ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕಂಪ ಬದಲು ಸಂವಿಧಾನದ ಹಕ್ಕು ನೀಡಿ

ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಜಿಲ್ಲಾ ನ್ಯಾಯಾಧೀಶ ರಾಚಪ್ಪ ಕೆ.ತಾಳಿಕೋಟಿ ಸಲಹೆ
Last Updated 3 ಡಿಸೆಂಬರ್ 2018, 14:25 IST
ಅಕ್ಷರ ಗಾತ್ರ

ಯಾದಗಿರಿ: ‘ಅಂಗವಿಕಲರ ಬಗ್ಗೆ ಅನುಕಂಪ ತೋರುವ ಬದಲು ಸಂವಿಧಾನ ಮತ್ತು ಕಾನೂನಿನಲ್ಲಿ ನೀಡಿರುವ ಅವರ ಮೂಲಭೂತ ಹಕ್ಕುಗಳನ್ನು ಒದಗಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಚಪ್ಪ ಕೆ.ತಾಳಿಕೋಟಿ ಸಲಹೆ ನೀಡಿದರು.

ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಗವಿಕಲರು ಮತ್ತು ಬಡವರು ಯಾವುದೇ ಕಾನೂನು ಸಮಸ್ಯೆಗಳಿಗಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು’ ಎಂದು ಕಿವಿಮಾತು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ,‘ಅಂಗವಿಕಲರಿಗಾಗಿ ಸರ್ಕಾರದ ಅನೇಕ ಸೌಲಭ್ಯಗಳಿವೆ. ಕಡ್ಡಾಯ ಶಿಕ್ಷಣ, ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಹಾಗೂ ಉಚಿತ ಕಾನೂನು ನೆರವು ಸೌಲಭ್ಯ ದೊರೆಯುತ್ತಿದ್ದು, ಅವುಗಳ ಸದುಪಯೋಗಪಡೆಯಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಮಾತನಾಡಿ,‘ಅಂಗವಿಕಲ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಅಂಗವಿಕಲರಿಗೆ ಸೌಲಭ್ಯ ತಲುಪಿಸಲು ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು’ ಎಂದರು.

‘ಮನುಷ್ಯನಲ್ಲಿ ಪಂಚೇಂದ್ರಿಯಗಳಿವೆ. ಆದರೆ, ಅಂಗವಿಕಲರಲ್ಲಿ ವಿಶೇಷವಾಗಿ ವಿಚಾರ ಮಾಡುವಂತಹ 6ನೇ ಜ್ಞಾನೇಂದ್ರಿಯವನ್ನು ದೇವರು ದಯಪಾಲಿಸಿರುತ್ತಾನೆ. ಆ ವಿಶೇಷ ಗುಣವನ್ನು ಬಳಸಿಕೊಂಡು ಸ್ವಾಲಂಬಿಗಳಾಗಬೇಕು’’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ,‘ಕ್ರಿಯಾಯೋಜನೆಯಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಲಾಗುತ್ತಿದೆ. ಅಂಗಾಂಗದಲ್ಲಿ ವೈಕಲ್ಯ ಇರುವ ಜನರಿಗಿಂತ ಎಲ್ಲಾ ಚೆನ್ನಾಗಿದ್ದರೂ ನಡೆ-ನುಡಿ ಸರಿಯಿಲ್ಲದವರು ನಿಜವಾದ ಅಂಗವಿಕಲರು’ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಮಾತನಾಡಿ,‘ಗರ್ಭಿಣಿಯರು ಪೌಷ್ಟಿಕ ಆಹಾರ, ತರಕಾರಿ ಸೇವಿಸಿದರೆ ಅಂಗವಿಕಲರ ಮಕ್ಕಳ ಜನನವನ್ನು ತಡೆಯಬಹುದಾಗಿದೆ. ಇತ್ತೀಚೆಗೆ ಅಪಘಾತಗಳಿಂದ ಹೆಚ್ಚಿನ ಜನರು ಅಂಗವಿಕಲತೆಗೆ ಒಳಗಾಗುತ್ತಿದ್ದು, ಸಾರಿಗೆ ಇಲಾಖೆಯ ನಿಯಮಗಳನ್ನು ಪಾಲಿಸುವ ಮೂಲಕ ಅಂಗವಿಕಲರಾಗುವುದನ್ನು ತಡೆಯಬಹುದು’ ಎಂದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶರಣಪ್ಪ ಪಾಟೀಲ್ ಮಾತನಾಡಿ,‘ ಅಂಗವಿಕಲ ಮಕ್ಕಳು ಸಾಮಾನ್ಯ ಮಕ್ಕಳ ಶಾಲೆಯಲ್ಲಿ ಕಲಿಯಲು ಸಾಧ್ಯವಿಲ್ಲ. ಅವರಿಗೆ ವಿಶೇಷ ಒತ್ತು ನೀಡಿ ಕಲಿಸುವ ಕಿವುಡ, ಮೂಗ, ಅಂಧಮಕ್ಕಳ ಶಾಲೆಗೆ ಸೇರಿಸಬೇಕು. ಇತರೆ ಇಲಾಖೆಗಳಲ್ಲಿರುವ ಯೋಜನೆಗಳ ಬಗ್ಗೆ ತಿಳಿದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಅಂಗವಿಕಲರಿಗಾಗಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಲಬುರ್ಗಿಯ ಮುಕ್ತಿ ಆರ್ಗನೈಜೇಷನ್ ಫಾರ್ ಸೋಷಿಯಲ್ ಆಂಡ್ ಎಕನಾಮಿಕ್ ಚೇಂಜ್ ಸಂಸ್ಥೆಯ ವತಿಯಿಂದ 40 ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿವಿಧ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಗವಿಕಲ ಸಾಧಕರನ್ನು ಸನ್ಮಾನಿಸಲಾಯಿತು.

ಮುಕ್ತಿ ಆರ್ಗನೈಜೇಷನ್ ಫಾರ್ ಸೋಷಿಯಲ್ ಆಂಡ್ ಎಕನಾಮಿಕ್ ಚೇಂಜ್ ಸಂಸ್ಥೆಯ ಸಂಯೋಜಕರಾದ ಸುಮಂಗಲಾ, ಶಹಾಪುರ ತಾಲ್ಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಸಾಹೇಬ ಜಾನೆ, ಇಲಾಖೆಯ ಯೋಜನಾ ಸಹಾಯಕಿ ನಾಗಮ್ಮ ಜಕಾತಿ, ಎಂಆರ್‌ಡಬ್ಲ್ಯೂ ಭೀಮರಾಯ, ಅಜೀತ್ ದೋಕಾ, ನಾಗರಾಜ ಶಹಾಪುರ, ಮಾಳಪ್ಪ ಪೂಜಾರಿ, ಆರ್.ವಿಶ್ವನಾಥರೆಡ್ಡಿ ಅಬ್ಬೆತುಮಕೂರ, ವಿಜಯಕುಮಾರ, ರಾಧಾ ಗುತ್ತೇದಾರ, ಅಬ್ದುಲ್‌ಭಾಷಾ, ಶರಣಪ್ಪ ಇದ್ದರು.

ನಿವೇದಿತಾ ಅಂಧ, ಅನಾಥ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಭಾಗ್ಯಶ್ರೀ ಸ್ವಾಗತಿಸಿದರು. ಮಹೇಶ ಕೆ.ಪತ್ತಾರ ದೋರನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT