ಶನಿವಾರ, ಮೇ 21, 2022
27 °C

ವಿವೇಕಾನಂದರು ಆಶಾಕಿರಣ; ನ್ಯಾಯಾಧೀಶ ಚಿದಾನಂದ ಬಡಿಗೇರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಸುರಪುರ: ‘ಸ್ವಾಮಿ ವಿವೇಕಾನಂದರು ಯುವ ಸಮುದಾಯಕ್ಕೆ ಇಂದಿಗೂ ಆಶಾಕಿರಣ. ನಿರ್ಭಯತೆ, ಆಶಾವಾದ ಮತ್ತು ಸಮಾಜದ ಬಗೆಗಿನ ವಿಶಾಲ ದೃಷ್ಟಿಕೋನದಿಂದ ತತ್ವಜ್ಞಾನಿ ಎನಿಸಿಕೊಂಡರು’ ಎಂದು ನ್ಯಾಯಾಧೀಶ ಚಿದಾನಂದ ಬಡಿಗೇರ್ ಹೇಳಿದರು.

ಇಲ್ಲಿಯ ಕೋರ್ಟ್‍ನಲ್ಲಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದ ಶಕ್ತಿ, ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ ಅವರ ದಿವ್ಯವಾಣಿ ಎಲ್ಲರಿಗೂ ಸ್ಫೂರ್ತಿದಾಯಕ. ಪರಿಶ್ರಮ, ತ್ಯಾಗ ಹಾಗೂ ಸಾಹಸದಿಂದ ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ಮಹಾನ್ ಚೇತನ ಅವರು’ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರ ಕುರಿತು ವಕೀಲ ವಿ.ಎಸ್.ಬೈಚಬಾಳ ಮತ್ತು ತಂಬಾಕು, ಗುಟ್ಕಾ ನಿಷೇಧದ ಕುರಿತು ವಕೀಲ ಚನ್ನಪ್ಪ ಹೂಗಾರ ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಕಿಲ್ಲೇದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಪಿಪಿಗಳಾದ ರಾಘವೇಂದ್ರ ಜಾಗೀರದಾರ್, ದಿವ್ಯಾರಾಣಿ ನಾಯಕ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ತಳವಾರ ಇದ್ದರು. ಅಪ್ಪಣ್ಣ ಗಾಯಕವಾಡ ನಿರೂಪಿಸಿದರು. ಮಂಜುನಾಥ ಹುದ್ದಾರ ವಂದಿಸಿದರು.

‘ವಿವೇಕಾನಂದರ ಆದರ್ಶ ಸಾರ್ವಕಾಲಿಕ’

ಗುರುಮಠಕಲ್: ಸ್ವಾಮಿ ವಿವೇಕಾನಂದರ ಮಾರ್ಗ ಹಾಗೂ ಆದರ್ಶಗಳು ಸಾರ್ವಕಾಲಿಕ ಮಾನ್ಯತೆ ಪಡೆದಿವೆ ಎಂದು ಶಿಕ್ಷಕ ಅಶೋಕರೆಡ್ಡಿ ಶೆಕಲಾಸಪಲ್ಲಿ ಹೇಳಿದರು.

ಪಟ್ಟಣದ ಲಕ್ಷ್ಮಿನಗರ ಬಡಾವಣೆಯ ಉದ್ಯಾನದಲ್ಲಿ ಸ್ವಾಮಿ ವಿವೇಕಾನಂದ ಶಾಖೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿನ ಶ್ರೇಷ್ಠತೆಯನ್ನು ಜಗತ್ತಿಗೆ ತೋರಿಸಿ, ಬ್ರಿಟಿಷರು ದೇಶ ಹಾಗೂ ಧರ್ಮದ ಕುರಿತು ಹಬ್ಬಿಸಿದ್ದ ಸುಳ್ಳಿನ ಪರದೆಯನ್ನು ತೆಗೆದರು. ದೇಶದ ಭಾಗ್ಯವು ಮೇಲ್ವರ್ಗದ ಜನರಿಂದಲ್ಲ. ಅದು ಗುಡಿಸಲುಗಳಿಂದ ಬರುವ ಶೋಷಿತ ಸಮುದಾಯಗಳ ಕೈಯಲ್ಲಿದೆ ಎಂದು ಜಾಗೃತಿ ಮೂಡಿಸಿದ್ದರು ಎಂದರು.

ಈಗಿನ ಯುವ ಸಮುದಾಯ ಕ್ಷುಲ್ಲಕ, ಕ್ಷಣಿಕ ಆನಂದಕ್ಕೆ ದಾಸರಾಗುತ್ತಿದ್ದಾರೆ. ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದೇಶದ ಹಿತದೃಷ್ಟಿಯಿಂದ ದೊಡ್ಡ ನಷ್ಟ ಎಂದು ಕಳವಳ ವ್ಯಕ್ತಪಡಿಸಿದರು.

ಜೀವನದಲ್ಲಿ ಸ್ವಾಮಿ ವಿವೇಕಾ ನಂದರ ಆದರ್ಶ ಅಳವಡಿಸಿಕೊಂಡರೆ ಸಾಮಾಜಿಕವಾಗಿ ಮೇಲ್ಮಟ್ಟದ ಸ್ಥಾನ ಪಡೆಯಲು ಸಾಧ್ಯ ಎಂದು ಹೇಳಿದರು.

ಸೂರ್ಯನಾರಾಯಣ, ಬಸಪ್ಪ ಸಂಜನೋಳ, ಶ್ರೀನಿವಾಸ ಯಾಧವ್, ಗುರುನಾಥ ತಲಾರಿ, ರವೀಂದ್ರರೆಡ್ಡಿ ಪೋತುಲ್, ನರೇಶ ಗೋಂಗ್ಲೆ, ಕಾರ್ತಿಕ್, ವಿಶಾಲ, ಲಕ್ಷಣ ಕುಂಬಾರ, ಮಂಜು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.