ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಬೇಸಿಗೆ ಪ್ರಖರತೆಗೆ ಬೇಕು ಮುನ್ನೆಚ್ಚರಿಕೆ

ಜಿಲ್ಲೆಯಲ್ಲಿವೆ 122 ಗ್ರಾಮ ಪಂಚಾಯಿತಿಗಳು; ಅಭಿವೃದ್ಧಿ ಅಧಿಕಾರಿಗಳಿಗೆ ಅಗ್ನಿ ಪರೀಕ್ಷೆ
Published 19 ಫೆಬ್ರುವರಿ 2024, 6:09 IST
Last Updated 19 ಫೆಬ್ರುವರಿ 2024, 6:09 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಇನ್ನೂ ಬಿಸಿಲಿನ ಪ್ರಖರತೆ ಹೆಚ್ಚಾಗಿಲ್ಲ. ಬರುವ ದಿನಗಳನ್ನು ನೆನೆಸಿಕೊಂಡರೆ ಬೆವರ ಹನಿ ಇಳಿಯುತ್ತದೆ. ಅದರಲ್ಲಿ ಮುಂದಿನ ಮೂರು ತಿಂಗಳ ಕಾಲ ಜಿಲ್ಲಾ, ತಾಲ್ಲೂಕು ಆಡಳಿತಕ್ಕೆ ಜನ–ಜಾನುವಾರಿಗೆ ಕುಡಿಯುವ ನೀರು ಪೂರೈಸುವ ಸವಾಲು ಎದುರಾಗಲಿದೆ. ಅದರಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರಸಕ್ತ ಬಾರಿ ಅಗ್ನಿ ಪರೀಕ್ಷೆಗೆ ಒಳಪಡುವ ಸ್ಥಿತಿ ಎದುರಾಗಲಿದೆ.

ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ನಿರ್ವಹಣೆಯ ಬರ ಇದೆ. ಅದರಂತೆ ನಿರ್ವಹಣೆ ಇರುವ ಕಡೆ ನೀರಿನ ಕೊರತೆ ಇದೆ. ಅಲ್ಲದೆ ಇವೆಲ್ಲದಕ್ಕಿಂತ ಹೆಚ್ಚು ಅವಲಂಬಿತವಾಗಿರುವುದು ವಿದ್ಯುತ್ ಸರಬರಾಜು. ವಿದ್ಯುತ್ ಸಮಸ್ಯೆ ಉಂಟಾದರೆ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಕೆಲ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಕುಸಿತದಿಂದ ನೀರಿನ ಕೊರತೆ ಉಂಟಾಗಲಿದೆ. ಅಲ್ಲದೆ ನದಿ ಪಾತ್ರದ ಹಳ್ಳಿಗಳಲ್ಲಿ ಸಮಸ್ಯೆ ಕಾಣಲಿದೆ ಎಂಬ ಭೀತಿ ಜನರಲ್ಲಿ ಇದೆ.

ಜಿಲ್ಲೆಯಲ್ಲಿ 122 ಗ್ರಾಮ ಪಂಚಾಯಿತಿಗಳಿವೆ. ಹಲವು ಪಂಚಾಯಿತಿಗಳಲ್ಲಿ ಪಿಡಿಒಗಳು ಪ್ರಭಾರ ಅಧಿಕಾರದಲ್ಲಿದ್ದಾರೆ. ಹೀಗಾಗಿ ಈ ಬಾರಿ ಬೇಸಿಗೆಯನ್ನು ಯಾವ ರೀತಿ ನಿಭಾಯಿಸಲಿದ್ದಾರೆ ಎನ್ನುವ ಸವಾಲು ಎದುರಾಗಿದೆ. ಈಗಾಗಲೇ ಅಂತರ್ಜಲಮಟ್ಟ ಕುಸಿತ ಕಂಡಿದೆ. 

ಟಾಸ್ಕ್ ಫೋರ್ಸ್‌ ಸಮಿತಿ ರಚನೆ: ಬೇಸಿಗೆಯಲ್ಲಿ ನೀರು ಸೇರಿದಂತೆ ವಿವಿಧ ಸಮಸ್ಯೆ ಪರಿಹಾರಕ್ಕೆ ತಾಲ್ಲೂಕು ಪಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ಸಮಿತಿ ರಚಿಸಲಾಗಿದೆ. ಆಯಾ ತಾಲ್ಲೂಕಿಗೆ ಸ್ಥಳೀಯ ಶಾಸಕರು ಅಧ್ಯಕ್ಷರಿರುತ್ತಾರೆ. ಸದಸ್ಯ ಕಾರ್ಯದರ್ಶಿಯಾಗಿ ಆಯಾ ತಾಲ್ಲೂಕಿನ ತಹಶೀಲ್ದಾರ್‌, ಸದಸ್ಯರಾಗಿ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ, ಪಶುಸಂಗೋಪನಾ ಇಲಾಖೆ, ಕೃಷಿ, ತೋಟಗಾರಿಕೆ, ಗ್ರಾಮೀಣ ಕುಡಿಯುವ ನೀರು ಸರಬರಾಜು, ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿ ಇರುತ್ತಾರೆ. ಇವರ ನೇತೃತ್ವದಲ್ಲಿ ಸಭೆ ನಡೆದು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಜಿಲ್ಲೆಯಲ್ಲಿ ಬೇಸಿಗೆ ಶುರುವಾಗುತ್ತಲೇ ಸೂರ್ಯ ಭೂಮಿಗೆ ಹತ್ತಿರವಾದಂತೆ ಭಾಸವಾಗುತ್ತಿದೆ. ಸುಡು ಬಿಸಿಲಿನಿಂದ ಬಳಲುವಂತಾಗಿದೆ. ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಸಮಪರ್ಕವಾಗಿ ಮಳೆ ಸುರಿಯದ ಕಾರಣ ಅಂತರ್ಜಲ ಮಟ್ಟ ಕುಸಿದಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಬಹುದು.

‘ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಇದ್ದದ್ದೆ. ಇದನ್ನು ಮನಗಂಡರೂ ನಗರಸಭೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಬರುತ್ತದೆ’ ಎಂಬುದು ನಾಗರಿಕರ ಆರೋಪ.

***

ಪೂರಕ ವರದಿ: ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ವಾಟ್ಕರ್‌ ನಾಮದೇವ,

ಯಾದಗಿರಿ ತಾಲ್ಲೂಕಿನ ಹೊಸಳ್ಳಿ ತಾಂಡಾದಲ್ಲಿ ನೀರಿನ ತೊಟ್ಟಿಯಲ್ಲಿ ನೀರು ಸಂಗ್ರಹಿಸಿರುವುದು
ಯಾದಗಿರಿ ತಾಲ್ಲೂಕಿನ ಹೊಸಳ್ಳಿ ತಾಂಡಾದಲ್ಲಿ ನೀರಿನ ತೊಟ್ಟಿಯಲ್ಲಿ ನೀರು ಸಂಗ್ರಹಿಸಿರುವುದು
ಬಸವರಾಜ ಶರಭೈ
ಬಸವರಾಜ ಶರಭೈ
ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಈಗಾಗಲೇ ಟಾಸ್ಕ್‌ ಫೋರ್ಸ್‌ ಸಮಿತಿ ರಚಿಸಲಾಗಿದೆ. ಸ್ಥಳೀಯ ಶಾಸಕರು ಸಭೆ ಮಾಡಿದ್ದಾರೆ. ನೀರಿನ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ
ಬಸವರಾಜ ಶರಭೈ ತಾಲ್ಲೂಕು ಪಂಚಾಯಿತಿ ಇಒ ಯಾದಗಿರಿ
 ಸೋಮಶೇಖರ ಬಿರಾದಾರ
 ಸೋಮಶೇಖರ ಬಿರಾದಾರ
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಸದ್ಯಕ್ಕೆ ಮೇವಿನ ಕೊರತೆ ಇಲ್ಲ
ಸೋಮಶೇಖರ ಬಿರಾದಾರ ತಾಪಂ ಇಒ ಶಹಾಪುರ
ಮಲ್ಲಿಕಾರ್ಜುನ ಸಂಗ್ವಾರ್
ಮಲ್ಲಿಕಾರ್ಜುನ ಸಂಗ್ವಾರ್
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪಂಚಾಯಿತಿ ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸಿಬ್ಬಂದಿ ಉದಾಸೀನತೆ ತೋರಿದರೆ ಕ್ರಮ ಕೈಗೊಳ್ಳಲಾಗುವುದು
ಮಲ್ಲಿಕಾರ್ಜುನ ಸಂಗ್ವಾರ್ ತಾಪಂ ಇಒ ವಡಗೇರಾ

ತಾಲ್ಲೂಕು ಆಡಳಿತಕ್ಕೆ ಕುಡಿಯುವ ನೀರಿನ ಸವಾಲು

ಶಹಾಪುರ: ತಾಲ್ಲೂಕು ಪಂಚಾಯಿತಿ ಸದ್ಯಕ್ಕೆ ಗುರುತಿಸಿರುವಂತೆ ತಾಲ್ಲೂಕಿನ ಚಾಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಮುಡಬೂಳ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಮತ್ತು ಹೊತಪೇಟ ಗ್ರಾಪಂ ಮತ್ತು ಕೊಳ್ಳೂರು ಗೌಡೂರು ಗ್ರಾಮವು ಪ್ರಸಕ್ತ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಾಲ್ಲೂಕಿನ ಖಾಸಗಿ ಕೊಳಬಾವಿಗಳ ಮಾಹಿತಿ ಕಲೆ ಹಾಕಿ ವಶಕ್ಕೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ತಾಪಂ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು. ‘ಕೃಷ್ಣಾ ಹಾಗೂ ಭೀಮಾ ನದಿ ಪಾತ್ರದಲ್ಲಿ ಜಿಲ್ಲಾಡಳಿತದ ನಿರ್ದೇಶನ ಹಾಗೂ ಸಣ್ಣ ನೀರಾವರಿ ಇಲಾಖೆಯ ಆದೇಶವನ್ನು ಗಾಳಿಗೆ ತೂರಿ ನದಿಯ ಎರಡು ತಟದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಬ್ಯಾರೇಜ್ ಹಾಗೂ ಅಲ್ಪಪ್ರಮಾಣದ ನದಿಯಲ್ಲಿನ ನೀರು ಭತ್ತ ಬೆಳೆಗೆ ಸೆಳೆದುಕೊಳ್ಳುವುದರಿಂದ ಜಲಚರಗಳಿಗೆ ಹಾಗೂ ಜಾನುವಾರುಗಳು ಕುಡಿಯುವ ನೀರಿನ ಬವಣೆ ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ಗೌಡೂರ ಗ್ರಾಮದ ದೇವಿಂದ್ರ. ತಾಲ್ಲೂಕಿನಲ್ಲಿ ಮೇವಿನ ಕೊರತೆ ಅಷ್ಟೊಂದು ಕಾಣುತ್ತಿಲ್ಲ. ಅಲ್ಲದೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಎರಡು ಬಾರಿ ನಾರಾಯಣಪುರ ಎಡದಂಡೆ ಕಾಲುವೆಯ ಮೂಲಕ ನಾಲೆಗೆ ನೀರು ಹರಿಸಿದರೆ ತುಸು ಸಮಸ್ಯೆ ಕಡಿಮೆಯಾಗಲಿದೆ. ಅಲ್ಲದೆ ಅನಿರೀಕ್ಷಿತ ಮಳೆ ಬಂದರೆ ಸಾಕು ಬೇಸಿಗೆ ದಾಟಬಹುದು ಎನ್ನುತ್ತಾರೆ ಜನತೆ.

‘ಸದ್ಯ ಕುಡಿಯುವ ನೀರಿನ ಸಮಸ್ಯೆಯಿಲ್ಲ’
ಹುಣಸಗಿ: ತಾಲ್ಲೂಕಿನ 18 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸದ್ಯ ಕುಡಿಯುವ ನೀರು ಸೇರಿದಂತೆ ನೀರಿನ ಬಳಕೆಗೆ ಯಾವುದೇ ತೊಂದರೆ ಇಲ್ಲ. ಅಂಥ ಪರಿಸ್ಥಿತಿ ಎದುರಾದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಯ್ಯ ಸ್ವಾಮಿ ಹಿರೇಮಠ ತಿಳಿಸಿದರು. ತಾಲ್ಲೂಕಿನಲ್ಲಿ ಇಲ್ಲಿಯವರೆಗೂ ಜಲಮೂಲಗಳು ಚೆನ್ನಾಗಿದ್ದು ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಕೆಲ ದಿನಗಳ ಹಿಂದೆ ಅಗತೀರ್ಥ    ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡು ಬಂದಿತ್ತು. ಕೊಳವೆಬಾವಿಯ ಮೂಲಕ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತದೆ. ಆದರೆ ಇನ್ನೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವ ಕುರಿತಂತೆ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಹೇಳಿದರು. ಬರದ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ಮೇವು ಸಂಗ್ರಹ ಮಾಡಿಕೊಂಡಿದ್ದು ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ನೀರಿನ ಸಮಸ್ಯೆಯಾಗದಂತೆ ಕ್ರಮ

ವಡಗೇರಾ: ‘ತಾಲ್ಲೂಕಿನ ವಡಗೇರಾ ಹಾಲಗೇರಾ ಗಡ್ಡೆಸೂಗುರು ಹಾಗೂ ಟೋಕಾಪುರದಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಹುದು. ಅದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ್ ತಿಳಿಸಿದರು. ‘ಈಗಾಗಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆ ಕರೆದು ಸಭೆಯಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ’ ಎನ್ನುತ್ತಾರೆ ಅವರು. ‘ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪಂಚಾಯಿತಿಯ ಎಲ್ಲಾ ಸಿಬ್ಬಂದಿಯೂ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸಿಬ್ಬಂದಿ ಉದಾಸೀನತೆ ತೋರಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT