ಗುರುವಾರ , ಜೂನ್ 30, 2022
23 °C

ಸುರಪುರ: ಲಾಕ್‌ಡೌನ್‌ಗೆ ಸ್ಪಂದನೆ–ಸೋಂಕಿತರ ಸಂಖ್ಯೆ ಇಳಿಮುಖ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಎರಡು ವಾರಗಳಿಂದ ನಗರದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದ್ದು, ಈ ಮೂಲಕ ಸುರಪುರ ಸೋಂಕು ಮುಕ್ತವಾಗುವತ್ತ ಹೆಜ್ಜೆ ಇರಿಸಿದೆ.

ಕಠಿಣ ಲಾಕ್‍ಡೌನ್ ಜಾರಿ, ಕೋವಿಡ್ ಪರೀಕ್ಷೆಗಳ ಹೆಚ್ಚಳ, ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು, ಉತ್ತಮ ಚಿಕಿತ್ಸೆ ಇವೆಲ್ಲದರ ಫಲವಾಗಿ ನಗರದಲ್ಲಿ ಸೋಂಕಿತರ ಇಳಿಮುಖವಾಗಿದೆ. ಮೇ 31 ಮತ್ತು ಜೂನ್ 1ರಂದು ಕೇವಲ 4 ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರ ಒಂದೇ ದಿನ 27 ಜನರು ಗುಣಮುಖರಾಗಿದ್ದಾರೆ.

ಎರಡು ವಾರಗಳಿಂದ ಪ್ರಕರಣಗಳ ಸಂಖ್ಯೆ ಎರಡಂಕಿ ದಾಟಿಲ್ಲ. ಮೇ 27ರಂದು 4, ಮೇ 28ರಂದು 4, ಮೇ 29ರಂದು 2 ಪ್ರಕರಣಗಳು ಕಂಡುಬಂದಿದ್ದರೆ, ಮೇ 30ರಂದು ಯಾವುದೆ ಪ್ರಕರಣ ಕಂಡುಬಂದಿರಲಿಲ್ಲ.

ಆರೋಗ್ಯ, ಕಂದಾಯ, ಪೊಲೀಸ್, ನಗರಸಭೆ ಇತರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದು ನಾಗರಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕೋವಿಡ್ ಮಾರ್ಗಸೂಚಿ ಕಟ್ಟಿನಿಟ್ಟಾಗಿ ಜಾರಿಗೊಳಿಸುವಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದು, ಅನಗತ್ಯವಾಗಿ ಓಡಾಡಿದವರಿಗೆ ದಂಡ, ವಾಹನ ಜಪ್ತಿ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ನಗರಸಭೆಯವರು ಸೋಂಕಿತರು ಪತ್ತೆಯಾದ ವಾರ್ಡ್‍ಗಳನ್ನು ಸಾನಿಟೈಸ್ ಮಾಡಿಸುತ್ತಿದ್ದಾರೆ. ವ್ಯಾಪಾರ, ವಹಿವಾಟನ್ನು ನಿಯಂತ್ರಿಸುತ್ತಾರೆ. ನಿಯಮ ಮೀರಿ ವ್ಯಾಪಾರ ಆರಂಭಿಸಿದರೆ ದಂಡ ವಿಧಿಸುತ್ತಿದ್ದಾರೆ. ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸುತ್ತಿದ್ದಾರೆ. ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಲು ಶ್ರಮಿಸುತ್ತಿದ್ದಾರೆ. ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಸೋಂಕಿತರಿಗೆ ಗುಣಮಟ್ಟದ ಆಹಾರ ನೀಡುವಲ್ಲಿ ಎಚ್ಚರಿಕೆ ವಹಿಸುತ್ತಿದ್ದಾರೆ.

ಕೊರೊನಾ ‘ಎರಡನೆ ಅಲೆ ಅರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 192 ಕೋವಿಡ್ ಪ್ರಕರಣಗಳು ಧೃಢಗೊಂಡಿವೆ. ಇವರಲ್ಲಿ 146 ಜನರು ಗುಣಮುಖರಾಗಿದ್ದಾರೆ. 12 ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ (ಜೂನ್ 1)ರ ವರದಿ ಪ್ರಕಾರ  34 ಸಕ್ರಿಯ ಪ್ರಕರಣಗಳಿವೆ. ಅವರಲ್ಲಿ ಬಹುತೇಕರು ಗುಣಮುಖರಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ. ಇನ್ನಷ್ಟು ದಿನ ಜನರು ಸ್ವಯಂಪ್ರೇರಿತರಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ
ಡಾ. ಆರ್.ವಿ. ನಾಯಕ.

‘ನಾಗರಿಕರು ಲಾಕ್‍ಡೌನ್‍ಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ವ್ಯಾಪಾರಿಗಳು ಸಹಕಾರ ನೀಡುತ್ತಿದ್ದಾರೆ. ಈ ಕಾರಣಕ್ಕೆ ನಗರದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ. ಯಾರೂ ಅನಗತ್ಯವಾಗಿ ಓಡಾಡಬಾರದು . ಕೊರೊನಾ ಸೋಂಕಿನಿಂದ ಮುಕ್ತ ವಾಗಲು ನಾಗರಿಕರು ಇನ್ನಷ್ಟು ದಿನ ನಿಯಮಗಳನ್ನು ತಪ್ಪದೆ ಪಾಲಿಸಬೇಕು’ ಎನ್ನುತ್ತಾರೆ ಪೊಲೀಸ್ ಇನ್‍ಸ್ಪೆಕ್ಟರ್‌ ಎಸ್.ಎಂ. ಪಾಟೀಲ.

ನಗರಸಭೆ ಸಿಬ್ಬಂದಿ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರು ಸ್ವಯಂಪ್ರೇರಣೆಯಿಂದ ಸರ್ಕಾರ ಮಾರ್ಗಚೂಚಿ ಪಾಲಿಸಿದರೆ ಸೋಂಕನ್ನು ಹೋಗಲಾಡಿಸಬಹುದು.
ಜೀವನಕುಮಾರ ಕಟ್ಟಿಮನಿ, ಪೌರಾಯುಕ್ತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು