ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಸೋತರೂ ಗಮನಸೆಳೆದ ಉಮೇದುವಾರರು

ಸುರಪುರ: ಗಿರಿಜಮ್ಮ ಬಳಿಚಕ್ರ ವಿಧಾನಸಭೆಗೆ ಸ್ಪರ್ಧಿಸಿದ್ದ ಏಕೈಕ ಮಹಿಳೆ
Published 26 ಏಪ್ರಿಲ್ 2024, 7:19 IST
Last Updated 26 ಏಪ್ರಿಲ್ 2024, 7:19 IST
ಅಕ್ಷರ ಗಾತ್ರ

ಸುರಪುರ: ಸುರಪುರ ವಿಧಾನಸಭೆಗೆ 1952ರಿಂದ ಇದುವರೆಗೆ 16 ಚುನಾವಣೆಗಳು ನಡೆದಿವೆ. ಮೊದಲ ಚುನಾವಣೆ ಹೊರತುಪಡಿಸಿ ಉಳಿದ ಚುನಾವಣೆಗಳಲ್ಲಿ ವಾಲ್ಮೀಕಿ ಜನಾಂಗದವರೆ ಆರಿಸಿ ಬಂದರೂ ವಿರೋಚಿತ ಹೋರಾಟ ನೀಡಿದ ಪರಾಜಿತ ಅಭ್ಯರ್ಥಿಗಳು ಗಮನ ಸೆಳೆದಿದ್ದಾರೆ.

1952ರ ಮೊದಲ ಚುನಾವಣೆಯಲ್ಲಿ ದೊಡ್ಡಪ್ಪಗೌಡ ಚನ್ನೂರ ಅವರಿಗೆ ಹುಲಿ ಚಿಹ್ನೆ ನೀಡಲಾಗಿತ್ತು. ಸರ್ಕಸ್‍ವೊಂದರಿಂದ ಜೀವಂತ ಹುಲಿಯನ್ನೇ ತಂದು ಪ್ರಚಾರ ಮಾಡಿ ಗಮನಸೆಳೆದಿದ್ದರು. 1967ರಲ್ಲಿ ಅಬ್ದುಲ ವಹೀದ ಚೌಧರಿ ಎಂಬ ವಕೀಲರು ಪಕ್ಷೇತರ ಅಭ್ಯರ್ಥಿಯಾಗಿ ಸೈಕಲ್ ಚಿಹ್ನೆ ಪಡೆದು 4,505 ಮತ ಪಡೆದಿದ್ದರು.
1972ರಲ್ಲಿ ಅಬ್ಬಾಸ ಅಲಿ ಎಂಬ ವಕೀಲರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶೇ28.33ರಷ್ಟು ಮತ ಪಡೆದಿದ್ದರು. 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ರಾಜಾ ಕುಮಾರನಾಯಕ ಅವರಿಗೆ 11,062 ಮತ ಬಿದ್ದಿದ್ದವು.

1985ರಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಅಭ್ಯರ್ಥಿ ನಿಲ್ಲಿಸಿತ್ತು. ಸ್ಪರ್ಧಿಸಿದ್ದ ಡಾ.ಅಶೋಕಕುಮಾರ ಗಡಗಡೆ ಕೇವಲ 906 ಮತ ಗಳಿಸಿದ್ದರು. 1989ರಲ್ಲಿ ನೀಲಕಂಠರಾಯಗೌಡ ಹಗರಟಗಿ ಅವರಿಗೆ 15,778 ಮತಗಳು ದೊರೆತಿದ್ದವು. ಇದೇ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಬಸವಂತ್ರಾಯಗೌಡ ಪಾಟೀಲ ವಜ್ಜಲ ಸ್ಪರ್ಧಿಸಿ 11,101 ಮತ ಪಡೆದು ಗಮನ ಸೆಳೆದಿದ್ದರು.

1994ರಲ್ಲಿ ಸಂಸ್ಥಾನಿಕ ರಾಜಾ ವೆಂಕಟಪ್ಪನಾಯಕ (ತಾತಾ) ಬಿಜೆಪಿಯ ಅಭ್ಯರ್ಥಿಯಾಗಿ 9,066 ಮತ ಪಡೆದಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ಉಮೇದುವಾರರಾಗಿದ್ದ ಅಯ್ಯಣ ಹಾಲಭಾವಿ ಅವರಿಗೆ ಕೇವಲ 938 ಮತ ಪಡೆಯಲು ಸಾಧ್ಯವಾಯಿತು.

1999ರಲ್ಲಿ ವಕೀಲ ನಿಂಗಣ್ಣ ಚಿಂಚೋಡಿ ಜೆಡಿಎಸ್ ಪಕ್ಷದ ಹುರಿಯಾಳಾಗಿ 1,946 ಮತ ಪಡೆದಿದ್ದರು. ಇದೇ ಚುನಾವಣೆಯಲ್ಲಿ ಬಿಜೆಪಿಯಿಂದ ವೇಣುಗೋಪಾಲನಾಯಕ ಜೇವರ್ಗಿ 4,273 ಮತ ಪಡೆದರೆ, ಬಿಎಸ್‍ಪಿಯಿಂದ ಅಪ್ಪಾಸಾಹೇಬ ಪಾಟೀಲ ಕೇವಲ 241 ಮತ ಗಳಿಸಿದ್ದರು.

2004ರಲ್ಲಿ ಬಿಜೆಪಿಯ ವೇಣುಗೋಪಾಲ ಜೇವರ್ಗಿ 5,657 ಮತ ಪಡೆದಿದ್ದರು. 2008ರಲ್ಲಿ ಜೆಡಿಎಸ್‍ನಿಂದ ಗಿರಿಜಮ್ಮ ಬಳಿಚಕ್ರ ಸ್ಪರ್ಧಿಸಿದ್ದರು. 3601 ಮತ ಪಡೆದರೂ ಸುರಪುರ ಇತಿಹಾಸದಲ್ಲಿ ಇದುವರೆಗೂ ಸ್ಪರ್ಧಿಸಿದ ಏಕೈಕ ಮಹಿಳೆ ಎಂಬ ದಾಖಲೆ ಹೊಂದಿದ್ದಾರೆ. ಇದೇ ಚುನಾವಣೆಯಲ್ಲಿ ಲಕ್ಷ್ಮಣನಾಯಕ ಬಿಎಸ್‍ಪಿ ಅಭ್ಯರ್ಥಿಯಾಗಿ 1,835 ಮತ ಪಡೆದಿದ್ದರು.

2013ರಲ್ಲಿ ಕೆಜೆಪಿಯಿಂದ ಕುರುಬ ಸಮಾಜದ ಶಿವರಾಜ ಮಲ್ಲೇಶಿ ಸ್ಪರ್ಧಿಸಿದ್ದರು. ಬೀದರ್‌ನಲ್ಲಿ ಗೊಂಡ ಕುರುಬರಿಗೆ ಎಸ್‍ಟಿ ಪ್ರಮಾಣ ಪತ್ರ ನೀಡುವುದರಿಂದ ಯಡಿಯೂರಪ್ಪ ಮಲ್ಲೇಶ ಅವರನ್ನು ಇಲ್ಲಿ ತಂದು ಅಧಿಕವಾಗಿರುವ ಕುರುಬ ಸಮಾಜದ ಮತೆ ಸೆಳೆಯುವ ತಂತ್ರ ಮಾಡಿದ್ದರು. ಅವರಿಗೆ 8,233 ಮತ ದೊರೆತಿದ್ದವು.

ಬಿಜೆಪಿಯಿಂದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಸ್ಪರ್ಧಿಸಿ ಕೇವಲ 3,249 ಮತ ಪಡೆದಿದ್ದರು. ಬಿಎಸ್‍ಆರ್ ಕಾಂಗ್ರೆಸ್‍ನಿಂದ ನಂದಕುಮಾರ ಮಾಲಿಪಾಟೀಲ 2005, ಜೆಡಿಯುನಿಂದ ರಾಮುನಾಯಕ ಅರಳಹಳ್ಳಿ 771 ಮತ ಗಳಿಸಿದ್ದರು.

2018 ರಲ್ಲಿ ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಜೆಡಿಎಸ್‌ನಿಂದ ಸ್ಪರ್ಧಿಸಿ 4,796 ಮತ ಪಡೆದಿದ್ದರು. ಆಲ್ ಇಂಡಿಯಾ ಮಹಿಳಾ ಎಂಪಾವರ್‍ಮೆಂಟ್ ಪಾರ್ಟಿಯ ಹುರಿಯಾಳಾಗಿದ್ದ ರಾಜಾ ರಾಮಪ್ಪನಾಯಕ ಜೇಜಿ 1,513 ಮತ ಗಳಿಸಿದ್ದರು. 2023ರಲ್ಲಿ ಎಎಪಿಯ ಅಭ್ಯರ್ಥಿಯಾಗಿದ್ದ ಆರ್. ಮಂಜುನಾಥನಾಯಕಗೆ 1,348 ಮತ ಬಿದ್ದಿದ್ದವು. ಇಲ್ಲಿ ಪ್ರಬಲರಾಗಿರುವ ನಾಯಕರ ವಿರುದ್ಧ ಸ್ಪರ್ಧಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ಸ್ಪರ್ಧಿಸಿ ಪೈಪೋಟಿ ನೀಡಿದ ಸೋತ ಅಭ್ಯರ್ಥಿಗಳು ಗಮನಾರ್ಹ ದಾಖಲೆ ಮಾಡಿರುವುದು ಅಂಕಿ ಅಂಶಗಳಲ್ಲಿ ನಮೂದಾಗಿದೆ.

‘ನಾಯಕರ ನಿದ್ದೆ ಗೆಡಿಸಿದ್ದ ಮಂಗಿಹಾಳ’
ಕುರುಬ ಸಮಾಜದ ಮುಖಂಡರಾಗಿದ್ದ ಶಿವಣ್ಣ ಮಂಗಿಹಾಳ ಅವರು 1978ರಲ್ಲಿ ರೆಡ್ಡಿ ಕಾಂಗ್ರೆಸ್‍ನಿಂದ 1985 ಮತ್ತು 1989ರಲ್ಲಿ ಜನತಾ ಪಕ್ಷದಿಂದ 1994ರಲ್ಲಿ ಜನತಾ ದಳದಿಂದ 1999ರಲ್ಲಿ ಪಕ್ಷೇತರರಾಗಿ 2004ರಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದರು. ಎದುರಾಳಿಗಳಾಗುತ್ತಿದ್ದ ನಾಯಕ ಜನಾಂಗದ ಹುರಿಯಾಳುಗಳಿಗೆ ತೀವ್ರ ಪೈಪೋಟಿ ನೀಡಿ ಅವರ ನಿದ್ದೆ ಗೆಡಿಸುತ್ತಿದ್ದರು. ಎಲ್ಲ ಚುನಾವಣೆಗಳಲ್ಲಿ ಅಧಿಕ ಮತ ಪಡೆಯುತ್ತಿದ್ದರು. 1985ರಲ್ಲಿ ಇನ್ನೇನು ಗೆದ್ದೇ ಬಿಟ್ಟರು ಎನ್ನುವಷ್ಟರಲ್ಲಿ ಕೊನೆಯ ಸುತ್ತಿನ ಮತ ಏಣಿಕೆಯಲ್ಲಿ ಕೇವಲ 1173 ಮತಗಳಿಂದ ಶಿವಣ್ಣ ಮಂಗಿಹಾಳ ಸೋಲೊಪ್ಪಿಕೊಳ್ಳಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT