ಭಾನುವಾರ, ಮೇ 16, 2021
25 °C
ಯಾದಗಿರಿ ಜಿಲ್ಲೆಯಲ್ಲಿ 15 ಬಸ್‌ಗಳ ಸಂಚಾರ

ನಾಲ್ಕನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ₹1.25 ಲಕ್ಷ ಆದಾಯ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇತ್ತ ಬಸ್‌ ನಿಲ್ದಾಣದಲ್ಲಿ ಕಸ, ಕಡ್ಡಿ ಬಿದ್ದು ಅಸ್ವಚ್ಛತೆ ಕಂಡು ಬರುತ್ತಿದೆ.

ಮುಷ್ಕರದಿಂದ 4 ದಿನಗಳಲ್ಲಿ ಯಾದಗಿರಿ ವಿಭಾಗಕ್ಕೆ ಒಟ್ಟು ₹1.25 ಲಕ್ಷ ಆದಾಯ ನಷ್ಟವಾಗಿದೆ. ಶನಿವಾರ 15 ಬಸ್‌ಗಳ ಕಾರ್ಯಾಚರಣೆ ಮಾಡಲಾಗಿದೆ. ಕರ್ತವ್ಯಕ್ಕೆ ಗೈರಾದ ನೌಕರರೊಬ್ಬರನ್ನು ಅಧಿಕಾರಿಗಳು ಅಮಾನತು ಮಾಡಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಡಿಪೋ, ಬಸ್‌ ನಿಲ್ದಾಣಗಳಿಂದ ದೂರ ಉಳಿದಿದ್ದು, ಇದರಿಂದ ಕಸ ಗುಡಿಸುವವರು ಬಾರದೆ ಕಸ ಎಲ್ಲೆಂದರಲ್ಲೇ ಬಿದ್ದಿದೆ.

ಪ್ರತಿ ನಿತ್ಯ ನಾಲೈದು ಬಾರಿ ಸ್ವಚ್ಛತೆ ಮಾಡುವವರು ಕಸ ಗುಡಿಸುತ್ತಿದ್ದರು. ಈಗ ಅವರೂ ಗೈರಾಗಿದ್ದರಿಂದ ಕಸ, ಪಕ್ಷಿಗಳ ಹಿಕ್ಕೆ ಬಿದ್ದು‍ ಅಸ್ವಚ್ಛತೆ ಕಾಣ ಬರುತ್ತಿದೆ. ಆಸನ ಅಕ್ಕಪಕ್ಕ, ಬಸ್‌ ನಿಲ್ಲುವ ಸ್ಥಳ, ಕ್ಯಾಂಟೀನ್‌, ಕುಡಿಯುವ ನೀರು ಇರುವ ಕಡೆ ಕಸ ಎಲ್ಲೆಂದರಲ್ಲೇ ಬಿದ್ದಿವೆ. ಇದನ್ನೂ ಗುಡಿಸುವವರು ಇಲ್ಲದಂತಾಗಿದೆ.

ಬೆಳಿಗ್ಗೆ ವೇಳೆ ಬಸ್‌ಗಳ ಆರಂಭಕ್ಕೆ ಬಸ್‌ ನಿಲ್ದಾಣದಲ್ಲಿ ಪೊಲೀಸ್ ವ್ಯಾನ್ ನಿಲ್ಲಿಸಲಾಗಿದೆ‌. ಹಲವಾರು ಪೊಲೀಸರು ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದು ಶನಿವಾರ ಕಂಡು ಬಂತು.

ಬಳಕೆ ಮಾಡುವ ನೀರಿನ ಸ್ಥಳದಲ್ಲಿ ನೀರು ಪೋಲಾಗುತ್ತಿದೆ. ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದರಿಂದ ವ್ಯಾಪಾರಸ್ಥರು ನಷ್ಟಕ್ಕೆ ಸಿಲುಕಿದ್ದಾರೆ. ಉಂಗುರ, ಬಳೆ ಇತ್ಯಾದಿ ಮಾರಾಟ ಮಾಡುವವರಿಗೆ ಪ್ರಯಾಣಿಕರು ಇಲ್ಲದಿದ್ದರಿಂದ ವ್ಯಾಪಾರವೇ
ಇಲ್ಲದಂತಾಗಿದೆ.

ಶಾಲಾ–ಕಾಲೇಜಿಗೆ ರಜೆ ಇರುವುದರಿಂದ ತಮ್ಮ ಊರಿಗೆ ತೆರಳಲು ವಿದ್ಯಾರ್ಥಿಗಳು ಪರದಾಟ ನಡೆಸಿರುವುದು ಕಂಡು ಬಂತು. ವಸತಿ ನಿಲಯಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈಗ ಯುಗಾದಿ ರಜೆಗೆ ಊರಿಗೆ ತೆರಳಲು ಸಂಕಷ್ಟ ಪಡುತ್ತಿದ್ದಾರೆ.

15 ಬಸ್‌ಗಳ ಕಾರ್ಯಾಚರಣೆ: ಶನಿವಾರ ಜಿಲ್ಲೆಯಲ್ಲಿ 15 ಬಸ್‌ಗಳ ಕಾರ್ಯಾಚರಣೆ ಮಾಡಲಾಗಿದೆ. ಯಾದಗಿರಿಯಿಂದ 6, ಸುರಪುರದಿಂದ 2, ಗುರುಮಠಕಲ್‌ನಿಂದ 2, ಶಹಾಪುರದಿಂದ 5 ಬಸ್‌ಗಳ ಕಾರ್ಯಾಚರಣೆ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳ ನೀಡುವ ಮಾಹಿತಿ.

ಶುಲ್ಕ ಸಂಗ್ರಹದಲ್ಲಿ ಇಳಿಕೆ

ಹೊಸ ಬಸ್‌ ನಿಲ್ದಾಣದಲ್ಲಿ ಜೈ ಶ್ರೀರಾಮ ಪಾರ್ಕಿಂಗ್ ವ್ಯವಸ್ಥೆ ಇದ್ದು, ಬಸ್‌ ಬಂದ್ ಆಗಿದ್ದರಿಂದ ಶುಲ್ಕವೇ ಸಂಗ್ರಹ ಆಗುತ್ತಿಲ್ಲ ಎನ್ನುವುದು ಮಾಲೀಕರ ಅಳಲಾಗಿದೆ.

ಈ ಮೊದಲು ಪ್ರತಿನಿತ್ಯ ₹1800-2000 ರ ತನಕ ಶುಲ್ಕ ಸಂಗ್ರಹ ಆಗುತ್ತಿತ್ತು. ಈಗ ₹150-200 ಮಾತ್ರ ಬರುತ್ತಿದೆ. ಏ.6ರಿಂದ ಶುಲ್ಕ ಸಂಗ್ರಹಕ್ಕೆ ಕಡಿವಾಣ ಬಿದ್ದಿದೆ. ₹25 ಸಾವಿರ ಬಾಡಿಗೆ ಕಟ್ಟಬೇಕು.

ಮೂವರು ಕಾರ್ಮಿಕರು ಇದ್ದಾರೆ. ಅವರಿಗೂ ವೇತನ ನೀಡಬೇಕು. ಸಾರಿಗೆ ನೌಕರರ ಮುಷ್ಕರದಿಂದ ನಮಗೆ ನಷ್ಟ ಉಂಟಾಗಿದೆ ಎಂದು ಮಾಲೀಕ ವೆಂಕಟೇಶ ಭಾಗ್ಲಿ ಹೇಳುತ್ತಾರೆ.

ಕೆಲಸಗಾರರ ಮೇಲೆ ಪೊಲೀಸರ‌ ದೌರ್ಜನ್ಯ: ಪಾರ್ಕಿಂಗ್‌ನಲ್ಲಿ ಕೆಲಸ ಮಾಡುವವರ ಮೇಲೆ ನಗರದ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಕೆಲಸಗಾರ ಮಲ್ಹರರಾವ್ ಕುಲಕರ್ಣಿ ಆರೋಪಿಸಿದರು.

ಶುಕ್ರವಾರ ಮಧ್ಯರಾತ್ರಿ ಸುಮಾರು 2.35ಕ್ಕೆ ಬಂದ ಬೀಟ್‌ ಪೊಲೀಸರು ಈ ಹಿಂದೆ ಶುಲ್ಕ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದರು.

ಈ ಕುರಿತು ಎಸ್‌ಪಿಗೆ ದೂರು ನೀಡಲಾಗಿದ್ದು, ನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಅವರ ಗಮನಕ್ಕೂ ತಂದಿದ್ದೇವೆ ಎಂದು ಮಾಹಿತಿ ನೀಡಿದರು.

ಬಸ್‌ ವ್ಯವಸ್ಥೆ ಇಲ್ಲದಿದ್ದರಿಂದ ಊರಿಗೆ ಹೇಗೆ ತೆರಳಬೇಕು ಎನ್ನುವುದು ತಿಳಿಯುತ್ತಿಲ್ಲ. ಸರ್ಕಾರ ಶೀಘ್ರ ಮಧ್ಯೆ ಪ್ರವೇಶ ಮಾಡಿ ಬಸ್‌ ಆರಂಭಿಸಬೇಕು.

-ಶ್ವೇತಾ ಚಿತ್ತಾಪುರ, ವಿದ್ಯಾರ್ಥಿನಿ

ಪ್ರತಿನಿತ್ಯ ಹೈದರಾಬಾದ್‌ನಿಂದ ಎರಡು ಬಾರಿ ಬಂದು ಹೋಗುತ್ತೇವೆ. ನಮ್ಮ ಸಾರಿಗೆ ಇಲಾಖೆಯನ್ನು ಸರ್ಕಾರವೇ ನಡೆಸುತ್ತಿದೆ. ನಾವು 53 ದಿನ ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದೆವು.
ಕೆ.ಅಂಬಯ್ಯ ಕೊಟ್ಲಾ, ಹೈದರಾಬಾದ್ ಬಸ್ ನಿರ್ವಾಹಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು