ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಮಾಳ ಜಾಗ ಒತ್ತುವರಿ ತೆರವುಗೊಳಿಸಿ: ಮನವಿ

Published 3 ಜುಲೈ 2024, 14:30 IST
Last Updated 3 ಜುಲೈ 2024, 14:30 IST
ಅಕ್ಷರ ಗಾತ್ರ

ಶಹಾಪುರ: ನಗರದ ಗಾಂಧಿಚೌಕ ಬಡಾವಣೆಯ ಗೋಮಾಳ ಜಾಗವನ್ನು ಅದರ ಅಕ್ಕಪಕ್ಕದ ಮನೆಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನುಳಿದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಸರ್ಕಾರದ ಸ್ವತ್ತಾದ ಗೋಮಾಳ ಸಂರಕ್ಷಣೆ ಮಾಡಬೇಕು ಎಂದು ಗಂಗಾಧರ ಹೊಟ್ಟಿ ಅವರು ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಶನಿವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಸುಶೀಲಾ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಆಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಯುವಕ ಗಂಗಾಧರ ಹೊಟ್ಟಿ, 15 ವರ್ಷದಿಂದ ಸರ್ಕಾರಿ ಸ್ವತ್ತು ಸಂರಕ್ಷಣೆ ಮಾಡುವಂತೆ ಮನವಿ ಮಾಡುತ್ತಿರುವೆ. 60/100 ಉದ್ದಳತೆಯ ಗೋಮಾಳ( ಹಿಂದೆ ಬಿಡಾಡಿ ದನಗಳನ್ನು ತಂದು ಹಾಕುತ್ತಿದ್ದ ಜಾಗ) ಕಾಲ ಕ್ರಮೇಣ ಅದರ ಅಕ್ಕಪಕ್ಕದ ಮನೆಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ ಸದ್ಯಕ್ಕೆ ಸುಮಾರು 10 ಅಡಿ ಜಾಗ ಖಾಲಿ ಇದೆ. ಅಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಒತ್ತುವರಿ ಜಾಗವನ್ನು ತೆರವುಗೊಳಿಸಿ ಅಲ್ಲಿ ಸಾರ್ವಜನಿಕ ಗ್ರಂಥಾಲಯ ಇಲ್ಲವೇ ಅಂಗನವಾಡಿ ಕೇಂದ್ರವನ್ನು ಸ್ಥಾಪಿಸಿ ಸಾರ್ವಜನಿಕ ಉದ್ದೇಶಕ್ಕೆ ಅದು ಸದ್ಬಳಕೆ ಮಾಡಿ ಎಂದು ಮನವಿ ಮಾಡಿದರು.

ಆಗ ಜಿಲ್ಲಾಧಿಕಾರಿ ಅವರು ಸ್ಪಂದಿಸಿ ’ಯಾಕೆ ಇಷ್ಟು ವರ್ಷ ಹಾಗೆ ಬಿಟ್ಟಿದ್ದಿರಿ. ಎರಡು ದಿನದಲ್ಲಿ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡಿ ಒತ್ತುವರಿದಾರರನ್ನು ತೆರವುಗೊಳಿಸಿ. ಸಾರ್ವಜನಿಕ ಆಸ್ತಿಯನ್ನು ಸಂರಕ್ಷಣೆ ಮಾಡಬೇಕು’ ಎಂದು ಪೌರಾಯುಕ್ತ ರಮೇಶ ಬಡಿಗೇರ ಅವರಿಗೆ ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT