಲೆಕ್ಟ್ರಾನಿಕ್ಸ್ ಓದುತ್ತಿರುವಾಗ ನನ್ನ ಮುಸ್ಲಿಂ ಗೆಳೆಯರು ರಂಜಾನ್ ಹಬ್ಬದಲ್ಲಿ ಉಪವಾಸ ವ್ರತ ಆಚರಿಸುವುದು ನನ್ನ ಮೇಲೆ ಪರಿಣಾಮ ಬೀರಿತು. ಯಾವ ಧರ್ಮ ಆದರೇನು ಉಪವಾಸ ಕೈಗೊಳ್ಳಲು ನಿರ್ಬಂಧವಿಲ್ಲ ಎಂದು ಭಾವಿಸಿ ಮೂರು ವರ್ಷದ ಹಿಂದೆ ಹಬ್ಬದ ಸಂದರ್ಭದಲ್ಲಿ ಉಪವಾಸ ಮಾಡಲಾರಂಭಿಸಿದೆ. ಬೆಳಿಗ್ಗೆ 3 ಗಂಟೆಗೆ ಎದ್ದು ನಿತ್ಯಕಾರ್ಯಗಳನ್ನು ಮುಗಿಸಿ ನಿಗದಿತ ಸಮಯಕ್ಕೆ ಅರಬ್ಬಿ ಭಾಷೆಯಲ್ಲಿರುವ ಶ್ಲೋಕಗಳನ್ನು ಇಂಗ್ಲಿಷ್‌ನಲ್ಲಿ ಭಾಷಾಂತರಿಸಿಕೊಂಡು ಓದಿ ಉಪವಾಸ ಆರಂಭಿಸುತ್ತೇನೆ. ಪ್ರಸಕ್ತ ಬಾರಿ 11 ದಿನ ಮಾತ್ರ ಉಪವಾಸ ಕೈಗೊಂಡಿರುವೆ. ಆದರೆ ನಾನು ಮಸೀದಿಗೆ ಹೋಗಿ ಪ್ರಾರ್ಥನೆ ಮಾಡುವುದಿಲ್ಲ ಎನ್ನುತ್ತಾರೆ’ ಚೇತನ ಬಾವಿಮನಿ.

ಉಪವಾಸ ವ್ರತ ಕೈಗೊಳ್ಳುವುದರಿಂದ ನಮ್ಮಲ್ಲಿ ತಾಳ್ಮೆ, ಸಹನ ಬರುತ್ತದೆ. ನೀರು ಮತ್ತು ಆಹಾರ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ. ಇದಕ್ಕೆ ನಮ್ಮ ಕುಟುಂಬದ ಸದಸ್ಯರ ಸಹಕಾರ ಮುಖ್ಯವಾಗಿದೆ. ತಾಯಿ ಸತ್ಯಮ್ಮ ಹಾಗೂ ಸಾಯಿಬಣ್ಣ ಅವರನ್ನು ನಾನು ನೆನೆಯಲೇಬೇಕು. ನನ್ನ ತಂಗಿ ರಾಧ ಕೂಡಾ ಐದಾರು ದಿನ ಉಪವಾಸ ಕೈಗೊಂಡಿದ್ದಾರೆ ಎನ್ನುತ್ತಾರೆ ಅವರು.

‘ಯಾವುದೇ ಹಬ್ಬ ಮಾನವನ ಒಳಿತಿಗಾಗಿ ಇವೆ. ನಮ್ಮಲ್ಲಿರುವ ಸಂಕುಚಿತ ಭಾವನೆಗಳನ್ನು ತೊಡೆದುಹಾಕಿ ಉತ್ತಮ ಸಂದೇಶ ಸಾರುವ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ತಪ್ಪೇನಿದೆ. ಜಾತಿ, ಧರ್ಮಕ್ಕೆ ಮಿಗಿಲಾಗಿ ಮನುಜಪಥದತ್ತ ನಾವು ಸಾಗಬೇಕು’ ಎನ್ನುತ್ತಾರೆ ಚೇತನ ಅವರ ತಾಯಿ ವಕೀಲೆ ಸತ್ಯಮ್ಮ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು