ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‍ಗೆ ಭಯ ಪಡುವ ಅಗತ್ಯವಿಲ್ಲ

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಹೇಳಿಕೆ
Last Updated 12 ಫೆಬ್ರುವರಿ 2020, 15:27 IST
ಅಕ್ಷರ ಗಾತ್ರ

ಯಾದಗಿರಿ: ಕೊರೊನಾ ವೈರಸ್‌ಗೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳಿಗೆ ಕೊರೊನಾ ವೈರಸ್ ಕುರಿತು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಕೊರೊನಾ ವೈರಸ್ ಕುರಿತು ಮಾಹಿತಿ ಹೊಂದಿರುವ ಭಿತ್ತಿಪತ್ರ ಬಿಡುಗಡೆ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಎಂ.ಎಸ್ ಪಾಟೀಲ ಮಾತನಾಡಿ, ನೋವೆಲ್ ಕೊರೊನಾ ವೈರಸ್ ಮುಖ್ಯವಾಗಿ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಉಸಿರಾಟಕ್ಕೆ ತೊಂದರೆ ಮಾಡುತ್ತದೆ. ಈ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್‍ನಲ್ಲಿ ಪತ್ತೆಯಾಗಿರುತ್ತದೆ. ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ, ನಿಕಟ ಸಂಪರ್ಕದಲ್ಲಿರುವಾಗ, ಹಸ್ತಲಾಘವ ಮತ್ತು ಮುಟ್ಟುವಾಗ, ವ್ಯಕ್ತಿಯು ಬಳಸಿದ ವಸ್ತುವನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ ಮತ್ತು ಸ್ವಚ್ಛಗೊಳಿಸದ/ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಈ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ವಿವೇಕಾನಂದ ಮಾತನಾಡಿ, ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯೂಮೊನಿಯಾ ಈ ರೋಗದ ಮುಖ್ಯ ಲಕ್ಷಣಗಳಾಗಿರುತ್ತವೆ ಎಂದು ಹೇಳಿದರು.

ಸಾರ್ವಜನಿಕರು ಅನುಸರಿಸಬೇಕಾಗಿರುವ ಮುಂಜಾಗ್ರತೆ ಕ್ರಮಗಳಾದ ಸೋಂಕು ಪಿಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಮೂರು ಪದರ ಮಾಸ್ಕ್ ಬಳಸುವುದು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು. ವಿಶೇಷವಾಗಿ ಆಗಾಗ್ಗೆ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು, ಕೆಮ್ಮುವಾಗ ಮತ್ತು ಸೀನುವಾಗ ಕೈ ವಸ್ತ್ರ ಉಪಯೋಗಿಸುವುದು, ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು, ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು ಎಂದು ಹೇಳಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ‌ಸೇರಿದಂತೆ ಶಹಾಪುರ ಮತ್ತು ಸುರಪುರ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹಾಜರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಲಬುರ್ಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರೊ.ಡಾ.ಗುರುರಾಜ ಎನ್.ಎ., ಮತ್ತು ಡಾ.ಪಠಾಣ ಇದ್ದರು. ಡಾ.ಅಬ್ದುಲ್ ರಷೀದ್ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT