ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರ ಸ್ಥಗಿತ: ಕಲ್ಲು ಕುಟಿಗರ ಬಾಳಿಗೆ ಉಳಿ ‘ಪೆಟ್ಟು’

ಲಾಕ್‌ಡೌನ್ ಕಾರಣ ಸಂಕಷ್ಟ; ಕೋವಿಡ್ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ
Last Updated 29 ಮೇ 2021, 19:31 IST
ಅಕ್ಷರ ಗಾತ್ರ

ಶಹಾಪುರ: ತುತ್ತಿನ ಚೀಲ ತುಂಬಿಸಿಕೊಳ್ಳಲು ನಗರಕ್ಕೆ ಆಗಮಿಸಿದ ಕಲ್ಲುಕುಟಿಗರ ನಾಲ್ಕು ಕುಟುಂಬಗಳು ಲಾಕ್‌ಡೌನ್‌ನಿಂದ ವ್ಯಾಪಾರ ನಡೆಯದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನ ವಡ್ಡರ ಸಮುದಾಯದ ಈ ಕುಟುಂಬಗಳಲ್ಲಿ ಮಕ್ಕಳು ಸೇರಿದಂತೆ ಒಟ್ಟು 25 ಜನರಿದ್ದಾರೆ. ನಾಲ್ಕು ತಿಂಗಳಿಂದ ನಗರದ ಕೆಇಬಿ ಎದುರುಗಡೆಯ ಬಯಲು ಜಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಯ ತಾತ್ಕಾಲಿಕ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಶೌಚಾಲಯ, ಸ್ನಾನಗೃಹ, ಅಡುಗೆ ಮನೆ, ವಿಶ್ರಾಂತಿ ಕೋಣೆ ಎಲ್ಲವೂ ಇವರಿಗೆ ಬಯಲೆ ಆಸರೆಯಾಗಿದೆ.

ಬೀಸುವ ಕಲ್ಲು ಸಿದ್ದಪಡಿಸಿಕೊಂಡು ಮಾರಾಟ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುವ ಈ ಕುಟುಂಬಗಳಿಗೆ ಕೊರೊನಾ ಹೊಡೆತ ನೀಡಿದೆ. ರಸ್ತೆ ಬದಿಯ ನೆಲದ ಮೇಲೆ ಕಲ್ಲುಗಳನ್ನು ಸುರಿದುಕೊಂಡು, ವಾಹನದ ಹೊಗೆ ಮತ್ತು ದೂಳಿನ ನಡುವೆ ಕಣ್ಣುಗಳನ್ನು ಕಿರಿದಾಗಿಸಿಕೊಂಡು, ಉಳಿಯ ಏಟು ಆಚೀಚೆ ಆಗದಂತೆ, ಏಕಾಗ್ರತೆಯಿಂದ ಕೆಲಸ ಮಾಡುವ ಈ ಶ್ರಮಜೀವಿಗಳ ಬದುಕು ಅತಂತ್ರಕ್ಕೆ ಸಿಲುಕಿದೆ.

ಗೃಹಪ್ರವೇಶ, ಮದುವೆ, ಜಯಂತಿ, ಹಬ್ಬಗಳ ಸಂದರ್ಭ ಬೀಸುವ ಕಲ್ಲುಗಳ ವ್ಯಾಪಾರ ಚುರುಕಾಗುತ್ತದೆ.ಆದರೆ ಈಗ ಅವೆಲ್ಲವೂ ಸ್ಥಗಿತಗೊಂಡಿದ್ದರಿಂದ ವ್ಯಾಪಾರಕ್ಕೆ ಅಡ್ಡಿಯಾಗಿದೆ.

‘ಗ್ರಾಮೀಣ ಪ್ರದೇಶಗಳಿಗೆ ತೆರಳಿ ಬೀಸುವ ಕಲ್ಲು ₹ 400ರಿಂದ ₹ 500ಗೆ ಮಾರಾಟ ಮಾಡಿ ಮತ್ತೆ ನಮ್ಮ ಊರಿಗೆ ತೆರಳುತ್ತೇವೆ. ಬೇಸಿಗೆಯ ಮೂರು ತಿಂಗಳು ಬದುಕಿಗೆ ಆಸರೆಯಾಗಿತ್ತು ಎಂದು ಆಗಮಿಸಿದ್ದೇವೆ. ಲಾಕ್‌ಡೌನ್ ಘೋಷಣೆಯಿಂದ ಬದುಕು ಮೂರಾಬಟ್ಟೆಯಾಗಿ ಬಿಟ್ಟಿದೆ. ಹಳ್ಳಿಯಲ್ಲಿ ಬೀಸುವ ಕಲ್ಲು ಯಾರು ಖರೀದಿಸುತ್ತಿಲ್ಲ. ಈಗ ಊಟಕ್ಕೂ ತೊಂದರೆ ಎದುರಿಸುವಂತೆ ಆಗಿದೆ. ತಹಶೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿ ಒಂದಿಷ್ಟು ಆಹಾರ ಧಾನ್ಯದ ಪೊಟ್ಟಣ ವಿತರಿಸಿದ್ದಾರೆ. ಅಲ್ಲದೆ ಅಮೀನರಡ್ಡಿ ಯಾಳಗಿ ಸೇವಾ ಸಮಿತಿಯಿಂದ ಮಧ್ಯಾಹ್ನ ಪಾಕೆಟ್‌ನಲ್ಲಿ ಅನ್ನ ಕೊಡುತ್ತಾರೆ. ಇದರಲ್ಲಿ ಜೀವನ ಸಾಗಿಸುತ್ತಿದ್ದೇವೆ’ ಎನ್ನುತ್ತಾರೆ ಶರಣಪ್ಪ.

‘ನಮಗೆ ಯಾರು ಕೋವಿಡ್ ಲಸಿಕೆ ಹಾಕಿಲ್ಲ. ಉಪಜೀವನಕ್ಕೆ ಅಕ್ಕಿ ನೀಡಿದರೆ ಸಾಲದುಅದರ ಜೊತೆಯಲ್ಲಿ ಇನ್ನಿತರ ಜೀವನಾವಶ್ಯಕ ವಸ್ತುಗಳನ್ನು ನೀಡಬೇಕು. ಅಲ್ಲದೆ ರಾಜ್ಯ ಸರ್ಕಾರ ಸಂಘಟಿತ ಕಾರ್ಮಿಕರಿಗೂ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು’ ಎಂದು ತಹಶೀಲ್ದಾರ್ ಜಗನ್ನಾಥರಡ್ಡಿ ಅವರಿಗೆ
ಮನವಿ ಸಲ್ಲಿಸಿದ್ದಾರೆ.

***

‘ಎಂಜಿನಿಯರ್ ಆಗಿ ಕಲ್ಲು ಹೊಡೆಯುವೆ’

2017ರಲ್ಲಿ ಡಿಪ್ಲೋಮಾ ಸಿವಿಲ್ ಎಂಜಿನಿಯರಿಂಗ್ ಮುಗಿಸಿಕೊಂಡು ಮುಂಬೈಯಲ್ಲಿ ಖಾಸಗಿ ಕಂಪನಿಯಲ್ಲಿ ತಿಂಗಳಿಗೆ ₹ 25 ಸಾವಿರ ಸಂಬಳ ಪಡೆದು ಕೆಲಸ ನಿರ್ವಹಿಸುತ್ತಿದ್ದೆ. ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಘೋಷಣೆ ಮತ್ತು ಜೀವ ಉಳಿಸಿಕೊಳ್ಳಲು ನನ್ನೂರಿಗೆ ಬಂದೆ. ಗ್ರಾಮದಲ್ಲಿ ಕೆಲಸವಿಲ್ಲ. ಅನಿವಾರ್ಯವಾಗಿ ಶಹಾಪುರದಲ್ಲಿ ನಮ್ಮ ಕುಟುಂಬದ ಸದಸ್ಯರ ಜೊತೆ ಬೀಸುವ ಕಲ್ಲು ಸಿದ್ಧಪಡಿಸುವ ಕೆಲಸದಲ್ಲಿ ನಿರತನಾಗಿರುವೆ. ಎಂಜಿನಿಯರ್ ಆಗಿದ್ದರೂ ಕಲ್ಲು ಹೊಡೆಯುವ ಕೆಲಸ ತಪ್ಪಲಿಲ್ಲ. ಕೋವಿಡ್ ಜೀವನದಲ್ಲಿ ಉತ್ತಮ ಪಾಠ ಕಲಿಸಿದೆ ಎನ್ನುತ್ತಾರೆ ಎಂಜಿನಿಯರ್ ಮಹೇಶ.

ಬಡ ಕುಟುಂಬಗಳಿಗೆ ತಾಲ್ಲೂಕು ಆಡಳಿತ ವತಿಯಿಂದ ಅರ್ಧ ಕ್ವಿಂಟಲ್ ಅಕ್ಕಿ ನೀಡಲಾಗಿದೆ. ಇನ್ನೂ ಅವಶ್ಯಕವೆನಿಸಿದರೆ ಹೆಚ್ಚಿನ ಅಕ್ಕಿ ವಿತರಿಸಲಾಗುವುದು. ನಿರಂತರವಾಗಿ ಅವರ ಸಂಪರ್ಕದಲ್ಲಿ ಇದ್ದೇವೆ
ಜಗನ್ನಾಥರಡ್ಡಿ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT