ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ವಾರದ ಮಾರುಕಟ್ಟೆ ನೋಟ–ಮಳೆ: ತರಕಾರಿ, ಸೊಪ್ಪು ದರ ಏರಿಕೆ

ಹಳ್ಳಿಗಳಿಂದ ಮಾರುಕಟ್ಟೆಗೆ ಬಾರದ ತರಕಾರಿ, ಶ್ರಾವಣ ಮುನ್ನವೇ ದರ ಸಮರ
Last Updated 25 ಜುಲೈ 2021, 3:20 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಒಂದು ವಾರದಲ್ಲಿ ಆಗಾಗ ಜಿಟಿ ಜಿಟಿ ಮಳೆಯಾಗುತ್ತಿದ್ದು, ತರಕಾರಿ ಮಾರುಕಟ್ಟೆಗಳಲ್ಲಿ ಆವಕ ಕಡಿಮೆಯಾಗಿದೆ. ಇದರಿಂದ ತರಕಾರಿ ದರ ಏರಿಕೆಯಾಗಿದೆ.

ಕಳೆದ ವಾರ ತರಕಾರಿ ದರದಲ್ಲಿ ಏರಿಳಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿರಲಿಲ್ಲ. ಈಗ ದರ ಏರಿಕೆಯಾಗಿದ್ದು, ಶ್ರಾವಣ ಮಾಸದ ಮುನ್ನವೇ ದರ ಸಮರ ನಡೆದಿದೆ.

ಜಿಟಿಜಿಟಿ ಮಳೆ ಪ್ರಭಾವದಿಂದ ತರಕಾರಿ ಬಿಡಿಸಲು ಆಗುತ್ತಿಲ್ಲ. ಇದರಿಂದ ಹಳ್ಳಿಗಳಿಂದ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಇದು ಆವಕ ಕಡಿಮೆಯಾಗಲು ಕಾರಣವಾಗಿದೆ.

ಟೊಮೆಟೊ, ಆಲೂಗಡ್ಡೆ, ಎಲೆಕೋಸು, ಸೋರೆಕಾಯಿ ಬಿಟ್ಟು, ಉಳಿದೆಲ್ಲ ತರಕಾರಿ ದರ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಬೇಬಿಗೆ ಕತ್ತರಿ ಹಾಕಿದಂತೆ ಆಗಲಿದೆ. ‌ಶುಂಠಿ ಕೆಜಿಗೆ ₹60 ಇದ್ದು, ಬೆಳ್ಳೋಳ್ಳಿ ಕೆಜಿಗೆ ₹100 ಇದೆ.

ಮುಂದಿನ ವಾರದಿಂದ ಶ್ರಾವಣ ಮಾಸ ಆರಂಭವಾಗಲಿದ್ದು, ತರಕಾರಿಗಳ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಮಾಂಸಹಾರ ಸೇವನೆ ಬಹುತೇಕ ಕಡಿಮೆಯಾಗಲಿದ್ದು, ಸಸ್ಯಹಾರ ಹೆಚ್ಚು ಸೇವನೆ ಮಾಡಲಿದ್ದಾರೆ. ಇದು ಕೂಡ ದರ ಏರಿಕೆಗೆ ಕಾರಣವಾಗಲಿದೆ ಎಂದು ವ್ಯಾಪಾರಿಗಳು ಹೇಳುವ ಮಾತು.

‘ಜಿಲ್ಲೆಯಲ್ಲಿ ತರಕಾರಿ ಬೆಳೆಯುವ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಜೊತೆಗೆ ಜಿಟಿ ಜಿಟಿ ಮಳೆಯಾಗಿದ್ದರಿಂದಲೂ ತರಕಾರಿ ತರಲು ಸಮಸ್ಯೆ ಆಗಿದೆ. ಇದರಿಂದ ಆವಕ ಕಡಿಮೆಯಾಗಿದ್ದು, ದರ ಹೆಚ್ಚಳಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ತಕರಾರಿ ವ್ಯಾಪಾರಿ ಮಹ್ಮದ್‌ ಇಮ್ರಾನ್‌.

ಸೊಪ್ಪುಗಳ ದರ: ತರಕಾರಿಗಳ ಜೊತೆಗೆ ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ. ಪಾಲಕ್‌ ಸೊಪ್ಪು ₹20ಗೆ ಮೂರು ಕಟ್ಟು, ಪುದೀನಾ ₹30, ಕೋಂತಬರಿ ₹30 ಒಂದು ಕಟ್ಟು, ಸಬ್ಬಸಗಿ ₹30ಗೆ 2 ಕಟ್ಟು, ರಾಜಗಿರಿ ಸೊಪ್ಪು ₹20ಗೆ 3 ಕಟ್ಟು, ಮೆಂತ್ಯೆ ₹50ಗೆ 2 ಕಟ್ಟು, ಪುಂಡಿ ಪಲ್ಯೆ ಮಾತ್ರ ₹20ಗೆ 4 ಕಟ್ಟು ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಸೊಪ್ಪುಗಳಲ್ಲಿ ಮೆಂತ್ಯೆಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ದರವೂ ಜಾಸ್ತಿ ಇದೆ.

ಹಣ್ಣುಗಳ ದರ: ಒಂದು ಸೇಬು ಹಣ್ಣು ದೊಡ್ಡ ಗಾತ್ರದು ₹20, ಸಣ್ಣಗಾತ್ರದ್ದು ₹15 ಇದೆ. ಒಂದು ಮೊಸಂಬಿ ₹10–15, ದಾಳಿಂಬೆ ಹಣ್ಣು ಕೆ.ಜಿಗೆ ₹150–180ರ ತನಕ ದರ ಇದೆ. ದ್ರಾಕ್ಷಿ ₹80 ಕೆ.ಜಿ ಇದೆ. ಪಚ್ಚೆ ಬಾಳೆ ಹಣ್ಣು ಒಂದು ಡಜನ್‌ ₹40 ಬೆಲೆ ಇದೆ.ಡ್ರ್ಯಾಗನ್‌ ಹಣ್ಣು ₹150 ಕೆಜಿ, ಪೇರಲ ₹40 ಕೆಜಿ ಇದೆ.

***

ತರಕಾರಿ ದರ(ಪ್ರತಿ ಕೆ.ಜಿಗೆ ₹ಗಳಲ್ಲಿ)

ಟೊಮೆಟೊ; 20-30

ಬದನೆಕಾಯಿ; 55–60

ಬೆಂಡೆಕಾಯಿ; 35–40

ದೊಣ್ಣೆಮೆಣಸಿನಕಾಯಿ; 55–60

ಆಲೂಗಡ್ಡೆ; 25-30

ಈರುಳ್ಳಿ; 35–40

ಎಲೆಕೋಸು; 25–30

ಹೂಕೋಸು; 35–40

ಚವಳೆಕಾಯಿ; 55–60

ಬೀನ್ಸ್; 55–60

ಗಜ್ಜರಿ; 60-70

ಸೌತೆಕಾಯಿ; 35–40

ಮೂಲಂಗಿ; 30-35

ಮೆಣಸಿನಕಾಯಿ; 55-60

ಸೋರೆಕಾಯಿ; 25–30

ಬಿಟ್‌ರೂಟ್; 40-45

ಹೀರೆಕಾಯಿ; 55-60

ಹಾಗಲಕಾಯಿ; 55-60

ತೊಂಡೆಕಾಯಿ; 35-40

ಅವರೆಕಾಯಿ; 55–60

***

ತರಕಾರಿ ದರ ಏರಿಕೆಯಾಗಿದ್ದರಿಂದ ಗ್ರಾಹಕರು ಚೌಕಾಶಿ ಮಾಡುತ್ತಿದ್ದಾರೆ. ಆದರೆ, ತರಕಾರಿಯೇ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಸಮಸ್ಯೆ ಆಗುತ್ತಿದೆ.
-ಪೂಜಾ ಗೋವಿಂದ, ತರಕಾರಿ ವ್ಯಾಪಾರಿ

***

ಮಳೆ ಕಾರಣದಿಂದ ಹಣ್ಣುಗಳು ಕೊಳೆತು ಹೋಗುತ್ತಿವೆ. ಇದರಿಂದ ಕೆಜಿ ಲೆಕ್ಕದಲ್ಲಿ ದರ ಏರಿಕೆಯಾಗುತ್ತಿದೆ. ಮಾವಿನ ಸಿಸನ್‌ ಬಹುತೇಕ ಮುಗಿದಿದೆ.
-ಮೆಹಬೂಬ್‌, ಹಣ್ಣುಗಳ ವ್ಯಾಪಾರಿ

***

ತರಕಾರಿ ದರ ಏರಿಕೆಯಿಂದ ಹೊರೆ ಆಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
-ಜಗದೀಶ ಕಲ್ಯಾಣಿ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT