ಮಂಗಳವಾರ, ಮೇ 24, 2022
30 °C

ಗ್ರಾಮ ಪಂಚಾಯಿತಿ ಸದಸ್ಯರಿಗೆ ಸ್ವಾಯತ್ತತೆ: ನಳಿನ್ ಕುಮಾರ್ ಕಟೀಲ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವಿದ್ದೇವೆ. ಹೀಗಾಗಿ ಅಮೃತ ಯೋಜನೆಯಡಿ ರಾಜ್ಯದ 750 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ₹ 1 ಕೋಟಿ ಅನುದಾನ ನೀಡಲಾಗುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ವಿಧಾನ ಪರಿಷತ್ ಚುನಾವಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ನಡೆದ ಜನಸ್ವರಾಜ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ಧನ ನೀಡಲಾಗುತ್ತಿದೆ. ಇದನ್ನು ಯಡಿಯೂರಪ್ಪ ಸರ್ಕಾರ ಜಾರಿಗೆ ತಂದಿದೆ. ಮುಂದೆ ಅದನ್ನು ₹10 ಸಾವಿರಕ್ಕೆ ಹೆಚ್ಚಿಸಲಾಗುವುದು. ಇದಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. ಗ್ರಾಮ ಪಂಚಾಯಿತಿಗೆ ಸ್ವಾಯತ್ತತೆ ನೀಡಲಾಗುವುದು. ಈಗಾಗಲೇ ₹1 ಕೋಟಿ ನೀಡಲಾಗುತ್ತಿದೆ’ ಎಂದರು.

‘ಗ್ರಾಮ ಪಂಚಾಯಿತಿಗೆ ಅತಿ ಹೆಚ್ಚು ಆದ್ಯತೆ ನೀಡಿದ್ದು ಬಿಜೆಪಿ ಪಕ್ಷ. ನರೇಗಾ ಜಿಲ್ಲಾ ಪಂಚಾಯಿತಿ ಅಧೀನದಲ್ಲಿತ್ತು. ಇದನ್ನು ಗ್ರಾಮ ಪಂಚಾಯಿತಿಗೆ ವಹಿಸಿದೆ. ಸದನದಲ್ಲಿ ನಿಮ್ಮ ಸಮಸ್ಯೆಗಳ ಕುರಿತು ಧ್ವನಿ ಎತ್ತಲು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ. ಕಾಂಗ್ರೆಸ್‌ ಪಕ್ಷ ಈ ದೇಶಕ್ಕೆ ಹಸಿವು, ಬಡತನ, ನಿರುದ್ಯೋಗ, ಭ್ರಷ್ಟಾಚಾರ ಕೊಡುಗೆ ನೀಡಿದೆ. ಕಾಂಗ್ರೆಸ್‌ ಎಂದರೆ ಸುಳ್ಳು, ಮೋಸ, ವಂಚನೆಯ ಪಕ್ಷ’ ಎಂದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುದ್ಧಿವಂತ ರಾಜಕಾರಣಿ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನಡೆಸುತ್ತಿರುವ ಕಾರಣ ನಿರುದ್ಯೋಗಿ ಆಗುತ್ತೇನೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ‘ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯ 31 ಗ್ರಾಮ ಪಂಚಾಯಿತಿಗಳಲ್ಲಿ 18 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗೆ ಶೇ 70ರಷ್ಟು ಮತ ಸಿಗಲಿದೆ. ವಿಧಾನ ಪರಿಷತ್‌ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸುತ್ತೇವೆ’ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿ, ‘ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾದವರಿಗೆ ಹೆಚ್ಚಿನ ಅನುದಾನ ಇರುವುದಿಲ್ಲ. ನನ್ನ ಮಿತಿಯಲ್ಲಿ ಅನುದಾನ ಹಂಚಿಕೆ ಮಾಡಿದ್ದೇನೆ. ಪಕ್ಷ ನನಗೆ ಟಿಕೆಟ್‌ ಕೊಟ್ಟರೆ ಗೆಲ್ಲಿಸಿ’ ಎಂದು ಮನವಿ ಮಾಡಿದರು.

ಹಿಂಗಾರು ಹಂಗಾಮುಗೆ ಸಿದ್ಧತೆ ಮಾಡಿಕೊಳ್ಳಿ: ‘22ರಂದು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಯಲಿದೆ. ಹಿಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು ಚರ್ಚಿಸಲಾಗುತ್ತದೆ’ ಎಂದು ಶಾಸಕ ರಾಜೂಗೌಡ ತಿಳಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ಕಾಂಗ್ರೆಸ್‌ನವರು ಪ್ರಧಾನಿ ನರೇಂದ್ರ ಮೋದಿ ಹೆಸರು ಕೇಳಿದರೆ ನಿದ್ದೆಯಲ್ಲೂ ಹಾಸಿಗೆ ಒದ್ದೆ ಮಾಡಿಕೊಳ್ಳುತ್ತಾರೆ. ಅಷ್ಟು ಭಯ ಹುಟ್ಟಿಸಿದ್ದಾರೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಕೇಂದ್ರ ಸಚಿವ ಭಗವಂತ ಖೂಬಾ, ಕಲಬುರಗಿ ಸಂಸದ ಉಮೇಶ ಜಾಧವ, ಎನ್‌.ಮಹೇಶ ಹಾಗೂ ಈಶ್ವರ ಸಿಂಗ್ ಠಾಕೂರ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರು ನಿರೂಪಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಂಸದ ರಾಜಾ ಅಮರೇಶ್ವರ ನಾಯಕ, ಎನ್.ಮಹೇಶ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ, ಎನ್.ಮಹೇಶ, ಸಚಿವ ಹಾಲಪ್ಪ ಆಚಾರ್, ಎಂಎಲ್‌ಸಿ ಶಶೀಲ್ ನಮೋಶಿ, ಮಾಜಿ ಎಂಎಲ್‌ಸಿ ಅಮರನಾಥ್ ಪಾಟೀಲ, ಮಾಜಿ ಶಾಸಕರಾದ ಡಾ.ವೀರಬಸವಂತರಡ್ಡಿ ಮುದ್ನಾಳ, ಗುರು ಪಾಟೀಲ ಶಿರವಾಳ, ಅಮಾತೆಪ್ಪ ಕಂದಕೂರ, ಸಾಯಿಬಣ್ಣ ಬೋರಬಂಡಾ, ಈಶ್ವರ ಸಿಂಗ್ ಠಾಕೂರ, ಚಂದ್ರಶೇಖರ ಮಾಗನೂರ, ಅಮೀನರಡ್ಡಿ ಯಾಳಗಿ, ಲಲಿತಾ ಅನಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರನಾಥ ನಾದ, ನಗರ ಮಂಡಲ ಅಧ್ಯಕ್ಷ ಸುರೇಶ ಅಂಬಿಗೇರ್, ಹಣಮಂತ ಇಟಗಿ, ಎಂ.ಕೆ.ಬೀರನೂರ, ಸಿದ್ರಾಮರಡ್ಡಿ ಬಲಕಲ್, ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ರಮೇಶ್ ದೊಡಮನಿ ಎಲ್ಲಾ ಮೋರ್ಚಾ ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರು, ಕಾರ್ಯಕರ್ತರು ಇದ್ದರು.

'ಕಾಂಗ್ರೆಸ್‌ ಶಾಪಗ್ರಸ್ತ ಪಕ್ಷ'

ಯಾದಗಿರಿ: ‘ಕಾಂಗ್ರೆಸ್‌ ಪಕ್ಷಕ್ಕೆ ಮೂರು ಶಾಪಗಳು ತಟ್ಟಿವೆ. ಇದರಿಂದ ಇದು ಶಾಪಗ್ರಸ್ತ ಪಕ್ಷವಾಗಿದೆ’ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್‌ ಅವರು ಹೇಳಿದರು.

ಜನಸ್ವರಾಜ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷಕ್ಕೆ ರಾಷ್ಟ್ರಪಿತ ಮಹತ್ಮಾ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌, ಗೋ ಮಾತೆ ಶಾಪ ತಟ್ಟಿದೆ. ಸ್ವಾಂತಂತ್ರ್ಯ ನಂತರ ಕಾಂಗ್ರೆಸ್‌ ವಿಸರ್ಜನೆ ಮಾಡಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ರಾಮರಾಜ್ಯ ಆಡಳಿತ ನೀಡುವಂತೆ ಸಲಹೆ ನೀಡಿದ್ದರೂ ಕಾಂಗ್ರೆಸ್‌ ಕೇಳಲಿಲ್ಲ. ಮತ್ತೊಂದು ಅಂಬೇಡ್ಕರ್‌ ಅವರ ಶಾಪ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಪಕ್ಷ ಅವಮಾನ ಮಾಡಿದೆ. ಅವರ ಶವ ಹೂಳಲು ದೆಹಲಿಯಲ್ಲಿ ಜಾಗ ನೀಡಲಿಲ್ಲ. ಮೂರನೇಯದಾಗಿ ಗೋ ಹಂತಕರ ಪರವಾಗಿ ನಿಂತಿರುವುದರಿಂದ ಗೋ ಮಾತೆಯ ಶಾಪ ತಟ್ಟಿದೆ. ಮೊದಲು ಕಾಂಗ್ರೆಸ್‌ನ ಚಿಹ್ನೆ ಗೋವು ಮತ್ತು ಕರ ಆಗಿತ್ತು. ಆದರೆ, ಅದನ್ನು ಮರೆಮಾಚಿ ಗೋ ಹಂತಕರಿಗೆ ನೆರವು ನೀಡುತ್ತಿದೆ’ ಎಂದು ಆರೋಪಿಸಿದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಎರಡು ಹೋಳು ಆಗಲಿದೆ. ಈಗಾಗಲೇ ಎರಡು ಗುಂಪುಗಳಿದ್ದು, ಮುಂದಿನ ದಿನಗಳಲ್ಲಿ ಪತನವಾಗಲಿದೆ. ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದಂತೆ ಮುಂದಿನ ಬಾರಿ ಪ್ರಿಯಾಂಕ್‌ ಖರ್ಗೆ ಅವರನ್ನು ಸೋಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

‘ಶ್ರೀಕಿಯನ್ನು ಬೆಳಸಿದ್ದೇ ಕಾಂಗ್ರೆಸ್‌’

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ಬಿಟ್‌ ಕಾಯಿನ್‌ ಎನ್ನುವುದು ನೋಟಿನ ಕಂತೆ ಅಲ್ಲ. ಎತ್ತಿ ಕೊಡಲು ಬರುವುದಿಲ್ಲ. ಅದು ಕನ್ನಡಿಯೊಳಗಿನ ಗಂಟು. ಈ ಬಗ್ಗೆ ತಿಳಿಯದವರು ಏನೇನೊ ಮಾತನಾಡುತ್ತಾರೆ. ಶ್ರೀಕಿ ಒಬ್ಬ ಅಂತರರಾಷ್ಟ್ರ ಹ್ಯಾಕರ್‌ ಆತನನ್ನು ಬೆಳೆಸಿದ್ದೆ ಕಾಂಗ್ರೆಸ್‌. ಸ್ಟಾರ್‌ ಹೋಟೆಲ್‌ಗಳಲ್ಲಿಟ್ಟು ಆತನನ್ನು ಬಳಕೆ ಮಾಡಿಕೊಂಡಿದೆ. ಡಾರ್ಕ್‌ ವೆಬ್‌ ಮೂಲಕ ಡ್ರಗ್‌ ಪೂರೈಕೆ ಮಾಡುತ್ತಿದ್ದ.

ಕಾಂಗ್ರೆಸ್‌ ನಮ್ಮ ರಾಜ್ಯದ ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದೆ. ಬೆಂಗಳೂರಿನ ಯುಬಿ ಸಿಟಿಯಲ್ಲಿ ಹ್ಯಾಕರ್‌ ಸಿಕ್ಕಿ ಹಾಕಿಕೊಂಡಿದ್ದರು. ಗಲಾಟೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದವನನ್ನು ಜಾಮೀನು ಕೊಟ್ಟು ಕಳಿಸಿದ್ದು ಕಾಂಗ್ರೆಸ್‌ ಸರ್ಕಾರ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ನಾಯಕರ ಮಕ್ಕಳ ಜೊತೆಗೆ ಶ್ರೀಕಿ ಸಂಬಂಧ ಹೊಂದಿದ್ದು, ಡ್ರಗ್‌ ಪೂರೈಕೆ ಮಾಡುತ್ತಿದ್ದ. ಗೋವಾದಿಂದ ನಮ್ಮ ಪೊಲೀಸರು ಎಳೆದು ತಂದಿದ್ದಾರೆ. ವಿಡಿಯೊ ರೆಕಾರ್ಡ್‌ ಮಾಡಲಾಗಿದೆ. ಎಲ್ಲಿ ಕಾಂಗ್ರೆಸ್‌ ನಾಯಕರ ಬಣ್ಣ ಬಯಲು ಆಗುತ್ತದೆ ಎಂದು ಪೊಲೀಸರ ಒಳ್ಳೆ ಕೆಲಸವನ್ನು ಟೀಕಿಸುತ್ತಿದ್ದಾರೆ’ ಎಂದರು.

‘ಕೆಪಿಸಿಸಿ ಅಧ್ಯಕ್ಷರಿಗೆ ಜಲಿಯನ್‌ ವಾಲಿಬಾಗ್‌ ಎಂದು ಹೇಳಲು ಬರುವುದಿಲ್ಲ. ಯೂಥ್‌ ಕಾಂಗ್ರೆಸ್‌ ಆನ್‌ಲೈನ್‌ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರಿಗೆ ನನಗೆ ದೂರು ನೀಡಿದ್ದಾರೆ’ ಎಂದರು.

‘ಕಾಂಗ್ರೆಸ್ ಮುಖಂಡರಿಗೆ ಬುದ್ಧಿ ಭ್ರಮಣೆ: ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿ’

ಯಾದಗಿರಿ: ರಾಜ್ಯದ ಕೆಲ ಕಾಂಗ್ರೆಸ್ ಮುಖಂಡರಿಗೆ ಬುದ್ಧಿ ಭ್ರಮಣೆಯಾಗಿದೆ. ಕೋವಿಡ್‌ ಲಸಿಕೆಗೆ ಉಚಿತವಾಗಿ ನೀಡಿದಂತೆ ಕಾಂಗ್ರೆಸ್‌ನವರಿಗೆ ಚಿಕಿತ್ಸೆ ನೀಡಬೇಕು. ಸರ್ಕಾರವೇ ಚಿಕಿತ್ಸೆ ಹಣವನ್ನು ಭರಿಸಬೇಕು’ ಎಂದು ಶಾಸಕ ರಾಜೂಗೌಡ ವ್ಯಂಗ್ಯವಾಡಿದರು.

‘ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುಚ್ಚು ಹಿಡಿದಿದೆ ಎನ್ನುತ್ತಾರೆ. ಭ್ರಷ್ಟಾಚಾರದಿಂದ ಇಡಿ ತನಿಖೆಗೆ ಒಳಪಟ್ಟಿದ್ದಾರೆ. ಜೈಲಿಗೆ ಹೋಗಿ ಬಂದಿದ್ದಾರೆ. ಹೀಗಾಗಿ ಅವರಿಗೆ ಹುಚ್ಚು ಹಿಡಿದಿದೆ. ಕಾಂಗ್ರೆಸ್‌ಗೆ ಎರಡು ನಾಲಿಗೆ ಇದೆ. ಹೀಗಾಗಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುತ್ತೇವೆ’ ಎಂದರು.

‘ಮಾಧ್ಯಮಗಳಲ್ಲಿ ಹಿರೋ ಆಗಲು ಕೆಲವರು ಏನೇನೋ ಹೇಳುತ್ತಾರೆ. ಕಾಂಗ್ರೆಸ್‌ ಕಸ ಜಮೀನಿನಲ್ಲಿ ಇದ್ದರೆ ಹಾಳುಗುತ್ತದೆಯಂತೆ. ಹೀಗಾಗಿ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಿತ್ತಿ ಹೋಗೆಯಬೇಕು. ಈ ಮೂಲಕ ಕಾಂಗ್ರೆಸ್‌ ಕಸ ಮುಕ್ತ ಮಾಡಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

‘ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ಸಂಸದ ಪ್ರತಾಪ್‌ ಸಿಂಹ ಅವರನ್ನು ಕಂಡರೆ ಕೋಪ ಇದ್ದಂತೆ ಇದೆ. ಬಿಟ್‌ ಕಾಯಿನ್‌ ಬಗ್ಗೆ ನೂರು ಸುಳ್ಳನ್ನು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‌ನವರಿಂದ ನಮಗೆ ಪ್ರಮಾಣ ಪತ್ರ ನೀಡುವುದು ಬೇಕಾಗಿಲ್ಲ. ಬಿಟ್‌ ಕಾಯಿನ್‌ ಬಗ್ಗೆ ನಿದ್ದೆಗಣ್ಣಲ್ಲೂ ಹೇಳುತ್ತಾರೆ. ದಾಖಲೆ ಬಿಡುಗಡೆ ಮಾಡುತ್ತೇನೆ ಎನ್ನುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇಕು. ಕಾಂಗ್ರೆಸ್‌ನವರು ಪುಕ್ಕಲು ಇದ್ದಾರೆ. ಡ್ರಗ್ಸ್‌ ವಿರುದ್ಧ ನಮ್ಮ ಪಕ್ಷ ಹೋರಾಟ ನಡೆಸಿದೆ. ಆರೋಪಿಗಳನ್ನು ಹಿಡಿದವರಿಗೆ ಆರೋಪ ಮಾಡಲಾಗುತ್ತಿದೆ’ ಎಂದರು.

‘ಬಿಟ್‌ ಕಾಯಿನ್‌ ಬಗ್ಗೆ ಆರೋಪ ಸಾಬೀತು ಆದರೆ ನಾವು ರಾಜಕೀಯದಿಂದ ನಿವೃತ್ತಿಯಾಗುತ್ತೇವೆ. ಸಾಬೀತು ಮಾಡಿಸದಿದ್ದರೆ ನೀವೂ ನಿವೃತ್ತಿಯಾಗುತ್ತಿರಾ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ಸವಾಲು ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು