ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡ್ಲೂರು | ಹದಗೆಟ್ಟ ರಸ್ತೆ, ಚರಂಡಿ: ರೋಗಗಳ ಭೀತಿ

ಕೂಡ್ಲೂರು ಗ್ರಾಮದಲ್ಲಿಯೇ ಹಲವಾರು ಸಮಸ್ಯೆ
ಮಲ್ಲಿಕಾರ್ಜುನ.ಬಿ ಅರಕೇರಕರ್
Published : 10 ಸೆಪ್ಟೆಂಬರ್ 2024, 5:46 IST
Last Updated : 10 ಸೆಪ್ಟೆಂಬರ್ 2024, 5:46 IST
ಫಾಲೋ ಮಾಡಿ
Comments

ಕೂಡ್ಲೂರು(ಸೈದಾಪುರ): ವಾರದಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದಲ್ಲಿನ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಚರಂಡಿ ಇಲ್ಲದೇ ಎಲ್ಲೆಂದರಲ್ಲಿ ಮಳೆ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಕಿಲ್ಲನಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೂಡ್ಲೂರು ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಓಣಿಯಲ್ಲಿ ವಾಸ ಮಾಡುವ ಎಪ್ಪತ್ತಕ್ಕೂ ಅಧಿಕ ಕುಟುಂಬಗಳ ಜನರಿಗೆ ಓಡಾಡಲು ಉತ್ತಮ ರಸ್ತೆ, ಚರಂಡಿ ಇಲ್ಲ. ನಿತ್ಯ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುವಂತಾಗಿದೆ. ಬಡ ಜನರ ಅನುಕೂಲಕ್ಕಾಗಿ ಆಶ್ರಯ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಿದ ಸರ್ಕಾರ ಇಲ್ಲಿನ ಜನರಿಗೆ ಮೂಲ ಸೌಕರ್ಯ ಒದಗಿಸುವುದನ್ನೇ ಮರೆತಂತಿದೆ.

ಗ್ರಾ.ಪಂ ಅಧ್ಯಕ್ಷರ ಸ್ವಗ್ರಾಮದಲ್ಲಿಯೇ ಹತ್ತಾರು ಸಮಸ್ಯೆಗಳು: ಗ್ರಾಮದಲ್ಲಿ ಅಧ್ಯಕ್ಷ ಸೇರಿದಂತೆ ಆರು ಜನ ಸದಸ್ಯರಿದ್ದಾರೆ. ಅಧ್ಯಕ್ಷರ ಸ್ವಗ್ರಾಮದಲ್ಲಿಯೇ ಹತ್ತಾರು ಸಮಸ್ಯೆಗಳು ಕಾಡುತ್ತಿದ್ದರೂ ಜನಪ್ರತಿನಿಧಿಗಳಿಗೆ ಜನರ ಮೇಲೆ ಕಾಳಜಿ ಇಲ್ಲದಂತಾಗಿದೆ. ಗ್ರಾಮದ ಸರ್ಕಾರಿ ಓಣಿಯಲ್ಲಿ ಎರಡು ದಶಕಗಳಿಂದ ಸ್ವಚ್ಛತೆ ಎನ್ನುವುದು ಗಗನ ಕುಸುಮವಾಗಿದೆ. ಶುದ್ಧ ಕುಡಿಯುವ ನೀರು, ಚರಂಡಿ, ರಸ್ತೆಗಳು ನಿರ್ಮಿಸದ ಕಾರಣ ಮನೆಯಂಗಳಕ್ಕೆ ಕೊಳಚೆ ನೀರು ಹರಿದು ಬರುತ್ತಿವೆ ಎಂದು ತಿಮ್ಮಪ್ಪ ಗೋಪಾಳಿ ಅಳಲು ತೋಡಿಕೊಂಡರು.

’ಕಲುಷಿತ ವಾತಾವರಣದಿಂದಾಗಿ ಸೊಳ್ಳೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಕಾಲರ, ಟೈಫಾಯಿಡ್, ಮಲೇರಿಯಾ, ಡೆಂಗಿಯಿಂದ ಬಳಲುತ್ತಿದ್ದಾರೆ. ನಿತ್ಯ ಕೊಳಚೆ ನೀರಿನ ದುರ್ವಾಸನೆಯಿಂದಾಗಿ ಮೂಗಿಗೆ ಬಟ್ಟೆಕಟ್ಟಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳೀಯ ನಿವಾಸಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದಳು.

’ಕೆಸರು ಮಯವಾದ ಮಣ್ಣಿನ ರಸ್ತೆಯಲ್ಲಿ ಆಟೊ, ದ್ವಿಚಕ್ರ ಸಾಗಬೇಕಿದೆ. ವಯೋವೃದ್ಧರು, ಚಿಕ್ಕ ಮಕ್ಕಳು, ಕೃಷಿ ಚಟುವಟಿಕೆಗಳಿಗೆ ಹೋಗುವ ಮಹಿಳೆಯರು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಎದ್ದು ಬಿದ್ದು ಹೋಗುತ್ತ ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದು ತಮ್ಮ ರತ್ನಮ್ಮ ಕಷ್ಟ ಹೇಳಿಕೊಂಡರು.

ಕುಡಿಯಲು ಶುದ್ಧ ನೀರಿಲ್ಲ: ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದ ಓಣಿಯಲ್ಲಿ ನಿರ್ಮಿಸಿದ ಶುದ್ಧ ನೀರಿನ ಘಟಕ ಬಹಳ ವರ್ಷಗಳಿಂದ ಕೆಟ್ಟು, ಕುರಿಗಳು ಮಲಗುವ ಅಡ್ಡವಾಗಿದೆ. ಗ್ರಾಮದಲ್ಲಿನ ಹಲವು ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ಪಿಡಿಒ ಮತ್ತು ಅಧ್ಯಕ್ಷರ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

’ಸ್ವಗ್ರಾಮದ ಅಧ್ಯಕ್ಷರಿಗೆ ನಿತ್ಯ ಸಮಸ್ಯೆಗಳು ಕಂಡರೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ನಿತ್ಯ ಜೀವನ ಸಾಗಿಸುವಂತಾಗಿದೆ’ ಎಂದು ದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸೈದಾಪುರ ಸಮೀಪದ ಕೂಡ್ಲೂರು ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದ ಓಣಿಯಲ್ಲಿ ಕೆಸರುಗದ್ದೆಯಾದ ರಸ್ತೆ. 
ಸೈದಾಪುರ ಸಮೀಪದ ಕೂಡ್ಲೂರು ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದ ಓಣಿಯಲ್ಲಿ ಕೆಸರುಗದ್ದೆಯಾದ ರಸ್ತೆ. 
ಸೈದಾಪುರ ಸಮೀಪದ ಕೂಡ್ಲೂರು ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದ ಓಣಿಯಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿರುವುದು.
ಸೈದಾಪುರ ಸಮೀಪದ ಕೂಡ್ಲೂರು ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದ ಓಣಿಯಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿರುವುದು.
ಸಂತೋಷ ನಾಯಕ ಸ್ಥಳೀಯ ನಿವಾಸಿ
ಸಂತೋಷ ನಾಯಕ ಸ್ಥಳೀಯ ನಿವಾಸಿ
ಹಣಮರೆಡ್ಡಿ ಸ್ಥಳೀಯ ನಿವಾಸಿ
ಹಣಮರೆಡ್ಡಿ ಸ್ಥಳೀಯ ನಿವಾಸಿ

ಜನಪ್ರತಿನಿಧಿಗಳು ನಮ್ಮ ಓಣಿಯಲ್ಲಿ ಇದುವರೆಗೆ ಯಾವುದೇ ಕಾಮಗಾರಿ ಮಾಡಿಲ್ಲ. ಆದರೂ ಬಿಲ್ ಮಾತ್ರ ಎತ್ತಿದ್ದಾರೆ. ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ. ಗ್ರಾಮದವರೇ ಅಧ್ಯಕ್ಷರಾದರೂ ನಮಗೆ ಉಪಯೋಗವಿಲ್ಲದಂತಾಗಿದೆ.

– ಸಂತೋಷ ನಾಯಕ ಸ್ಥಳೀಯ ನಿವಾಸಿ

ಜನರ ಅಭಿವೃದ್ಧಿಗೆ ಬೇಕಾದ ಮೂಲ ಸೌಕರ್ಯ ಒದಗಿಸಿಲ್ಲ ಎನ್ನುವುದು ನಮ್ಮ ದುರದೃಷ್ಟ.

–ಹಣಮರೆಡ್ಡಿ ಸ್ಥಳೀಯ ನಿವಾಸಿ

ಶೀಘ್ರದಲ್ಲೇ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ

–ಶೀಲಾ ಪಿಡಿಒ ಕಿಲ್ಲನಕೇರಾ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT