ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಪುರ ಜಲಾಶಯದಿಂದ ನದಿಗೆ ನೀರು: ಜಮೀನುಗಳು ಜಲಾವೃತ

Last Updated 18 ಆಗಸ್ಟ್ 2020, 16:20 IST
ಅಕ್ಷರ ಗಾತ್ರ

ಸುರಪುರ: ನಾರಾಯಣಪುರ ಜಲಾಶಯದಿಂದ ಮಂಗಳವಾರ 2.54 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಿರುವುದರಿಂದ ನದಿ ತೀರದ ಜಮೀನುಗಳು ಜಲಾವೃತವಾಗಿವೆ.

ನದಿ ಪಾತ್ರದ ಗ್ರಾಮಗಳ ಸುಮಾರು 500 ಹೆಕ್ಟೇರ್‌ಗಿಂತಲೂ ಹೆಚ್ಚಿನ ಜಮೀನುಗಳಿಗೆ ನೀರು ನುಗ್ಗಿದೆ. ಬೆಳೆಗಳು ಜಲಾವೃತವಾಗಿದ್ದು, ರೈತರು ಹಾನಿಯ ಭೀತಿ ಎದುರಿಸುತ್ತಿದ್ದಾರೆ.

ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದು, ಬೆಳೆಗಳಿಗೆ ಎರಡು ಬಾರಿ ಗೊಬ್ಬರಗಳನ್ನು ಹಾಕಿದ್ದರು. ಕಳೆದ ವರ್ಷದ ಪ್ರವಾಹದ ಹೊಡೆತ ಸುಧಾರಿಸಿಕೊಳ್ಳುವ ಮುನ್ನವೇ ಮತ್ತೊಂದು ಪ್ರವಾಹದ ಅಘಾತ ಎದುರಾಗಿದೆ. ಇದು ರೈತರ ಗಾಯದ ಮೇಲೆ ಉಪ್ಪು ಸವರಿಂದಂತಾಗಿದೆ.

‘ಕಳೆದ ಬಾರಿ ಬೆಳೆ ಸೇರಿದಂತೆ ಮನೆ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದವು. ಈ ವರ್ಷವೂ ನದಿಯ ನೀರಿನ ಹರಿಯುವ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತದೆ. ದೇವರು ಕಷ್ಟದ ಮೇಲೆ ಕಷ್ಟ ನೀಡುತ್ತಿದ್ದಾನೆ’ ಎಂದು ನದಿ ತೀರದ ಗ್ರಾಮದ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಶೆಳ್ಳಗಿ, ಮುಷ್ಠಳ್ಳಿ, ಕಾಗರಹಾಳ, ದೇವಾಪುರ, ಹಾವಿನಾಳ, ಹೆಮನೂರು, ಚೌಡೇಶ್ವರಿಹಾಳ ಸೇರಿದಂತೆ ಕೆಲ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದು, ಭತ್ತದ ಗದ್ದೆಗಳು, ಹತ್ತಿ, ತೊಗರಿ ಬೆಳೆಗಳು ನೀರಿನಲ್ಲಿ ನಿಂತಿವೆ.

ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕು. ನದಿಗೆ ಅಧಿಕ ಪ್ರಮಾಣದಲ್ಲಿರುವ ನೀರನ್ನು ಹರಿಬಿಡುತ್ತಿರುವುದರಿಂದ ನದಿಯ ಹತ್ತಿರ ಯಾರೂ ಕೂಡ ಹೋಗಬಾರದು ಎಂದು ಆಯ ಪಂಚಾಯತಿಯವರು ಡಂಗೂರ ಸಾರಿದ್ದಾರೆ.

ನದಿಯ ಮೇಲ್ದಂಡೆಯ ಭಾಗದಲ್ಲಿರುವ ಜಮೀನುಗಳಿಗೆ ನೀರು ನುಗ್ಗುತ್ತದೆ. ಮೋಟಾರ್‌ಗಳನ್ನು ಎತ್ತುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

***

ಕಳೆದ ಬಾರಿ ಬಂದ ಪ್ರವಾಹದಿಂದ ಸುಧಾರಿಸಿಕೊಳ್ಳುವ ಮುನ್ನವೆ ಮತ್ತೊಂದು ಪ್ರವಾಹ ಎದುರಾಗಿದೆ. ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು
- ಮಲ್ಲಿಕಾರ್ಜುನ ಸತ್ಯಂಪೇಟೆ, ರಾಜ್ಯ ಘಟಕದ ಕಾರ್ಯದರ್ಶಿ ರೈತ ಸಂಘ

***

ನೀರು ನುಗ್ಗಿರುವ ಗ್ರಾಮಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಕಳುಹಿಸಿಕೊಡಲಾಗಿದೆ. ಬೆಳೆ ಹಾನಿ ವರದಿ ಸರ್ಕಾರಕ್ಕೆ ಸಲ್ಲಿಸಿ, ರೈತರಿಗೆ ನೆರವು ಒದಗಿಸಿಕೊಡಲಾಗುವುದು
- ನಿಂಗಣ್ಣ ಬಿರಾದಾರ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT