ಶುಕ್ರವಾರ, ಫೆಬ್ರವರಿ 26, 2021
25 °C
ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್‌ ಹಿರೇಮನಿ ತರಾಟೆ

ಒಬ್ಬ ಪೌರಕಾರ್ಮಿಕರಿಗೂ ಸಿಗದ ಸಾಲಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಯಾದಗಿರಿ:‘ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುವ ಪೌರಕಾರ್ಮಿಕರಿಗೆ ಹಾಗೂ ಅವರ ಅವಲಂಬಿತ ಒಬ್ಬರಿಗೂ ಸಾಲಸೌಲಭ್ಯ ಕಲ್ಪಿಸದಿರುವ ಸಂಗತಿ ತಿಳಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್‌ ಹಿರೇಮನಿ ಗುರುವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವಸಂತಕುಮಾರ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

‘ನಿಗಮ ಪೌರಕಾರ್ಮಿಕರಿಗೆ ಸಾಲಸೌಲಭ್ಯ ಕಲ್ಪಿಸಿಲ್ಲ. ಬಡ ಪೌರಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಇರುವುದಿಲ್ಲ. ಸ್ವತಃ ಅಧಿಕಾರಿಗಳೇ ಈ ಕುರಿತು ಪ್ರಚಾರ ಕೈಗೊಂಡು ಜನರಿಗೆ ಸೌಲಭ್ಯ ಕಲ್ಪಿಸಬೇಕು. ಅದು ಅಧಿಕಾರಿಗಳ ಜವಾಬ್ದಾರಿ. ಆದರೆ, ಅತ್ಯಂತ ಹಿಂದುಳಿದ ಯಾದಗಿರಿ ಜಿಲ್ಲೆಯಾಗಿ ಒಂಬತ್ತು ವರ್ಷಗಳು ಗತಿಸಿದರೂ, ಒಬ್ಬ ಪೌರಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿಲ್ಲ’ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು.

ಈ ಕುರಿತು ನಿಗಮದಲ್ಲಿ ಸಾಲಸೌಲಭ್ಯದ ಗುರಿ ನಿಗದಿಯಾಗಿಲ್ಲ. ಯಾವುದೇ ಅನುದಾನ ಕೂಡ ಇಲ್ಲ ಎಂಬುದಾಗಿ ನಿಗಮದ ವ್ಯವಸ್ಥಾಪಕರು ಉತ್ತರಿಸಿದರು. ಅಧಿಕಾರಿಯ ಉತ್ತರ ಕೇಳಿದ ಜಗದೀಶ್ ಹಿರೇಮನಿ,‘ರಾಜ್ಯದ ಉಳಿದ ಜಿಲ್ಲೆಗಳಿಗೆ ಈ ಕುರಿತು ರಾಜ್ಯ ಸರ್ಕಾರ ನಿಗದಿತ ಅನುದಾನ ಮತ್ತು ಗುರಿ ನೀಡಿದೆ. ಹಿಂದುಳಿದ ಜಿಲ್ಲೆಗೆ ನೀಡಿಲ್ಲವೇ. ನಿಮಗೆ ಸೂಕ್ತ ಮಾಹಿತಿ ಇದ್ದಂತಿಲ್ಲ. ನಿಮ್ಮಂತಹವರನ್ನು ಅಮಾನತು ಮಾಡಬೇಕು’ ಎಂದು ಅವರು, ಕೂಡಲೇ ಇವರಿಗೆ ನೋಟಿಸ್‌ ನೀಡುವಂತೆ ಜಿಲ್ಲಾಧಿಕಾರಿಕಾರಿಗೆ ಸೂಚಿಸಿದರು.

ಇದರಿಂದ ಮತ್ತಷ್ಟೂ ಒತ್ತಡಕ್ಕೆ ಸಿಲುಕಿದಂತಾದ ವಸಂತಕುಮಾರ್,‘ಸರ್‌, ನಾನು ಐದು ನಿಗಮಗಳಿಗೆ ಪ್ರಭಾರ ಇದ್ದೇನೆ. ಸಿಬ್ಬಂದಿ ಕೊರತೆ ಇದೆ. ಕಾಯಂ ಸಿಬ್ಬಂದಿ ಒಬ್ಬರೂ ಇಲ್ಲ. ಇವತ್ತು ಪೈಪ್‌ ಮತ್ತು ಪಂಪ್‌ಸೆಟ್‌ ವಿತರಣೆ ಇತ್ತು. ಹಾಗಾಗಿ, ಅತ್ತ ಹೋಗಿದ್ದೆ’ ಎಂದು ಅಲವತ್ತುಕೊಂಡರು.

ಮಧ್ಯೆ ಧ್ವನಿಗೂಡಿಸಿದ ಉಪ ವಿಭಾಗಾಧಿಕಾರಿ ಬಿ.ಎಸ್.ಮಂಜುನಾಥ್,‘ಹಿರಿಯ ಅಧಿಕಾರಿಗಳು ನೀವು ಸಿಗುವುದಿಲ್ಲ. ಈ ಕುರಿತು ಮೂರು ನೋಟಿಸ್‌ ನೀಡಲಾಗಿದೆ. ಆದರೂ, ನಿಗಮದ ವ್ಯವಸ್ಥಾಪಕರು ಕಾರ್ಯವೈಖರಿ ಬದಲಿಸಿಕೊಂಡಿಲ್ಲ’ ಎಂದು ಆಯೋಗದ ಸದಸ್ಯರಿಗೆ ದೂರಿದರು.

‘ಸೋಮಾರಿತನ ಹೊಂದಿರುವ ಅಧಿಕಾರಿಗಳಿಂದಲೇ ಸರ್ಕಾರದ ವಿರುದ್ಧ ಜನರು ಶಾಪ ಹಾಕುತ್ತಿದ್ದಾರೆ. ಸರ್ಕಾರ ಸೌಲಭ್ಯ ಒದಗಿಸಿದ್ದರೂ, ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣವಾಗಿದೆ. ಭಾರತ ಸರ್ಕಾರ ನನಗೆ ಅಮಾನತು ಅಧಿಕಾರ ನೀಡಿದೆ. ಇನ್ನು ಮುಂದೆ ಅಧಿಕಾರಿಗಳು ಕರ್ತವ್ಯ ಬದ್ಧತೆ ತೋರಿಸದಿದ್ದರೆ ಮುಲಾಜಿಲ್ಲದೇ ಅಮಾನತುಗೊಳಿಸುತ್ತೇನೆ’ ಎಂದು ಜಗದೀಶ್‌ ಹಿರೇಮನಿ ಎಚ್ಚರಿಸಿದರು.

‘ಯುಜಿಡಿ ಅಭಿವೃದ್ಧಿ ಏಕಿಲ್ಲ? ಯುಜಿಡಿ ವ್ಯವಸ್ಥೆ ಇಲ್ಲ ರಾಜ್ಯದ ಏಕೈಕ ಜಿಲ್ಲೆ ಇದು. ಒಳ ಚರಂಡಿ ವ್ಯವಸ್ಥೆ ಇದ್ದರೆ ಮಾತ್ರ ಅರ್ಧ ಸಮಸ್ಯೆಗಳು ನೀಗಿದಂತೆ. ಸರ್ಕಾರ ಇಂಥಾ ಸೌಲಭ್ಯಗಳಿಗೆ ಹಣಕಾಸು ಒದಗಿಸಿದ್ದರೂ ಅನುಷ್ಠಾನ ಏಕಿಲ್ಲ?’ ಎಂದು ಆಯೋಗದ ಸದಸ್ಯರು ಬೇಸರ ವ್ಯಕ್ತಪಡಿಸಿದರು.

‘ಯುಜಿಡಿ ಕಾಮಗಾರಿ ಅನುಷ್ಠಾನಗೊಂಡು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಪೂರ್ಣಗೊಂಡಿಲ್ಲ. ಕ್ರಿಯಾಯೋಜನೆ ಕೂಡ ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಗುತ್ತಿಗೆದಾರರ ವಿರುದ್ಧ ನ್ಯಾಯಾಲಯದಲ್ಲಿ ದೂರು ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ’ ಎಂದು ಯಾದಗಿರಿ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಸಭೆಗೆ ಮಾಹಿತಿ ನೀಡಿದರು.

ತೆರೆದ ಶೌಚಾಲಯ ನೆಲಸಮಕ್ಕೆ ಸೂಚನೆ: ಯಾದಗಿರಿಯ 7ನೇ ವಾರ್ಡಿನಲ್ಲಿ ಹಾಗೂ ನಗರದಲ್ಲಿ ನಿರ್ಮಿಸಿರುವ ತೆರೆದ ಶೌಚಾಲಯಗಳನ್ನು ನೆಲಸಮಗೊಳಿಸುವಂತೆ ಆಯೋಗದ ಸದಸ್ಯ ಜಗದೀಶ್‌ ಹಿರೇಮನಿ ಪೌರಾಯುಕ್ತರಿಗೆ ಆದೇಶಿಸಿದರು.

‘ತೆರೆದ ಶೌಚಾಲಯ ನಿರ್ಮಿಸುವಂತಿಲ್ಲ ಎಂಬುದಾಗಿ ಕೇಂದ್ರ ಸರ್ಕಾರದ ನಿರ್ದೇಶನ ಇದ್ದರೂ, ಏಕೆ ನಿರ್ಮಿಸಲಾಗಿದೆ’ ಎಂದು ಪ್ರಶ್ನಿಸಿದರು. ‘ಕೂಡಲೇ ನೆಲಸಮಗೊಳಿಸಿ ವೈಜ್ಞಾನಿಕ ರೀತಿಯಲ್ಲಿ ಶೌಚಾಲಯ ನಿರ್ಮಾಣಗೊಳಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಉಪ ವಿಭಾಗಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಅಲ್ಲಾಭಕ್ಷ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ವಿಶ್ವನಾಥ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು