ಭಾನುವಾರ, ಅಕ್ಟೋಬರ್ 20, 2019
27 °C
ಸ್ಥಾಪನೆಯಾಗದ ಕಡೇಚೂರು–ಬಾಡಿಯಾಳ ಕೈಗಾರಿಕಾ ವಸಾಹತು

ಆಶ್ವಾಸನೆಯಾಗಿ ಉಳಿದ ಕೈಗಾರಿಕಾ ವಲಯ

Published:
Updated:
Prajavani

ಯಾದಗಿರಿ: 30ನೇ ಜಿಲ್ಲೆಯಾದ ಯಾದಗಿರಿಯಲ್ಲಿ ಕೈಗಾರಿಕೆಗಳಿಲ್ಲದೆ ಇಂದಿಗೂ ಜಿಲ್ಲೆಯ ಜನರು ಗುಳೆ ಹೋಗುವುದು ತಪ್ಪಿಲ್ಲ.

2010ರಲ್ಲಿ ಜಿಲ್ಲೆಯಲ್ಲಿ ಕೈಗಾರಿಕೆ ವಸಾಹತು ಸ್ಥಾಪನೆ ಮಾಡಲು ತಾಲ್ಲೂಕಿನ ಕಡೇಚೂರು–ಬಾಡಿಯಾಳ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ 3,232 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಕೈಗಾರಿಕೆ ಸ್ಥಾ‍ಪನೆಯಾಗಿಲ್ಲ. ಭೂಮಿ ಕೊಟ್ಟವರ ಮಕ್ಕಳಿಗೆ ಉದ್ಯೋಗವು ಇಲ್ಲವಾಗಿದೆ. ಇದರಿಂದ ಇದು ಕೇವಲ ಆಶ್ವಾಸನೆಯಾಗಿ ಮಾತ್ರ ಉಳಿದಿದೆ.

ಕಲ್ಯಾಣಿ ಸ್ಟಿಲ್ಸ್‌, ಕೋಕಾ ಕೋಲಾ ಕಾರ್ಖಾನೆ, ಜವಳಿ ಪಾರ್ಕ್‌, ಫಾರ್ಮಾ ಸುಟಿಕಲ್ಸ್ ಪಾರ್ಕ್‌ ಮತ್ತು ಇನ್ನಿತರ ಬೃಹತ್‌ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದಕ್ಕಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದರೂ ಕೈಗಾರಿಕೆಗಳು ಸ್ಥಾಪನೆಯಾಗಿದ್ದರಿಂದ ಅಲ್ಲಿ ಈಗ ರೈತರು ಹತ್ತಿ ಬೆಳೆ ಬೆಳೆದಿದ್ದಾರೆ. ಭೂಮಿ ನೀಡಿದವರಿಗೆ ಮಾತ್ರ ಯಾವುದೇ ಅನುಕೂಲವಾಗಿಲ್ಲ. ಇದರಿಂದ ಈ ಭಾಗದ ಜನರು ಪರಿತಪಿಸುವಂತಾಗಿದೆ. 

ನಿಗದಿತ ಕೈಗಾರಿಕಾ ಪ್ರದೇಶದಲ್ಲಿ ಭೂ ಸಂತ್ರಸ್ತರಿಗೆ ನಿವೇಶನ ಹಾಗೂ ಉದ್ಯೋಗ ಕೊಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಭೂಮಿ ಕಳೆದುಕೊಂಡು 10 ವರ್ಷಗಳಾಗುತ್ತಿದ್ದರೂ ಕಾರ್ಖಾನೆಗಳು ಸ್ಥಾಪನೆಯಾಗಿಲ್ಲ. ಇದರಿಂದ ಭೂಮಿ ಕಳೆದುಕೊಂಡ ರೈತರು, ಯುವಕರು ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿ ಕೇವಲ ರೈಲ್ವೆ ಕೋಚ್ ತಯಾರಿಕಾ ಘಟಕ ಮಾತ್ರ ಸ್ಥಾಪನೆಯಾಗಿರುತ್ತದೆ. ಆದರೆ, ಶೇಕಡ 25 ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ.

ಭತ್ತದ ತೌಡಿನಿಂದ ವಿದ್ಯುತ್ ಉತ್ಪಾದನೆ ಕೈಗಾರಿಕೆ ಕೇಂದ್ರ ಸ್ಥಾಪಿಸುವುದು, ಹತ್ತಿ ಬೀಜ ಮತ್ತು ಭತ್ತದ ಚೌಡಿನಿಂದ ಏಣಿ ತಯಾರಿಯಾಗುವ ದ್ರಾವಕ (Solvent plant) ಕೇಂದ್ರ ಸ್ಥಾಪಿಸಿ ಈ ಭಾಗದ ಜನರಿಗೆ ಉದ್ಯೋಗ ಕೊಡಿಸುವಲ್ಲಿ ವಿಫಲವಾಗಿದೆ.

ಕಡೇಚೂರು–ಬಾಡಿಯಾಳ ಪ್ರದೇಶದಲ್ಲಿ ಮೊದಲಿಗೆ ಎಕರೆಗೆ ₹6 ಲಕ್ಷ ಪರಿಹಾರ ನೀಡಲಾಗಿತ್ತು. ನಂತರ ರೈತರು ₹24 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈಗ 200ರಿಂದ 300 ಎಕರೆವರೆಗಿನ ರೈತರಿಗೆ ಕೋರ್ಟ್‌ನಲ್ಲಿ ದಾವೆ ಇರುವುದರಿಂದ ಪರಿಹಾರದ ಹಣ ವಿತರಿಸಿಲ್ಲ. 

ಯಾದಗಿರಿ ತಾಲ್ಲೂಕಿನ ಆಶನಾಳ ಗ್ರಾಮದಲ್ಲಿ ಅತಿ ಸಣ್ಣ ಹಾಗೂ ಸಣ್ಣ ಕೈಗಾರಿಕೆಗಳಿಗಾಗಿ 302 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತೆವೆಂದು ಆಶ್ವಾಸನೆ ನೀಡಿ ಡಿಮಾಂಡ್ ಸರ್ವೆ ಮಾಡಿಸಲಾಗಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದರಿಂದ ಇದು ಹಾಗೇಯೆ ಉಳಿದಿದೆ. 

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವ ಹತ್ತಿಯನ್ನು ಉಪಯೋಗಿಸಿಕೊಂಡು ನೂಲುವ ಗಿರಣಿ (spinning mill) ಸ್ಥಾಪಿಸಿದರೆ ಅನುಕೂಲವಾಗುತ್ತದೆ. ಆದರೆ, ಆದ್ಯಾವುದು ನಡೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಈ ಬಗ್ಗೆ ಗಮನಹರಿಸಬೇಕು.

‘ನಮ್ಮ ಗ್ರಾಮದ ಬಳಿ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತು. 5 ವರ್ಷಗಳಲ್ಲಿ ನಿಮಗೆ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಕಾರ್ಖಾನೆಗಳು ಇಲ್ಲದೆ ಉದ್ಯೋಗವಿಲ್ಲ. ಪರಿಹಾರ ಹಣದಲ್ಲಿ ಮಲತಾಯಿ ಧೋರಣೆ ಮಾಡಲಾಗಿದೆ. ₹6 ಲಕ್ಷ ಪರಿಹಾರ ನೀಡಲಾಗಿದೆ. ಇದರಿಂದ ನಮಗೆ ಅನ್ಯಾಯವಾಗಿದೆ’ ಎಂದು ಕಡೇಚೂರು ಗ್ರಾಮಸ್ಥ ನರಸಿಂಹ ಆರೋಪಿಸುತ್ತಾರೆ.

*
ಕೈಗಾರಿಕಾ ಪ್ರದೇಶದಲ್ಲಿ ಅಕ್ಟೋಬರ್ ತಿಂಗಳಲ್ಲಿ ನೀರು ಮತ್ತು ವಿದ್ಯುತ್ ಎಲ್ಲ ಕಾಮಗಾರಿಗಳನ್ನು ಪೂರ್ಣಿಗೊಳಿಸುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮುಂದೆ ಕೈಗಾರಿಕೋದ್ಯಮಿಗಳನ್ನು ಆಕರ್ಷಣೆ ಮಾಡಲಾಗುವುದು. ಈಗಾಗಲೇ ಈ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆಯಾಗಿದೆ
–ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ

*
ಹತ್ತು ವರ್ಷಗಳಾಗುತ್ತ ಬಂದರೂ ಕೈಗಾರಿಕೆ ಪ್ರದೇಶದಲ್ಲಿ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ಯಾವುದೇ ಕಂಪನಿಗಳು ಬರಲು ಹಿಂಜರಿಯುತ್ತಿದ್ದಾರೆ. ಸರ್ಕಾರ ಶೀಘ್ರ ಇತ್ತ ಗಮನಹರಿಸಬೇಕು.
–ಹನುಮಾನದಾಸ ಮುಂದಡಾ, ಅಧ್ಯಕ್ಷ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ

Post Comments (+)