ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ನಿರಂತರ ಮಳೆಯಿಂದ ಜಲಮೂಲಗಳು ಭರ್ತಿ

Last Updated 20 ಆಗಸ್ಟ್ 2020, 16:09 IST
ಅಕ್ಷರ ಗಾತ್ರ

ಸುರಪುರ: ಹಲವು ದಿನಗಳಿಂದ ನಗರದಲ್ಲಿ 100 ಮಿ.ಮೀಗೂ ಅಧಿಕ ಮಳೆ ಸುರಿದಿದ್ದು, ತಾಲ್ಲೂಕಿನ ಜಲಮೂಲಗಳು ಮಳೆನೀರಿನಿಂದ ತುಂಬಿ ತುಳುಕುತ್ತಿವೆ.

ನಗರವೊಂದರಲ್ಲೆ 25ಕ್ಕೂ ಹೆಚ್ಚು ದೊಡ್ಡ ಬಾವಿಗಳು, 15ಕ್ಕೂ ಹೆಚ್ಚು ಕೆರೆಗಳು ಇವೆ. ಬಾವಿಗಳು ತುಂಬಿದ್ದು ಇನ್ನಷ್ಟು ಮಳೆ ಬಂದರೆ ನೀರು ಹೊರಗೆ ಹರಿಯುತ್ತದೆ. ಮಳೆಗೆ ಬೆಟ್ಟ ಗುಡ್ಡಗಳಲ್ಲಿ ಸಣ್ಣ ಸಣ್ಣ ತೊರೆಗಳು ಉಂಟಾಗಿವೆ.

ಬತ್ತಿದ್ದ ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಬರುತ್ತಿದೆ. ಬೆಟ್ಟ ಗುಡ್ಡಗಳಲ್ಲಿ ಒಣಗಿಹೋಗಿದ್ದ ಮರ ಗಿಡಗಳು ಚಿಗರೊಡೆದಿವೆ. ನಿಸರ್ಗದ ರಮಣೀಯ ಬದಲಾವಣೆಯಿಂದ ವೈವಿಧ್ಯಮಯ ಪಕ್ಷಿಗಳು ಬರುತ್ತಿವೆ. ವಾಕಿಂಗ್ ಪ್ರಿಯರಿಗೆ ಈ ತಾಣಗಳು ಮುದ ನೀಡುತ್ತಿವೆ.

ಫಾಲನ್ ಬಂಗಲೆ, ಮಲ್ಲಿಬಾವಿ, ಕುಂಬಾರಪೇಟೆ, ಕ್ಯಾದಿಗೆಗುಂಡ, ಕುದುರೆಗುಡ್ಡ ಇತರ ನಗರದ ಸುತ್ತಮುತ್ತಲಿನ ತಪ್ಪಲು ಪ್ರದೇಶ ನಯನ ಮನೋಹರವಾಗಿದೆ. ಪ್ರಕೃತಿ ಪ್ರಿಯರಿಗೆ ರಸದೌತಣ ನೀಡುತ್ತಿವೆ. ಬಹಳ ವರ್ಷಗಳ ನಂತರ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ.

ನಿಸರ್ಗ ಪುಟಿದೆದ್ದಿದೆ. ಇಡೀ ಬೆಟ್ಟ ಪ್ರದೇಶ ಹಸಿರು ಹೊದ್ದಂತೆ ಗೋಚರವಾಗುತ್ತಿದೆ. ಕೆಲ ವರ್ಷಗಳ ಹಿಂದೆ ಟೇಲರ್ ಮಂಜಿಲ್‍ ಹತ್ತಿರ ಇರುವ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿತ್ತು. ಉದ್ಯಾನ ನಿರ್ಮಿಸಿ, ಬೋಟಿಂಗ್ ವ್ಯವಸ್ಥೆ ಮಾಡುವ ಯೋಜನೆ ಇತ್ತು. ಆದರೆ ನೀರಿಲ್ಲದೆ ಕೆರೆ ಒಣಗಿ ಹೋಗಿತ್ತು. ಈಗ ಈ ಕೆರೆ ಮೈದುಂಬಿ ನಿಂತಿದ್ದು ಜನರನ್ನು ಕೈ ಬೀಸಿ ಕರೆಯುತ್ತಿದೆ. ಹೊಸಬಾವಿ ಕೆರೆ, ದೇವರ ಕೆರೆ, ಕಡ್ಲಪ್ಪನ ಕೆರೆ ಇತರ ಕೆರೆಗಳು ತುಂಬಿವೆ.

ಸುರಪುರವನ್ನು ರಾಜಧಾನಿಯನ್ನಾಗಿಸಿಕೊಂಡು ಮೂರು ಶತಮಾನ ರಾಜ್ಯಭಾರ ಮಾಡಿದ ಗೋಸಲ ವಂಶದ ಅರಸರು ನಗರ ಮತ್ತು ಸುತ್ತಮುತ್ತಲೂ ಸಾಕಷ್ಟು ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸಿದ್ದಾರೆ. ನಗರೀಕರಣ ಹೆಚ್ಚಾಗುತ್ತಿದ್ದಂತೆ ಅವುಗಳಲ್ಲಿ ಬಹುತೇಕ ಅತಿಕ್ರಮವಾಗಿವೆ. ಉಳಿದ ಕೆರೆಗಳು ನೀರಿಲ್ಲದೆ ನಿರ್ಜೀವವಾಗಿದ್ದವು.

ಕೆಲ ದೊಡ್ಡ ಬಾವಿಗಳಲ್ಲಿ ನೀರಿನ ಸೆಲೆ ಸಮೃದ್ಧವಾಗಿರುವುದರಿಂದ ಅವುಗಳಲ್ಲಿ ನೀರು ಸದಾ ಇರುತ್ತದೆ. ಬೇಸರ ಕಳೆಯಲು ಒಮ್ಮೆ ಈ ತಪ್ಪಲು ಪ್ರದೇಶಗಳಿಗೆ ಭೇಟಿ ನೀಡಿದರೆ ಮೈ ಮನ ಹಗರುವಾಗುವುದರಲ್ಲಿ ಸಂದೇಹವಿಲ್ಲ.

***

ಇಡೀ ತಪ್ಪಲು ಪ್ರದೇಶ ಮೈಕೊಡವಿ ಎದ್ದಿದೆ. ಸಾಕಷ್ಟು ವನ ಸಂಪತ್ತು ಹೊಂದಿದೆ. ಈ ಮಧ್ಯ ಉರುವಲಿಗಾಗಿ ಮರ ಗಿಡಗಳನ್ನು ಕಡಿಯುವವರ ಸಂಖ್ಯೆಯೂ ಅಧಿಕವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು
– ಭಂಡಾರಿ ನಾಟೇಕಾರ, ಕೋಲಿ ಸಮಾಜದ ಅಧ್ಯಕ್ಷ

***

ಸುರಪುರದ ತಪ್ಪಲು ಪ್ರದೇಶ ಈಗ ಮಲೆ ನಾಡಿನಂತೆ ಭಾಸವಾಗುತ್ತಿದೆ. ದಿನಾಲೂ ಇಲ್ಲಿಗೆ ಬರುವಂತೆ ನಿಸರ್ಗ ಪ್ರೇರಣೆ ನೀಡುತ್ತಿದೆ. ಅರಣ್ಯ ಇಲಾಖೆ ಇಂತಹ ಸುಂದರ ಪ್ರಕೃತಿಯನ್ನು ಉಳಿಸುವತ್ತ ಕಾಳಜಿ ತೋರಬೇಕು
– ಭೀಮಸೇನಾಚಾರ್ಯ ಮಂಗಳೂರು, ಪ್ರಕೃತಿ ಪ್ರೇಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT