ಸೋಮವಾರ, ಸೆಪ್ಟೆಂಬರ್ 27, 2021
26 °C

ಸುರಪುರ: ₹ 8 ಕೋಟಿ ಲಾಭ ಗಳಿಸಿದ ಡಿಸಿಸಿ ಬ್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‌₹152 ಕೋಟಿಯಷ್ಟು ನಷ್ಟದಲ್ಲಿದ್ದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಪ್ರಸಕ್ತ ಸಾಲಿನಲ್ಲಿ ₹ 8 ಕೋಟಿ ಲಾಭ ಗಳಿಸಿ ಅಭಿವೃದ್ಧಿ ಪಥದತ್ತ ದಾಪುಗಾಲಿಟ್ಟಿದೆ ಎಂದು ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.

ನಗರದ ಉಸ್ತಾದ ಪೆಟ್ರೋಲ್ ಬಂಕ್ ಹತ್ತಿರದಲ್ಲಿ ಇರುವ ಟಿಎಪಿಸಿಎಂಎಸ್‍ನ ನೂತನ ಕಟ್ಟಡಕ್ಕೆ ಡಿಸಿಸಿ ಬ್ಯಾಂಕ್ ಸುರಪುರ ಶಾಖೆಯನ್ನು ಸ್ಥಳಾಂತರಿಸುವ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

ಶಾಸಕ ರಾಜೂಗೌಡ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಸಚಿವರ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ₹10 ಕೋಟಿ ಶೇರು ಬಂಡವಾಳ ನೀಡಿದ್ದಾರೆ. ಜೊತೆಗೆ ಕೇಂದ್ರ ಕಚೇರಿಯ ಕಟ್ಟಡಕ್ಕೂ ₹10 ಕೋಟಿ ಅನುದಾನ ನೀಡುವುದರೊಂದಿಗೆ ಸಹಕಾರಿ ಕ್ಷೇತ್ರದ ಬಲವರ್ದನೆಗೆ ನೆರವಾಗಿದ್ದಾರೆ’ ಎಂದರು.

‘ಮುಂಬರುವ ದಿನಗಳಲ್ಲಿ ಬೆಳೆ ಸಾಲ ಪ್ರಮಾಣ ಹೆಚ್ಚಿಸಿ ರೈತರ ಬಲವರ್ಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ರೈತರು ಹಣ ಪಡೆಯಲು ಮತ್ತು ತುಂಬಲು ಬ್ಯಾಂಕ್‍ಗೆ ಬರುವ ತಾಪತ್ರಯ ತಪ್ಪಿಸುವ ಉದ್ದೇಶದಿಂದ ಕೆಲವೇ ದಿನಗಳಲ್ಲಿ ಮೊಬೈಲ್ ಬ್ಯಾಂಕ್ ಸೇವೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದಕ್ಕೆ ಗ್ರಾಹಕ ರೈತ ಮಿತ್ರರು ಸಹಕರಿಸಬೇಕು’ ಎಂದು ಕೋರಿದರು.

ಸಾನ್ನಿಧ್ಯ ವಹಿಸಿದ್ದ ದೇವಾಪುರ ಜಡಿಶಾಂತಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ‘ಬ್ಯಾಂಕಿನ ಆಡಳಿತ ಮಂಡಳಿ ರೈತಸ್ನೇಹಿಯಾಗಿ ಕೆಲಸ ಮಾಡಬೇಕು. ಕೋವಿಡ್ ಸಂಕಷ್ಟ ದಲ್ಲಿರುವ ರೈತರ ಕಣ್ಣೀರೊರೆಸುವ ಕೆಲಸ ಮಾಡುವ ಮೂಲಕ ಈ ಭಾಗದ ರೈತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಮಾಣಕರ್ ಮಾತನಾಡಿದರು. ಟಿಎಪಿಸಿಎಂಸ್ ಅಧ್ಯಕ್ಷ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಅಧ್ಯಕ್ಷ ಬಾಪುಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಬ್ಯಾಂಕ್‍ನ ಜನರಲ್ ಮ್ಯಾನೇಜರ್ ಚಿದಾನಂದ ನಿಂಬಾಳಕರ್ ಸಹಕಾರಿ ಅಭಿವೃದ್ದಿ ಅಧಿಕಾರಿ ಮಲ್ಲಿಕಾರ್ಜುನ, ನಿರ್ದೇಶಕರಾದ ಶರಣಬಸಪ್ಪ ಅಷ್ಠಗಿ, ಬಸವರಾಜ ಪಾಟೀಲ, ನಿಂಗಣ್ಣ ಜೇವರ್ಗಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಾಮನಗೌಡ ಸುಬೇದಾರ, ಕೃಷ್ಣ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಜಾ ಮುಕುಂದನಾಯಕ, ವರ್ತಕರ ಸಂಘದ ಅಧ್ಯಕ್ಷ ಕಿಶೋರಚಂದ್ ಜೈನ್, ಬಸವೇಶ್ವರ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಜಯಲಲಿತಾ ಪಾಟೀಲ, ಮಂಜುನಾಥ ಗುಳಗಿ, ವಿರೇಶ ದೇಶಮುಖ ಇದ್ದರು. ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಸ್ವಾಗತಿಸಿದರು. ಶಿವರುದ್ರ ಉಳ್ಳಿ ನಿರೂಪಿಸಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು