ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕಕ್ಕೆ ನೋಂದಾಯಿಸಿರಿ

ಬಿಪಿಎಲ್ ಕುಟುಂಬಗಳು ₹5 ಲಕ್ಷ ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು: ಸಿಇಒ
Last Updated 27 ಸೆಪ್ಟೆಂಬರ್ 2019, 14:57 IST
ಅಕ್ಷರ ಗಾತ್ರ

ಯಾದಗಿರಿ: ‘ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ವರ್ಷದಲ್ಲಿ ₹5 ಲಕ್ಷ ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಸಂಘದ ಸಂಯುಕ್ತಾಶ್ರಯದಲ್ಲಿ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ‘ಆರೋಗ್ಯ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.

‘ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ₹1.50 ಲಕ್ಷ ವರೆಗೂ ಸಹಪಾವತಿ (ಶೆ.70ರಷ್ಟು ಫಲಾನುಭವಿ ಭರಿಸತಕ್ಕದ್ದು, ಶೇ.30ರಷ್ಟು ಸರ್ಕಾರ ಭರಿಸುತ್ತದೆ)ಯೊಂದಿಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆಸ್ಪತ್ರೆಗಳಲ್ಲಿ ಲಭ್ಯ ಇವೆ. ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಯೋಜನೆಯ ಲಾಭ ಪಡೆಯಬಹುದು’ ಎಂದು ಹೇಳಿದರು.

ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಭಗವಂತ ಅನವಾರ ಮಾತನಾಡಿ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ಯಾದಗಿರಿ ಜಿಲ್ಲಾ ಆಸ್ಪತ್ರೆ, ಸುರಪುರ, ಶಹಾಪುರ ತಾಲ್ಲೂಕು ಆಸ್ಪತ್ರೆ ಹಾಗೂ ವಡಗೇರಾ, ಗುರುಮಠಕಲ್, ದೋರನಹಳ್ಳಿ, ಹುಣಸಗಿ, ಅರಕೇರಾ ಬಿ., ಸೈದಾಪುರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 10 ರೂ. ನೀಡಿ ಹೆಸರು ನೋಂದಾಯಿಸಿ ಕಾರ್ಡ್ ಪಡೆಯಬೇಕು. ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಸೇವಾ ಸಿಂಧು ಕೇಂದ್ರಗಳಲ್ಲೂ ವಿತರಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ಕಾಗದದ ಕಾರ್ಡ್‍ಗೆ ₹10 ಮತ್ತು ಲ್ಯಾಮಿನೇಶನ್ ಕಾರ್ಡ್‍ಗೆ ₹35 ಮಾತ್ರ ಶುಲ್ಕ ನೀಡಿ ಕಾರ್ಡ್ ಪಡೆಯಬೇಕು. ಅಲ್ಲದೇ, ಯಾದಗಿರಿ ನಗರದ ತಹಶೀಲ್ದಾರ್ಕಚೇರಿ ಆವರಣದಲ್ಲಿ ಇತ್ತೀಚೆಗೆ ಆರಂಭಿಸಿರುವ ’ಕರ್ನಾಟಕ ಒನ್’ ಸಮಗ್ರ ನಾಗರಿಕ ಸೇವಾ ಕೇಂದ್ರದಲ್ಲಿಯೂ ಸಹ ಕಾರ್ಡ್ ಪಡೆಯಬಹುದು ಎಂದು ತಿಳಿಸಿದರು.

‘ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಬಂದು 1 ವರ್ಷ ಆದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಮೇಳ ಆಯೋಜಿಸಿದ್ದು, ಮೇಳದಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಜೊತೆಗೆ ಯೋಜನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಾರ್ಡ್ ವಿತರಣೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 4 ಕೌಂಟರ್ ಹಾಗೂ ತಾಲ್ಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಂದೊಂದು ಕೌಂಟರ್ ತೆರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಪ್ಪ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ ಸೇರಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಆರೋಗ್ಯ ಮೇಳದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT