ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಬಗೆಹರಿಯದ ‘ಹಸಿರು ಪಟಾಕಿ’ ಗೊಂದಲ

ಲಕ್ಷಾಂತರ ಬಂಡವಾಳ ಹೂಡಿದ ವ್ಯಾಪಾರಿಗಳ ಸಂಭ್ರಮ ಕಸಿದ ಸರ್ಕಾರದ ಆದೇಶ
Last Updated 11 ನವೆಂಬರ್ 2020, 16:18 IST
ಅಕ್ಷರ ಗಾತ್ರ

ಯಾದಗಿರಿ: ಸರ್ಕಾರ ಹೊರಡಿಸಿದ ಗೊಂದಲದ ಆದೇಶದಿಂದ ಪಟಾಕಿ ವ್ಯಾಪಾರಿಗಳಿಗೆ ಈ ಬಾರಿ ಸಂಕಷ್ಟ ಎದುರಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದವರು ಸರ್ಕಾರದ ಆದೇಶದಿಂದ ಈಗ ಕೈಕೈ ಹಿಸುಕಿಕೊಳ್ಳುವ ಪರಿಸ್ಥಿತಿಗೆ ತಂದಿದ್ದೊಂಡಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಆಧ್ಯಕ್ಷರು ಆದ ಟಿ.ಎಂ.ವಿಜಯ ಭಾಸ್ಕರ್ ಅವರು ಅ.14 ರಂದು ಹೊರಡಿಸಿದ ಆದೇಶ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನ. 6ರಂದು ಹೊರಡಿಸಿದ ಆದೇಶ ಗೊಂದಲವಾಗಿವುದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ತಮಿಳುನಾಡಿನ ಶಿವಕಾಶಿ, ಹೊಸೂರಿನಲ್ಲಿ ಮುಂಗಡವಾಗಿ ಲಕ್ಷಾಂತರ ಹಣ ಪಾವತಿಸಿದ್ದಾರೆ. ಪಟಾಕಿ ಮಾರಾಟ ಮಾಡಲು ಜಿಲ್ಲಾಧಿಕಾರಿ ಯಿಂದ ಅನುಮತಿ ಪತ್ರ ತಂದು ತೋರಿಸಿದರೆ ಪಟಾಕಿ ವಿತರಿಸುತ್ತೇವೆ ಎಂದು ವರ್ತಕರು ತಿಳಿಸಿದ್ದರು. ಆದರಂತೆ ಅರ್ಜಿ ಹಾಕಿದರೆ, ಸರ್ಕಾರದಿಂದ ಸ್ಪಷ್ಟವಾದ ನಿರ್ದೇಶನ ಇಲ್ಲದಿದ್ದರಿಂದ ಜಿಲ್ಲಾಧಿಕಾರಿ ಅವರು ಅನುಮತಿ ನೀಡಿಲ್ಲ. ಇದರಿಂದ ವ್ಯಾಪಾರಿಗಳು ಅತ್ತ ಹಣವೂ ಇಲ್ಲದೆ ಇತ್ತ ಅನುಮತಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಶಿವಕಾಶಿ, ಹೊಸೂರುನಲ್ಲಿ ಮುಂಗಡವಾಗಿ ಪಾವತಿಸಿ ಹಣ ವಾಪಾಸು ಕೊಡುವುದಿಲ್ಲ ಎನ್ನುತ್ತಾರೆ. ಇದರಿಂದ ಈ ಬಾರಿ ಮೊದಲಿಗೆ ನಮಗೆ ನಷ್ಟವಾಗಿದೆ ಎಂದು ವ್ಯಾಪಾರಿಗಳು ಅವಲತ್ತುಕೊಂಡಿದ್ದಾರೆ.

‘ಜಿಲ್ಲಾಡಳಿತ ಪಟಾಕಿ ವ್ಯಾಪಾರಕ್ಕೆ ಅನುಮತಿ ನೀಡದಿದ್ದರಿಂದ ಹಬ್ಬ ಹತ್ತಿರ ಬಂದರೂ ಅಂಗಡಿಗಳಲ್ಲಿ ಪಟಾಕಿ ತಂದಿಡಲು ಆಗಿಲ್ಲ. ಯಾವಾಗ ವ್ಯಾಪಾರ ಮಾಡಬೇಕು ಎನ್ನುವುದು ಪ್ರಶ್ನೆಯಾಗಿದೆ. ಒಬ್ಬೊಬ್ಬರು ₹ 2 ರಿಂದ ₹ 9 ಲಕ್ಷ ತನಕ ಬಂಡವಾಳ ಹಾಕಿದ್ದೇವೆ. 9 ಮಳಿಗೆಗಳಿಂದ ₹ 20ರಿಂದ ₹ 30 ಲಕ್ಷ ವ್ಯಾಪಾರ ಆಗುತ್ತಿತ್ತು. ಕಳೆದ ವರ್ಷ ನಾನು ಒಬ್ಬನೇ ₹ 5 ಲಕ್ಷ ಪಟಾಕಿ ಮಾರಾಟ ಮಾಡಿದ್ದೆ. ಈ ಬಾರಿ ದಾರಿ ಕಾಣದಾಗಿದೆ’ ಎನ್ನುತ್ತಾರೆ ಪಟಾಕಿ ವ್ಯಾಪಾರಿ ಸೋಹನ್ ಪ್ರಸಾದ.

ಪಟಾಕಿ ಮಾರಾಟಗಾರರ ಸಂಘದಿಂದ ಇತ್ತೀಚೆಗೆ ಡಿಸಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಅವರು ಯಾವುದೇ ನಿರ್ಧಾರ ಮಾಡದೆ ಇರುವುದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

‘ಹಸಿರು ಪಟಾಕಿ’ ದರ ಹೆಚ್ಚಳ: ಸರ್ಕಾರ ‘ಹಸಿರು ಪಟಾಕಿ’ಯನ್ನು ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ವರ್ತಕರು ಹಸಿರು ಪಟಾಕಿಯ ದರ ಹೆಚ್ಚಳ ಮಾಡಿದ್ದಾರೆ. ಹೇಗಾದರೂ ಹಸಿರು ಪಟಾಕಿ ಖರೀಸುತ್ತಾರೆ ಎಂದು ದರ ಹೆಚ್ಚಳ ಮಾಡಿದ್ದಾರೆ. ಇದರಿಂದ ಖರೀದಿಸುವುದಾಅಥವಾ ಬೇಡವೊ ಎನ್ನುವ ಗೊಂದಲದಲ್ಲಿ ಇದ್ದೇವೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ.

‘ನಗರದ ಎಪಿಎಂಸಿ ಸಮೀಪ ಪ್ರತಿ ವರ್ಷ 9 ಮಳಿಗೆ ತೆರೆಯಲಾಗುತ್ತದೆ. ಈ ಬಾರಿ 6 ಮಳಿಗೆ ಮಾತ್ರ ಹಾಕಲಾಗಿದೆ. ಜಿಲ್ಲಾಧಿಕಾರಿಯವರಿಂದ ಅನುಮತಿ ಸಿಗದ ಕಾರಣ ಇನ್ನೂ 3 ಅಂಗಡಿ ಹಾಕಿಲ್ಲ. ಪಟಾಕಿ ನಿಷೇಧ ಬಗ್ಗೆ ಮುಂಚೆ ಹೇಳಿದ್ದರೆ ಯಾವುದೇ ಪಟಾಕಿಗೆ ಹಣ ಹೂಡುತ್ತಿರಲಿಲ್ಲ. ಅದರ ಗೋಜಿಗೆ ಹೋಗುತ್ತಿಲ್ಲ. ಆದರೆ, ಈಗ ಗೊಂದಲದಲ್ಲಿ ಇರುವ ಕಾರಣ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ’ ಎಂದು ಪಟಾಕಿ ವ್ಯಾಪಾರಿ ಶ್ರವಣಕುಮಾರ ನಿರ್ಮಲಕರ್ ಹೇಳುತ್ತಾರೆ.

‘ಈಗ ಸರ್ಕಾರ ನಮಗೆ ಅನುಮತಿ ನೀಡಿದರೆ ಆದೇಶ ಪ‍್ರಕಾರ ಮಾಡುತ್ತೇವೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಬೇರೆ ಜಿಲ್ಲೆ, ನೆರೆ ರಾಜ್ಯದಿಂದ ಪಟಾಕಿ ಖರೀದಿಸಿ ಸಣ್ಣಪುಟ್ಟ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿ ವ್ಯಾಪಾರ ಮಾಡುವ ನಮಗೆ ಇನ್ನೂ ಗೊಂದಲವಿದೆ. ಈಗಾಗಲೇ ಕೆಲವರು ಕಲಬುರ್ಗಿಯಿಂದ ಖರೀದಿಸಿಕೊಂಡು ಬಂದಿದ್ದಾರೆ. ಇದರಿಂದ ನಮಗೆ ಇಲ್ಲಿ ವ್ಯಾಪಾರ ಕುಂಠಿತವಾಗಲಿದೆ’ ಎನ್ನುತ್ತಾರೆ ಅವರು.

***

ಗುರುವಾರ ಈ ಕುರಿತು ಸಭೆ ಹಮ್ಮಿಕೊಳ್ಳಲಾಗಿದೆ. ಆ ಸಭೆಯಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವ ಕುರಿತು ನಿರ್ಧಾರ ಮಾಡಲಾಗುವುದು
- ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

ಕಲಬುರ್ಗಿಯಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದ್ದಾರೆ. ಇಲ್ಲಿ ನೀಡಿಲ್ಲ. ಇದರಿಂದ ವ್ಯಾಪಾರ ನಷ್ಟವಾಗುವ ಆತಂಕವಿದೆ
- ಶ್ರವಣಕುಮಾರ ನಿರ್ಮಲಕರ್‌ಪಟಾಕಿ ವ್ಯಾಪಾರಿ

8 ವರ್ಷಗಳಿಂದ ಪಟಾಕಿ ವ್ಯಾಪಾರ ಮಾಡುತ್ತಿದ್ದೇನೆ. ಈ ಬಾರಿ ₹ 3 ಲಕ್ಷ ವ್ಯಾಪಾರದ ಪಟಾಕಿ ನೋಂದಣಿ ಮಾಡಿದ್ದೇನೆ. ಈಗ ಏನು ಮಾಡಬೇಕೊ ತಿಳಿಯುತ್ತಿಲ್ಲ
-ಸೋಹನ್ ಪ್ರಸಾದ, ಪಟಾಕಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT