ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣ: ದೇಗುಲಗಳಲ್ಲಿ ವಿಶೇಷ ಪೂಜೆ: ಭಕ್ತಿ ಪರಾಕಾಷ್ಟೆ ಮೆರೆದ ಭಕ್ತರು

ಕಡೆ ಶ್ರಾವಣ ಸೋಮವಾರ, ಬೆನಕನ ಅಮಾವಾಸ್ಯೆ
Last Updated 7 ಸೆಪ್ಟೆಂಬರ್ 2021, 3:46 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಕಡೆ ಶ್ರಾವಣ ಸೋಮವಾರದ ಅಂಗವಾಗಿ ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ಎಲ್ಲಾ ಮಾಸಗಳಲ್ಲಿ ಶ್ರಾವಣ ಮಾಸವು ಅತ್ಯಂತ ಶ್ರೇಷ್ಠ ಮಾಸ ಎಂಬ ಪ್ರತೀತಿ ಇದೆ. ಶ್ರಾವಣದ ಪ್ರತಿ ಸೋಮವಾರವು ದೈವಾರಾಧನೆಗೆ ವಿಶೇಷವಾಗಿ ಶಿವಾರಾಧನೆಗೆ ಪ್ರಶಸ್ತ್ಯವಾದ ದಿನವಾಗಿದೆ. ಹೀಗಾಗಿ ದೇವಸ್ಥಾನಗಳಿಗೆ ತೆರಳಿದ ಭಕ್ತರು ತಮ್ಮ ಹರಿಕೆಗಳನ್ನು ತೀರಿಸಿದರು.

ಕಾಯಿ, ಕರ್ಪೂರ, ಹೂ ಅರ್ಪಿಸಿದ ಭಕ್ತರು ದೇವರಿಗೆ ನಮಿಸಿದರು. ಶ್ರಾವಣ ಮಾಸದ ಕೊನೆಯ ಸೋಮವಾರ ಮತ್ತು ಬೆನಕನ ಅಮಾವಾಸ್ಯೆ ಎರಡೂ ಇರುವುದರಿಂದ ಜಿಲ್ಲಾದ್ಯಂತ ಭಕ್ತರು ತಮ್ಮ ಇಷ್ಟದ ದೇವಸ್ಥಾನಗಳಿಗೆ ತೆರಳಿ ಪೂಜೆ ಪ್ರಾರ್ಥನೆ ಸಲ್ಲಿಸುವುದು ಕಂಡುಬಂದಿತು.

ಭಕ್ತರ ಪಾದಯಾತ್ರೆ: ಶ್ರಾವಣದ ಅಂಗವಾಗಿ ಭಕ್ತರು ದೇವಸ್ಥಾನಗಳಿಗೆ ಪಾದಯಾತ್ರೆ ಮೂಲಕ ತೆರಳಿ ಹರಿಕೆ ತೀರಿಸಿದರು.

ತಾಲ್ಲೂಕಿನ ಮೈಲಾಪುರದ ಮಲ್ಲಯ್ಯ ದೇವಸ್ಥಾನ, ಗುರುಮಠಕಲ್ ಗಡಿಭಾಗದ ಇಡ್ಲೂರು ಶಂಕರಲಿಂಗೇಶ್ವರ, ಕಾಳೆಬೆಳಗುಂದಿ ಬನದೇಶ್ವರ, ಗವಿಸಿದ್ಧಲಿಂಗೇಶ್ವರ ದೇವಸ್ಥಾನ ಮತ್ತು ಕೊಡೇಕಲ್ಲ ಬಸವಣ್ಣ, ಲಕ್ಷ್ಮಿಪುರದ ಮಲ್ಲಿಕಾರ್ಜುನ ಗುಡ್ಡ, ತಿಂಥಣಿ ಮೌನೇಶ್ವರ ದೇವಸ್ಥಾನ ಮುಂತಾದ ದೇವಾಲಯಗಳಲ್ಲಿ ಅಸಂಖ್ಯಾತ ಭಕ್ತರು ಜಮಾವಣೆಗೊಂಡು ದೇವರ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದು ಕಂಡುಬಂದಿತು. ಬೆಳ್ಳಂ ಬೆಳಿಗ್ಗೆ ವಿಜಯಪುರ–ಯಾದಗಿರಿ ರಾಜ್ಯ ಹೆದ್ದಾರಿಯ ಮೂಲಕ ಭಕ್ತರು ಪಾದಯಾತ್ರೆಯ ಮೂಲಕ ಮೈಲಾಪುರದ ಮಲ್ಲಯ್ಯನ ಕ್ಷೇತ್ರಕ್ಕೆ ತೆರಳುತ್ತಿರುವುದು ಕಂಡುಬಂದಿತು.

ಮೆಟ್ಟಿಲು ಬಳಿ ಪೂಜೆ: ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನದ ಹೊರಗಡೆ ಭಕ್ತರು ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ಕೋವಿಡ್‌ ಕಾರಣದಿಂದ ದೇವಸ್ಥಾನದ ಒಳಗಡೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಇದರಿಂದ ದೇವಸ್ಥಾನದ ಗೇಟ್ ಬಳಿಯೇ ಭಕ್ತರು ಕಾಯಿ ಕರ್ಪೂರ ಅರ್ಪಿಸಿದರು.

ಇಡ್ಲೂರುನಲ್ಲಿ ಪಲ್ಲಕ್ಕಿ ಸೇವಾ: ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ತ ಬೆಳಿಗ್ಗೆ ಶಂಕರಲಿಂಗೇಶ್ವರ ಮಹಾಲಿಂಗಕ್ಕೆ ಮಹಾರುದ್ರಾಭಿಷೇಕ ನಡೆಯಿತು. ನಂತರ ಇಡ್ಲೂರು ಗ್ರಾಮದಿಂದ ದೇವರ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಯು ದೇವಸ್ಥಾನಕ್ಕೆ ಆಗಮಿಸಿ ಪ್ರದಕ್ಷಿಣೆ ಹಾಕಿ ದೇವರನ್ನು ಮೂಲ ಸ್ಥಾನದಲ್ಲಿರಿಸಿ ಮಹಾ ಮಂಗಳಾರತಿಯನ್ನು ಮಾಡಲಾಯಿತು. ನಿರಂತರವಾಗಿ ದಾಸೋಹ ಮಂಟಪದಲ್ಲಿ ಅನ್ನ ದಾಸೋಹ ಕಾರ್ಯ ನಡೆದಿತ್ತು.

ಸಿಹಿಯೂಟ ತಯಾರಿಕೆ: ಶ್ರಾವಣ ಮಾಸದ ಅಂಗವಾಗಿ ಮನೆಗಳಲ್ಲಿ ಸಿಹಿಯೂಟ ತಯಾರಿ ಮಾಡಲಾಗಿತ್ತು. ಕೆಲವರು ದೇವಸ್ಥಾನಕ್ಕೆ ತೆರಳಿ ಶ್ರಾವಣದ ಸಿಹಿ ಊಟ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT