ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

4 ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ತಾಂಡಾ ಯುವಕ ತಿರುಪತಿ

ಆರು ತಿಂಗಳ ಅವಧಿ: ಕೋಳಿಹಾಳ ನಡುವಿನ ತಾಂಡಾ ಯುವಕ ಸಾಧನೆ
Published 29 ಮೇ 2024, 5:15 IST
Last Updated 29 ಮೇ 2024, 5:15 IST
ಅಕ್ಷರ ಗಾತ್ರ

ಹುಣಸಗಿ: ಬಡ ಕೂಲಿಕಾರರ ಕುಟುಂಬದಿಂದ ಬಂದಿರುವ, ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕು; ತೃಪ್ತಿಯಿಂದ ಜೀವನ ನಡೆಸಬಹುದು ಎಂದು ಅಭ್ಯಾಸದಲ್ಲಿ ನಿರತರಾದ ಯುವಕ ಏಕಕಾಲಕ್ಕೆ ನಾಲ್ಕು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಎಲ್ಲರ ಹುಬ್ಬೇರಿವಂತೆ ಮಾಡಿದ್ದಾರೆ.

ಇಲ್ಲಿನ ಕೋಳಿಹಾಳ ನಡುವಿನ ತಾಂಡಾದ ಯುವಕ ಹಾಗೂ ಗ್ರಾಮೀಣ ಪ್ರತಿಭೆಯಾಗಿರುವ ತಿರುಪತಿ ಪೂರಪ್ಪ ಚವಾಣ್‌ ನಾಲ್ಕು ಸರ್ಕಾರಿ ಹುದ್ದೆಗೆ ಆಯ್ಕೆಯಾದವರು.

‘ಹುಣಸಗಿ ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೋಳಿಹಾಳ ನಡುವಿನ ತಾಂಡಾ ಸಂಪೂರ್ಣ ಮಳೆಯಾಶ್ರಿತ ಜಮೀನು ಹೊಂದಿರುವ ತಾಂಡಾ ಆಗಿದ್ದು, ಬಹುತೇಕ ಇಲ್ಲಿನ ಜನ ಗುಳೆ ಹೋಗುವದು ಸಾಮಾನ್ಯ. ಅಂಥ ಪರಿಸ್ಥಿತಿಯಲ್ಲಿ ತಂದೆ ಹಾಗೂ ತಾಯಿಯ ಶ್ರಮಕ್ಕೆ ಪ್ರತಿಫಲವಾಗಿ ಏನಾದರೂ ದೊಡ್ಡ ಸಾಧನೆ ಮಾಡಬೇಕೆಂಬ ಹೆಬ್ಬಯಕೆಯೊಂದಿಗೆ ಅಧ್ಯಯನ ಮಾಡಿ ಇಂದು ಸಾಧನೆಯ ಅಲ್ಪ ತೃಪ್ತಿಯಲ್ಲಿ ಇದ್ದೇನೆ’ ಎಂದು ತಿರುಪತಿ ಹೇಳಿದರು.

‌ಗ್ರಾಮೀಣ ಪ್ರತಿಭೆ: 1ರಿಂದ 3 ನೇ ತರಗತಿಯವರೆಗೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿದ್ದು, ಬಳಿಕ 4 ಮತ್ತು 5 ನೇ ತರಗತಿಯನ್ನು ಗೆದ್ದಲಮರಿ ಶಾಲೆಯಲ್ಲಿ ಓದಿದ್ದಾರೆ. ಬಳಿಕ 8ರಿಂದ 10ನೇ ತರಗತಿಯವರೆಗೆ ತಾಳಿಕೋಟೆಯ ಸಂಗಮೇಶ್ವರ ಪ್ರೌಢ ಶಾಲೆಯಲ್ಲಿ ಅಭ್ಯಾಸ ಮಾಡಿ ಡಿಪ್ಲೊಮಾ ಗದಗನಲ್ಲಿ ಮುಗಿಸಿ ಸಿವಿಲ್ ಎಂಜಿನಿಯರಿಂಗ್‌ ವಿಜಯಪುರದಲ್ಲಿ ಪೂರೈಸಿದ್ದಾರೆ.

‘ನಮ್ಮ ತಂದೆ ತಾಯಿ ಮಹಾರಾಷ್ಟ್ರಕ್ಕೆ ದುಡಿಯಲು ಹೋಗುತ್ತಿದ್ದರು. ಅವರ ದುಡಿಮೆಯ ಹಣದಲ್ಲಿಯೇ ನಮ್ಮ ಕುಟುಂಬ ನಡೆಸಿಕೊಂಡು ಹೋಗುವುದು ದುಸ್ತರವಾಗಿತ್ತು. ಅದರಲ್ಲಿ ನನ್ನ ಓದಿಗೆ ಹೆಚ್ಚಿಗೆ ಹಣ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೊಡ್ಡ ಸರ್ಕಾರಿ ಹುದ್ದೆ ಸೇರಬೇಕು ಎನ್ನುವ ಛಲದೊಂದಿಗೆ ಧಾರವಾಡದಲ್ಲಿದ್ದು, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆದು ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾದೆ. ಓದಿಕೊಂಡಿರುವ ಪ್ರಶ್ನೆಗಳೇ ಹೆಚ್ಚಾಗಿ ಪರೀಕ್ಷೆಯಲ್ಲಿ ಬಂದಿದ್ದವು’ ಎನ್ನುತ್ತಾರೆ ಚವಾಣ್‌.

‘ನನ್ನ ಓದಿನ ಸಂದರ್ಭದಲ್ಲಿ ಆಗಾಗ ತೊಂದರೆಯಾದಾಗ ಗದಗದ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸಂಬಂಧಿ ರಮೇಶ ಕೀರಪ್ಪ ಚವಾಣ್‌ , ಅವರು ಹಣಕಾಸಿನ ನರವಿನ ಜೊತೆಗೆ ನನಗೆ ಸೂಕ್ತ ಮಾರ್ಗದರ್ಶನ ನೀಡಿದ್ದರು’ ಎಂದು ನೆನಪಿಸಿಕೊಂಡರು.

ಆಯ್ಕೆಯಾದ ಹುದ್ದೆಗಳು: ಶಿವಮೊಗ್ಗದ ಕೆಎಸ್ಆರ್‌ಪಿಯಲ್ಲಿ ವಿಶೇಷ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದು, ಸದ್ಯ ಕಲಬುರಗಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.  ಸ್ಥಳೀಯ ಸಂಸ್ಥೆಗಳಲ್ಲಿನ ಪೌರಾಡಳಿತ ಇಲಾಖೆಯ ಕಿರಿಯ ಎಂಜಿನಿಯರ್ ಹುದ್ದೆಗೆ ಕಳೆದ ಮಾರ್ಚ್ 2024ರಲ್ಲಿ ಆಯ್ಕೆಯಾಗಿದ್ದಾರೆ. ನಗರ ಮತ್ತು ಗ್ರಾಮಾಂತರ ಇಲಾಖೆಯಡಿ ಸಹಾಯಕ ನಗರ ಯೋಜಕ ಹುದ್ದೆಗೆ ಇದೇ ವರ್ಷದ ಮಾರ್ಚ್‌ನಲ್ಲಿ ಆಯ್ಕೆಯಾಗಿದ್ದಾರೆ. ಜಲ ಸಂಪನ್ಮೂಲ ಇಲಾಖೆಯಡಿ ಕಿರಿಯ ಎಂಜಿನಿಯರ್ ಸಿವಿಲ್ ಹುದ್ದೆಗೆ 2024 ಜನವರಿಯಲ್ಲಿ ಆಯ್ಕೆಯಾಗಿದ್ದಾರೆ.

ನಾಲ್ಕು ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಸಾಧನೆ ಸಾಧಕನ ಸ್ವತ್ತು ಎಂದು ನಿರೂಪಿಸಿರುವುದು ಯಾದಗಿರಿ ಜಿಲ್ಲೆಗೆ ಹೆಮ್ಮೆಯ ಸಂಗತಿ
ಮೋತಿಲಾಲ್ ಚವಾಣ್‌, ತಾಂಡಾ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT