ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಣ್ಯಾಧಿಕಾರಿ ಕೊಲೆ ಪ್ರಕರಣ: ಕಸ್ಟಡಿ ಅಂತ್ಯ, ಆರೋಪಿಗಳಿಗೆ ಮತ್ತೆ ನ್ಯಾಯಾಂಗ ಬಂಧನ

Published 26 ಜೂನ್ 2024, 16:09 IST
Last Updated 26 ಜೂನ್ 2024, 16:09 IST
ಅಕ್ಷರ ಗಾತ್ರ

ಶಹಾಪುರ: ನಗರದ ರೆಸ್ಟೋರೆಂಟ್‌ವೊಂದರಲ್ಲಿ ನಡೆದ ಉಪವಲಯ ಅರಣ್ಯಾಧಿಕಾರಿ ಮಹೇಶ ಶಿವಶರಣಪ್ಪ ಕನಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಪೊಲೀಸ್ ಕಸ್ಟಡಿ ಬುಧವಾರ ಅಂತ್ಯಗೊಂಡಿದ್ದರಿಂದ ಐವರು ಆರೋಪಿಗಳನ್ನು ಪೊಲೀಸರು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಶನಿವಾರ ಎಪಿಪಿ ಮೂಲಕ ತನಿಖಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ ಅವರು ಆರೋಪಿಗಳನ್ನು ಜ.24ರಿಂದ 26ರ ಸಂಜೆ 5 ಗಂಟೆವರೆಗೆ ಮೂರು ದಿನ ವಿಚಾರಣೆ ನಡೆಸಲು ಪೊಲೀಸ್ ಕಸ್ಟಡಿಗೆ ನೀಡಿದ್ದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಮೋಟಾರ್ ಸೈಕಲ್ ಜಪ್ತಿ ಮಾಡಲಾಗಿದ್ದು, ಕೃತ್ಯ ನಡೆದ ದಿನ ಮಹೇಶ ಕನಕಟ್ಟಿ ಅವರ ಮೊಬೈಲ್ ಬಿದ್ದು ಹೋದ ಕುರಿತು ಆರೋಪಿಗಳ ವಿಚಾರಣೆ ನಡೆಸಲಾಗಿದೆ. ಕೃತ್ಯದ ಸ್ಥಳದ ಮಹಜರು ಮಾಡಿದ ತಂಡ ವಿಚಾರಣೆ ಪೂರ್ಣಗೊಳಿಸಿ ಮಹತ್ವದ ಸಾಕ್ಷ್ಯಗಳನ್ನು ದಾಖಲಿಸಿಕೊಂಡಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಐವರು ಆರೋಪಿಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ಪರೀಕ್ಷೆ ಮಾಡಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏನಿದು ಪ್ರಕರಣ: ನಗರದ ಖಾಸಗಿ ರೆಸ್ಟೋರೆಂಟ್‌ವೊಂದರಲ್ಲಿ ಜೂ 5ರಂದು ಉಪವಲಯ ಅರಣ್ಯಾಧಿಕಾರಿ ಮಹೇಶ ಶಿವಶರಣಪ್ಪ ಕನಶೆಟ್ಟಿ ಅವರು ಮೃತಪಟ್ಟ ಕುರಿತು ಶಹಾಪುರ ಠಾಣೆಯಲ್ಲಿ ಯುಡಿಆರ್ ದಾಖಲಾಗಿತ್ತು. ಜೂ 6ರಂದು ಮಹೇಶ ಅವರ ಪತ್ನಿ ನಾಗವೇಣಿ ಶಹಾಪುರ ಠಾಣೆಗೆ ಬಂದು ನನ್ನ ಗಂಡನ ಸಾವು ಸಂಶಯಾಸ್ಪದವಾಗಿದೆ. ತನಿಖೆ ನಡೆಸಬೇಕು ಎಂದು ದೂರು ಸಲ್ಲಿಸಿದ್ದರು.

ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಜೂ 17ರಂದು ಮತ್ತೆ ಮಹೇಶ ಅವರ ಪತ್ನಿ ಠಾಣೆಗೆ ಹಾಜರಾಗಿ ಮಹೇಶ ಕೊಲೆಯಾದ ಕುರಿತು ದೂರು ನೀಡಿದ್ದರು. ಅದರಂತೆ ಜೂ 17ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು ನಡಿಹಾಳ ತಾಂಡಾ, ರೇಖು ಚವಾಣ್, ನರಸಿಂಗ್ ರಾಠೋಡ, ತಾರಾಸಿಂಗ್ ಹಾಗೂ ಪ್ರಕಾಶ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT