ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರದ ಉದ್ದೇಶಕ್ಕೆ ಕಲೆ ಬಳಸದ ಅಪರೂಪದ ಕಲಾವಿದ

ಗಣೇಶ ವಿಗ್ರಹ ತಯಾರಿಕೆಯಲ್ಲಿ ಎತ್ತಿದ ಕೈ ಮಹ್ಮದ್ ಅಲಿ
Last Updated 29 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಕೆಂಭಾವಿ: ತನ್ನ ಅದ್ಬುತವಾದ ಕಲೆಯನ್ನು ವ್ಯಾಪಾರಕ್ಕಾಗಿ ಬಳಸದೆ ಸೇವಾ ಮನೋಭಾವದಿಂದ ಬೆಳೆಸಿಕೊಂಡು ಬಂದಿರುವ ಪಟ್ಟಣದ ಮುಸ್ಲಿಂ ಯುವಕನೊಬ್ಬ ಮಣ್ಣಿನಲ್ಲಿ ಗಣೇಶ ಮೂರ್ತಿ ಮಾಡಿ ಸಂಘ–ಸಂಸ್ಥೆಗಳಿಗೆ, ಶಾಲೆಗಳಿಗೆ ಉಚಿತವಾಗಿ ನೀಡಿ ಹಿಂದೂ–ಮುಸ್ಲಿಂ ಭಾವೈಕ್ಯ ಮೆರೆಯುತ್ತಿದ್ದಾರೆ.

ಬಡ ಕುಟುಂಬದಿಂದ ಬಂದಿರುವ ಮಹ್ಮದ್ ಅಲಿ ಖಾದರ ಸಾಬ ವಡಕೇರಿ, ಉಪಜೀವನಕ್ಕಾಗಿ ಸೆಂಟರಿಂಗ್ ಕೆಲಸ ಮಾಡುತ್ತಾರೆ. ಮುಸ್ಲಿಮನಾಗಿ ಜನಿಸಿದರೂ ಹಿಂದೂ ದೇವತೆಗಳ ವಿಗ್ರಹಗಳನ್ನು ಮಣ್ಣಿನಲ್ಲಿ ನಿರ್ಮಿಸುತ್ತಿದ್ದಾರೆ.

ಕುಟುಂಬದಲ್ಲಿ ಒಟ್ಟು 10 ಜನರಿದ್ದಾರೆ. ತಾಯಿ, ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರನ್ನು ಹೊಂದಿರುವ ದೊಡ್ಡ ಕುಟುಂಬ. ಚಿಕ್ಕಂದಿನಿಂದಲೂ ಕ್ಲೇ ಮಾಡೆಲಿಂಗ್ ಅಂದರೆ ಅಚ್ಚುಮೆಚ್ಚು. ಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದವರೆಗೂ ಹೋಗಿ ಬಂದಿದ್ದಾರೆ. ಬಡತನದಿಂದ ಓದು ಮುಂದುವರಿಸಲಾಗದೆ ಸೆಂಟರಿಂಗ್ ಕೆಲಸ ಮಾಡುತ್ತಿದ್ದಾರೆ.ಆದರೆ, ಮಣ್ಣಿನ ಮೇಲಿನ ಮೋಹ ಮಾತ್ರ ಕಡಿಮೆ ಮಾಡಿಕೊಳ್ಳಲಿಲ್ಲ.

ಮನೆಯಲ್ಲೇ ವಿವಿಧ ರೀತಿಯ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಾರೆ. ಆನೆ, ಒಂಟೆ, ಗಣೇಶನ ಮೂರ್ತಿ ಸೇರಿದಂತೆ ಅನೇಕ ಮೂರ್ತಿಗಳನ್ನು ನಿರ್ಮಿಸಿ ಅವುಗಳನ್ನು ಶಾಲೆಗಳಿಗೆ ಉಚಿತ ನೀಡುತ್ತಾರೆ. ಶಾಲೆ ಕಾಲೇಜುಗಳಿಂದ, ಸಂಘ ಸಂಸ್ಥೆಗಳಿಂದ ಮಣ್ಣಿನ ಮೂರ್ತಿಗಳನ್ನು ತಯಾರಿಸಲು ಬೇಡಿಕೆ ಬಂದರೆ ಆದ್ಯತೆ ಮೇರೆಗೆ ಮೂರ್ತಿಗಳನ್ನು ತಯಾರಿಸಿ ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ‘ಈ ಬಾರಿಯೂ ಒಂದೆರೆಡು ಶಾಲೆ ಹಾಗೂ ಸಂಸ್ಥೆಗಳಿಂದ ಬೇಡಿಕೆ ಬಂದಿದೆ’ ಎಂದು ತಿಳಿಸುತ್ತಾರೆ.

ಮಣ್ಣಿನ ಮೂರ್ತಿಯಲ್ಲದೆ ಚಿತ್ರಕಲೆ ಮತ್ತು ಥರ್ಮಾಕೋಲ್‌ನಿಂದ ಮಾಡುವ ಕೆಲಸದಲ್ಲೂ ಇವರದು ಎತ್ತಿದ ಕೈ. ಚಿತ್ರಕಲೆಯನ್ನು ಅದ್ಭುತವಾಗಿ ರಚಿಸುತ್ತಾರೆ ಎಂದು ಅವರ ಸ್ನೇಹಿತರು ಹೇಳುತ್ತಾರೆ. ಬಡತನದಲ್ಲಿಯೂ ಅದ್ಭುತ ಕಲೆಯನ್ನು ಹೊಂದಿದ ಯುವಕನನ್ನು ಗುರುತಿಸಿ, ಅವರ ಕಲೆಯನ್ನು ಬೆಳಕಿಗೆ ತರುವುದು ಸಮಾಜದ ಜವಾಬ್ದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT