ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಜ್ಞಾನದ ಹೆಸರಲ್ಲಿ ‘ವ್ಯಾಪಾರ’ ಜೋರು

ಜಿಲ್ಲೆಯಲ್ಲಿ ಅನಧಿಕೃತ ತರಬೇತಿ, ಅಕ್ರಮ ವಸತಿ ಕೇಂದ್ರಗಳು
Published 5 ಆಗಸ್ಟ್ 2024, 5:37 IST
Last Updated 5 ಆಗಸ್ಟ್ 2024, 5:37 IST
ಅಕ್ಷರ ಗಾತ್ರ

ಯಾದಗಿರಿ: ಜ್ಞಾನದಾನದ ಹೆಸರಿನಲ್ಲಿ ಜಿಲ್ಲೆಯ ವಿವಿಧೆಡೆ ಅನಧಿಕೃತ ತರಬೇತಿ ಕೇಂದ್ರ, ಅಕ್ರಮ ವಸತಿ ಕೇಂದ್ರಗಳ ಸ್ಥಾಪನೆಯಾಗಿದ್ದು ಕಂಡುಬರುತ್ತಿದೆ.

ಕೆಲ ವಾರಗಳ ಹಿಂದೆ ಯಾದಗಿರಿ ನಗರದಲ್ಲಿ ಅನಧಿಕೃತ ಕೇಂದ್ರಗಳಿಗೆ ಶಿಕ್ಷಣ ಇಲಾಖೆಯವರು ನೋಟಿಸ್‌ ನೀಡಿ ಬಂದಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಯಾದಗಿರಿ ನಗರ, ಶಹಾಪುರ, ಸುರಪುರ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಅನಧಿಕೃತ ಕೋಚಿಂಗ್‌‌ ಸೆಂಟರ್‌ಗಳಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

ಮಕ್ಕಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುವ ನಿಟ್ಟಿನಲ್ಲಿ ತರಬೇತಿ ಕೇಂದ್ರಗಳು ಎಲ್ಲೆಡೆ ತಲೆ ಎತ್ತಿವೆ. ಹಲವು ತರಬೇತಿ ಕೇಂದ್ರಗಳನ್ನು ನಡೆಸುವವರು ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದಿದ್ದಾರೆ. ಆದರೆ, ಸರಿಯಾದ ಗಾಳಿ, ಬೆಳಕಿನ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಯೂ ಇಲ್ಲ. ದೊಡ್ಡಿಗಳಲ್ಲಿ ಕುರಿ ತುಂಬಿದಂತೆ ಮಕ್ಕಳನ್ನು ಕೋಣೆಯಲ್ಲಿ ಕೂಡಿಸಿರುವುದನ್ನು ನೋಡಿದರೆ, ಇಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗಿರುವುದು ಕಂಡು ಬರುತ್ತಿದೆ.

ಈ ಕುರಿತು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖಂಡರು, ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಇವುಗಳನ್ನು ಬಂದ್‌ ಮಾಡಿಸಲು ಕನ್ನಡ ಹಾಗೂ ಜನಪರ ಸಂಘಟನೆಗಳು ಬೀದಿಗಳಿದು ಹೋರಾಟಕ್ಕೆ ಸಜ್ಜಾಗುತ್ತಿವೆ. ಇದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮಖ್ಯಸ್ಥರೂ ಧ್ವನಿಗೂಡಿಸಿದ್ದಾರೆ. ಆದರೆ, ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಗಮನಹರಿಸುತ್ತಿಲ್ಲ. ಜನತೆ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುವ ಒಂದು ಮಗುವಿಗೆ ವರ್ಷಕ್ಕೆ ₹70 ಸಾವಿರ ಸರ್ಕಾರ ವೆಚ್ಚ ಮಾಡುತ್ತದೆ. ಆದರೆ, ನಗರದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಅನಧಿಕೃತ ತರಬೇತಿ ಕೇಂದ್ರಗಳು ಪಾಲಕರಿಗೆ ಹುಸಿ ಭರವಸೆ ಹಾಗೂ ಆಮಿಷ ತೋರಿಸುತ್ತಿವೆ.

‘ನಾಲ್ಕು ವರ್ಷ ನಮ್ಮ ಬಳಿ ನಿಮ್ಮ ಮಗು ಶಾಲೆ ಕಲಿತರೆ ಸಾಕು ಮುಂದೆ ನವೋದಯ, ಸೈನಿಕ, ಆದರ್ಶ, ಮೊರಾರ್ಜಿ ವಸತಿ ಶಾಲೆ ಹೀಗೆ ಒಂದಿಲ್ಲ ಒಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರಲ್ಲಿ ಅನುಮಾನವಿಲ್ಲ ಎಂದು ಸಾವಿರಾರು ರೂಪಾಯಿ ಪಾಲಕರಿಂದ ವಸೂಲಿ ಮಾಡುತ್ತಾರೆ. ಆದರೆ, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಅಲ್ಲಿ ಇರುವುದಿಲ್ಲ’ ಎಂದು ಆರೋಪಿಸುತ್ತಾರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್.ಚೆನ್ನಬಸ್ಸು ವನದುರ್ಗ.

‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗ್ರಾಮೀಣ ವಿದ್ಯಾರ್ಥಿಯ ಕೃಪಾಂಕವನ್ನು ಗಿಟ್ಟಿಸಿಕೊಳ್ಳಲು ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಮಾಡಿರುತ್ತಾರೆ. ಅಲ್ಲಿ ಹಾಜರಾತಿ ಇರದೆ ನಗರದಲ್ಲಿ ವಾಸವಾಗಿದ್ದುಕೊಂಡು ಅನಧಿಕೃತ ತರಬೇತಿ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿರುತ್ತದೆ. ಇದರಿಂದ ಸರ್ಕಾರದಿಂದ ಬರುವ ಮಕ್ಕಳ ಬಿಸಿಯೂಟ, ಸಮವಸ್ತ್ರ, ಶೂ, ಶಿಷ್ಯವೇತನ ಹೀಗೆ ಎಲ್ಲವನ್ನೂ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕಬಳಿಸುತ್ತಾರೆ. ಇದರಿಂದ ಪ್ರತಿಭಾವಂತ ಬಡ ಗ್ರಾಮೀಣ ಮಕ್ಕಳ ಮೀಸಲಾತಿಯನ್ನು ಕಸಿದುಕೊಳ್ಳುತ್ತಾರೆ. ಇಂತಹ ಅಕ್ರಮಗಳಿಗೆ ಶಿಕ್ಷಣ ಇಲಾಖೆ ಕಡಿವಾಣ ಹಾಕಬೇಕು’ ಎನ್ನುತ್ತಾರೆ ದಲಿತ ಸಂಘಟನೆಯ ಮುಖಂಡ ಶಿವಪುತ್ರಪ್ಪ ಜವಳಿ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕೆಲ ಸಂಘಟನೆಗಳು ಇಂತಹ ಕೇಂದ್ರಗಳಿಗೆ ಬೀಗ ಹಾಕುವಂತೆ ಪ್ರತಿಭಟನೆ, ಧರಣಿ, ಹೋರಾಟ ನಡೆಸಿಕೊಂಡು ಬರುತ್ತಲಿವೆ. ನಗರದ ಪ್ರಮುಖ ಬೀದಿಗಳಲ್ಲಿ ರಾಜಾರೋಷವಾಗಿ ಬ್ಯಾನರ್, ಭಿತ್ತಿ ಪತ್ರವನ್ನು ಅನಧಿಕೃತ ತರಬೇತಿ ಕೇಂದ್ರಗಳು ಪ್ರವೇಶಕ್ಕಾಗಿ ಬನ್ನಿ ಎಂದು ನಾಮಫಲಕ ಹಾಕಿದ್ದರೂ ದಿಟ್ಟ ಕ್ರಮಕ್ಕೆ ಶಿಕ್ಷಣ ಇಲಾಖೆಯ ಮುಖ್ಯಸ್ಥರು ಮುಂದಾಗದೆ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಶಹಾಪುರ ತಾಲ್ಲೂಕಿನಲ್ಲಿ ಅನಧಿಕೃತ ತರಬೇತಿ ಕೇಂದ್ರ ಹಾಗೂ ಅಕ್ರಮವಾಗಿ ಸ್ಥಾಪಿತ ವಸತಿ ಕೇಂದ್ರಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಬಿಇಒ ಅವರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು.

-ಗರಿಮಾ ಪಂವಾರ್‌ ಸಿಒಇ ಯಾದಗಿರಿ

ಜಿಲ್ಲೆಯ ಮೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಧಿಕೃತ ತರಬೇತಿ ಕೇಂದ್ರಗಳಿಗೆ ನೋಟಿಸ್‌ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸಲಾಗುವುದು

-ಮಂಜುನಾಥ ಡಿಡಿಪಿಐ

ಮೂಲಸೌಕರ್ಯ ವಂಚಿತ ಸೆಂಟರ್‌ಗಳು

ಸುಮಾರು 70 ರಿಂದ 80ಕ್ಕೂ ಅಧಿಕ ಬಾಲಕ ಬಾಲಕಿಯರು ಒಂದೇ ಕಟ್ಟಡದಲ್ಲಿ ವಾಸ ಮಾಡುತ್ತಿದ್ದಾರೆ. ಎಲ್ಲ ಮಕ್ಕಳು ಐದರಿಂದ ಎಂಟು ವರ್ಷದ ಒಳಗಿನ ಮಕ್ಕಳು ಇದ್ದಾರೆ. ಮೂಲಭೂತ ಸೌಕರ್ಯಗಳು ಇಲ್ಲ. ಮೊರಾರ್ಜಿ ನವೋದಯ ನೇಮಕಕ್ಕೆ ಕೋಚಿಂಗ್ ಶಾಲೆಗಳನ್ನು ಸಣ್ಣ ಮಟ್ಟದ ಕಟ್ಟಡಗಳಲ್ಲಿ ನಡೆಸುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಯಿಂದ ₹5000ಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೆ ಈ ಕೋಚಿಂಗ್ ಸೆಂಟರ್‌ಗಳಲ್ಲಿ ಸ್ವಚ್ಛತೆ ಇಲ್ಲ‌. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ನುಣಚಿಕೊಳ್ಳುವ ಅಧಿಕಾರಿಗಳು‌

‘‌ಅನಧಿಕೃತ ಕಟ್ಟಡಗಳಲ್ಲಿ ನಡೆಯುವ ತರಬೇತಿ ಕೇಂದ್ರಗಳ ಬಗ್ಗೆ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎನ್ನುವ ಮಾತುಗಳು ಪೋಷಕರಿಂದ ಕೇಳಿ ಬರುತ್ತಿವೆ. ‘ಕ್ಷೇತ್ರ ಶಿಕ್ಷಣಾಧಿಕಾರಿ ಅಂತಹ ಕೇಂದ್ರಗಳಿಗೆ ನೋಟಿಸ್‌ ನೀಡಿದರೆ ಹೆಚ್ಚಿನ ಕ್ರಮ ಉಪನಿರ್ದೇಶಕರು ಕೈಗೊಳ್ಳಬೇಕು. ಆದರೆ ಇಲ್ಲಿ ಜವಾಬ್ದಾರಿಯಿಂದ ನುಣಚಿಕೊಳ್ಳುವ ಸಂದರ್ಭ ಕಂಡು ಬರುತ್ತದೆ’ ಎಂದು ಪೋಷಕ ಅಶೋಕ ಚುಟ್ಲಾ ಹೇಳುತ್ತಾರೆ.

ಪೂರಕ ವರದಿ: ಟಿ.ನಾಗೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT