ಮಂಗಳವಾರ, ನವೆಂಬರ್ 24, 2020
25 °C

ಶಹಾಪುರ: 4 ಹತ್ತಿ ಖರೀದಿ ಕೇಂದ್ರ ಸ್ಥಾಪನೆಗೆ ಬಿಜೆಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಭಾರತೀಯ ಹತ್ತಿ ನಿಗಮದ ಆಶ್ರಯದಲ್ಲಿ ತಾಲ್ಲೂಕಿನಲ್ಲಿ ನಾಲ್ಕು ಕಡೆ ಹತ್ತಿ ಖರೀದಿ ಕೇಂದ್ರವನ್ನು ಸ್ಥಾಪಿಸುವುದರ ಜತೆಗೆ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಹತ್ತಿ ಖರೀದಿಸಬೇಕು ಎಂದು ಒತ್ತಾಯಿಸಿ ಬುಧವಾರ ಬಿಜೆಪಿಯ ತಾಲ್ಲೂಕು ಘಟಕದ ಮುಖಂಡರು ಎಪಿಎಂಸಿ ಕಾರ್ಯದರ್ಶಿಗೆ ಮನವಿ ಮಾಡಿದರು.

ಪ್ರಸಕ್ತ ಬಾರಿ ಅತಿವೃಷ್ಟಿಯಿಂದ ರೈತರು ತುಂಬಾ ನಷ್ಟ ಅನುಭವಿಸಿದ್ದಾರೆ. ಹೆಚ್ಚು ಮಳೆಯಾಗಿದ್ದರಿಂದ ಹತ್ತಿ ಬೆಳೆಯು ಸಂಕಷ್ಟಕ್ಕೆ ಸಿಲುಕಿ ಇಳುವರಿ ಕಡಿಮೆಯಾಗಿದೆ. ಸದ್ಯ ಹತ್ತಿ ಧಾರಣೆಯು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹4,200 ಇದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಅಡಿಯಲ್ಲಿ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಿ ಪ್ರತಿ ಕ್ವಿಂಟಲ್‌ಗೆ ₹7 ಸಾವಿರ ನಿಗದಿಗೊಳಿಸಿದರೆ ರೈತರಿಗೆ ತುಸು ಆಸರೆಯಾಗಲಿದೆ ಎಂದು ಬಿಜೆಪಿಯ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಎಂಟಕ್ಕೂ ಹೆಚ್ಚು ಹತ್ತಿ ಕಾರ್ಖಾನೆಗಳಿವೆ. ಧಾರಣೆ ಮಾತ್ರ ಕುಸಿತವಾಗಿದೆ. ಹೆಚ್ಚಿನ ಬೆಲೆಯಲ್ಲಿ ಹತ್ತಿ ಖರೀದಿಸಲು ನಾಲ್ಕು ಕಡೆ ಖರೀದಿ ಕೇಂದ್ರ ಸ್ಥಾಪಿಸಿದರೆ ತ್ವರಿತವಾಗಿ ಹತ್ತಿ ಮಾರಾಟ ಮಾಡಲು ಅನುಕೂಲವಾಗುತ್ತದೆ ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

ಈಚೆಗೆ ಸುರಿದ ಭಾರಿ ಮಳೆಯಿಂದ ಹತ್ತಿ ಬಳೆದ ರೈತರು ನಷ್ಟ ಅನುಭವಿಸಿದ್ದಾರೆ. ಸರ್ಕಾರ ಅವರಿಗೆ ಪರಿಹಾರ ನೀಡಬೇಕು ಎಂದರು.

ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಅಂಗಡಿ, ಶಾಂತಗೌಡ ದಿಗ್ಗಿ, ತಿಮ್ಮಯ್ಯ ಸೈದಾಪುರ, ಬಸವರಾಜ ಇಜೇರಿ, ಬಸವರಾಜ ಹೇರುಂಡಿ, ಸಂಗಣ್ಣ, ಸಿದ್ದರಾಜ ಮುಡಬೂಳ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು