ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್‍ನಿಂದ ನಡೆಯದ ವ್ಯಾಪಾರ: ಸಂಕಷ್ಟದಲ್ಲಿ ಪಿಗ್ಮಿ ಸಂಗ್ರಹಕಾರರು

Last Updated 11 ಜೂನ್ 2021, 14:58 IST
ಅಕ್ಷರ ಗಾತ್ರ

ಸುರಪುರ: ಕೊರೊನಾ ನಿಯಂತ್ರಣ ಸಂಬಂಧ ಲಾಕ್‍ಡೌನ್ ಜಾರಿಯಾದಾಗಿನಿಂದ ಅನೇಕರ ಬದುಕು ಬೀದಿಗೆ ಬಂದಿದೆ. ಅವರಲ್ಲಿ ಪಿಗ್ಮಿ ಸಂಗ್ರಹಕಾರರ ಜೀವನವೂ ಸಂಕಷ್ಟಕ್ಕೆ ಸಿಲುಕಿದೆ.

ನಗರದಲ್ಲಿ ಕರ್ನಾಟಕ ಬ್ಯಾಂಕ್, 10ಕ್ಕೂ ಹೆಚ್ಚು ಸಹಕಾರ ಬ್ಯಾಂಕ್‍ಗಳು, 50ಕ್ಕೂ ಹೆಚ್ಚು ಖಾಸಗಿ ಹಣಕಾಸು ಲೇವಾದೇವಿ ಸಂಸ್ಥೆಗಳಿವೆ. 150ಕ್ಕೂ ಹೆಚ್ಚು ಪಿಗ್ಮಿ ಸಂಗ್ರಹಕಾರರು ಇದ್ದಾರೆ. ಪಿಗ್ಮಿ ಸಂಗ್ರಹಕಾರರು ಬಹುತೇಕ ಬಡವರಾಗಿದ್ದಾರೆ. ಪಿಗ್ಮಿ ಸಂಗ್ರಹಿಸಿದ ಹಣದ ಮೇಲೆ ನೀಡುವ ಕಮಿಶನ್‍ನಿಂದ ಅವರ ಜೀವನ ಸಾಗಬೇಕು.

ಕೆಲವರು ದಿನಕ್ಕೆ ₹ 5 ಸಾವಿರದಿಂದ ಹಿಡಿದು ₹ 15 ಸಾವಿರದವರೆಗೆ ಪಿಗ್ಮಿ ಸಂಗ್ರಹಣೆ ಮಾಡುವವರು ಇದ್ದಾರೆ. ಕೆಲ ಸಂಸ್ಥೆಗಳಲ್ಲಿ ಶೇ 2, ಇನ್ನು ಕೆಲ ಸಂಸ್ಥೆಗಳಲ್ಲಿ ಶೇ 3ರಷ್ಟು ಕಮಿಶನ್ ಕೊಡುತ್ತಾರೆ. ತಿಂಗಳಿಗೆ ಪಿಗ್ಮಿ ಸಂಗ್ರಹಕಾರರು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ₹ 4 ಸಾವಿರದಿಂದ ₹ 14 ಸಾವಿರದವೆರೆಗೆ ಹಣ ಪಡೆಯುತ್ತಾರೆ.

ಲಾಕ್‍ಡೌನ್ ಜಾರಿ ಇರುವುದರಿಂದ ವ್ಯಾಪಾರ ಬಹುತೇಕ ಬಂದಾಗಿದೆ. ವಾರಕ್ಕೆ ಎರಡು ದಿನ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪಿಗ್ಮಿ ಸಂಗ್ರಹಕಾರರು ಬೆಳಿಗ್ಗೆಯೇ ಸಂಗ್ರಹಕ್ಕೆ ಹೋಗಬೇಕಾದ ಅನಿವಾರ್ಯತೆ. ವ್ಯಾಪಾರ ಇಲ್ಲದಿರುವುದರಿಂದ ಶೇ 25 ರಷ್ಟು ಹಣ ಸಂಗ್ರಹವಾಗುತ್ತಿಲ್ಲ ಎನ್ನುತ್ತಾರೆ ಪಿಗ್ಮಿ ಸಂಗ್ರಹಕರು.

ದಿನಾಲೂ ತುಂಬುವ ಪಿಗ್ಮಿ ವರ್ಷದ ನಂತರ ದೊಡ್ಡ ಮೊತ್ತವಾಗುವುದರಿಂದ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ. ಈ ಕಾರಣದಿಂದ ಅಂಗಡಿ ಬಂದ್ ಮಾಡಿದ್ದರೂ ಕೆಲ ಮಾಲೀಕರು ಅಂಗಡಿ ಮುಂದೆ ಕುಳಿತು ಪಿಗ್ಮಿ ತುಂಬುತ್ತಾರೆ.

ಪಿಗ್ಮಿ ಸಂಗ್ರಹಗಾರರು ಕಮಿಶನ್ ಮೇಲೆಯೇ ಅವರ ಜೀವನ ನಡೆಯುವುದರಿಂದ ಸರ್ಕಾರ ಅವರ ನೆರವಿಗೆ ಬರಬೇಕು ಎಂದು ಅರ್ಬನ್ ಬ್ಯಾಂಕ್ ವ್ಯವಸ್ಥಾಪಕವಾಸುದೇವ ಜೋಷಿ ಹೇಳುತ್ತಾರೆ.

ನಮ್ಮ ಜೀವನ ಪಿಗ್ಮಿ ಸಂಗ್ರಹದ ಮೇಲೆ ಅವಲಂಬಿತ. ಸಮರ್ಪಕ ಕಮಿಶನ್ ಸಿಗದಿದ್ದರೆ ಉಪವಾಸವೇ ಗತಿ. ಎರಡು ತಿಂಗಳಿಂದ ನೆಮ್ಮದಿ ಇಲ್ಲ.
-ಶರಣಪ್ಪ ಬಡಗಾ, ಪಿಗ್ಮಿ ಸಂಗ್ರಹಕಾರ

ಪಿಗ್ಮಿ ನಂಬಿಯೇ ಜೀವನ ಸಾಗಿಸುತ್ತಿದ್ದೇವೆ. ಮೊದಲಿನಿಂದ ಇದನ್ನೆ ಮಾಡುತ್ತಿರುವುದರಿಂದ ಬೇರೆ ಕೆಲಸ ಬರುವುದಿಲ್ಲ. ಪಿಗ್ಮಿ ಸಂಗ್ರಹ ಕುಂಠಿತವಾಗಿರುವುದರಿಂದ ಚಿಂತೆ ಕಾಡುತ್ತಿದೆ.
-ಭೀಮಾಶಂಕರ ದೇಶಪಾಂಡೆ, ಪಿಗ್ಮಿ ಸಂಗ್ರಹಕಾರ

ಪರಿಹಾರಕ್ಕೆ ಆಗ್ರಹ

ಸರ್ಕಾರ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಅನೇಕರಿಗೆ ಪರಿಹಾರ ಘೋಷಿಸಿದೆ. ರಾಜ್ಯದಲ್ಲಿ ಲಕ್ಷಾಂತರ ಪಿಗ್ಮಿ ಸಂಗ್ರಹಕಾರರು ಬೀದಿಗೆ ಬಿದ್ದಿದ್ದಾರೆ.

ಸರ್ಕಾರ ಪಿಗ್ಮಿ ಸಂಗ್ರಹಕಾರರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಎಲ್ಲ ಪಿಗ್ಮಿ ಸಂಗ್ರಹಕಾರರಿಗೆ ತಕ್ಷಣ ₹ 10 ಸಾವಿರ ಪರಿಹಾರ ನೀಡಬೇಕು ಎಂದು ನಗರದ ಎಲ್ಲ ಪಿಗ್ಮಿ ಸಂಗ್ರಹಕಾರರು ಸರ್ಕಾರಕ್ಕೆ ಒಕ್ಕೊರಲ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT