ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಜಿಪಂ ಅಧ್ಯಕ್ಷ ಹುದ್ದೆ ಯಾರಿಗೆ?

ಜೆಡಿಎಸ್‌ ಬೆಂಬಲದೊಂದಿಗೆ ಅಧಿಕಾರ ನಡೆಸಿದ ‘ಕೈ’, 10ತಿಂಗಳ ಅವಧಿಗೆ ಹಲವರು ಆಕಾಂಕ್ಷಿಗಳು
Last Updated 19 ಜೂನ್ 2020, 19:45 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಕಳೆದ ವಾರ ರಾಜಶೇಖರಗೌಡ ಪಾಟೀಲ ವಜ್ಜಲ್‌ ಅವರು ರಾಜೀನಾಮೆನೀಡಿದ್ದು, ಜಿಲ್ಲೆಯ ಜಿ.ಪಂ ಅಧ್ಯಕ್ಷ ಪಟ್ಟ ಯಾರಿಗೆ ಸಿಗಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ. ಇನ್ನೂ 10 ತಿಂಗಳು ಅಧಿಕಾರವಧಿ ಇದೆ.

ಬಿಜೆಪಿ 11, ಕಾಂಗ್ರೆಸ್‌ 12, ಜೆಡಿಎಸ್‌ ಒಬ್ಬರನ್ನು ಒಳಗೊಂಡಂತೆ 24 ಸದಸ್ಯರ ಬಲ ಹೊಂದಿತ್ತು. ಇಬ್ಬರು ಸದಸ್ಯರ ನಿಧನದಿಂದ ಈಗ 22ಕ್ಕೆ ಕುಸಿದಿದೆ. ಮಾರ್ಚ್‌ ತಿಂಗಳಲ್ಲಿ ಬಳಿಚಕ್ರ ಜಿ.ಪಂ ಸದಸ್ಯ ಬಿಜೆಪಿಯ ಭೀಮರೆಡ್ಡಿಗೌಡ, ವಡಗೇರಾ ಮತಕ್ಷೇತ್ರದ ಕಾಂಗ್ರೆಸ್‌ನ ಅಶೋಕರೆಡ್ಡಿ ಗೋನಾಲ ನಿಧನರಾಗಿದ್ದರು. ಈಗ ಬಿಜೆಪಿ 10, ಕಾಂಗ್ರೆಸ್‌ 11, ಜೆಡಿಎಸ್‌ ಒಂದು ಸ್ಥಾನ ಹೊಂದಿದೆ.

ಈಗಾಗಲೇ ಕಾಂಗ್ರೆಸ್‌ನಲ್ಲಿ ಗುರುಮಠಕಲ್‌ ತಾಲ್ಲೂಕಿನ ಕೊಂಕಲ್‌ ಜಿ.ಪಂ ಸದಸ್ಯ ಬಸರೆಡ್ಡಿಗೌಡ ಅನಪುರ 30 ತಿಂಗಳು, ಸುರಪುರ ತಾಲ್ಲೂಕಿನ ದೇವತ್ಕಲ್‌ ಸದಸ್ಯ ರಾಜಶೇಖರಗೌಡ ಪಾಟೀಲ ವಜ್ಜಲ್‌ ಅವರು 18 ತಿಂಗಳು ಅಧಿಕಾರ ಅನುಭವಿಸಿದ್ದಾರೆ. ಈಗ ಮತ್ತೆ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಿದ್ದು, ಅಧ್ಯಕ್ಷ ಸ್ಥಾನಕ್ಕೆ ಏರಲು ತೆರೆಮರೆಯಲ್ಲಿ ಪೈಪೋಟಿ ನಡೆಸಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ನಿಧನದಿಂದ ಗೊಂದಲ: ವಡಗೇರಾ ಮತಕ್ಷೇತ್ರದಅಶೋಕರೆಡ್ಡಿ ಗೋನಾಲ ನಿಧನದಿಂದ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮಾತುಕತೆಯಾಗಿತ್ತು. ಆದರೆ, ಅವರು ನಿಧನರಾಗಿದ್ದಾರೆ. ಹೀಗಾಗಿ ಪಕ್ಷದಲ್ಲಿ ಗೊಂದಲ ಉಂಟಾಗಿದೆ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಮಾಹಿತಿ ನೀಡಿದರು.

‌ಕಾಂಗ್ರೆಸ್ ಮುಖಂಡರ ಸಭೆ: ಶಹಾಪುರದ ಭೀಮರಾಯನಗುಡಿ ಪ್ರವಾಸಿ ಮಂದಿರದಲ್ಲಿಜಿ.ಪಂ ನೂತನ ಅಧ್ಯಕ್ಷರ ಆಯ್ಕೆ ಕುರಿತು ಶಾಸಕ‌ ಶರಣಬಸಪ್ಪಗೌಡ ದರ್ಶನಾಪುರ ನೇತೃತ್ವದಲ್ಲಿ ಶುಕ್ರವಾರ ಪಕ್ಷದ ಮುಖಂಡರು ಹಾಗೂ ಜಿ.ಪಂ‌ ಸದಸ್ಯರು ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಸುರಪುರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಶಾಸಕ ದರ್ಶನಾಪುರ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್‌, ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಪುಟಪಾಕ ಜಿ.ಪಂ‌ ಸದಸ್ಯೆ ರಾಜಶ್ರೀ ರಘುನಾಥರೆಡ್ಡಿ, ದೋರನಹಳ್ಳಿ ಜಿ.ಪಂ ಸದಸ್ಯ ವಿನೋದಪಾಟೀಲ, ಸಗರ ಜಿ.ಪಂ ಸದಸ್ಯೆ ಶರಣಮ್ಮ ನಾಗಪ್ಪಹಾಗೂ ಅರಕೇರಾ (ಜೆ) ಸದಸ್ಯ ಬಸನಗೌಡ ಪಾಟೀಲ ಯಡಿಯಾಪುರ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ತಮಗೆ ಅಧ್ಯಕ್ಷ ಸ್ಥಾನ ಅವಕಾಶ ನೀಡಬೇಕು ಎಂದು ಮುಖಂಡರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮತ್ತೊಮ್ಮೆ ಸಭೆ ಸೇರಿ ಒಮ್ಮತದಿಂದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಹೆಸರು‌ ತೀರ್ಮಾನಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕಡಿಮೆ ಅಧಿಕಾರಾವಧಿ
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅವಧಿ ಕೇವಲ 10 ತಿಂಗಳು ಮಾತ್ರ ಇದೆ. ಇದಕ್ಕೂ ಮುಂಚೆ ಗ್ರಾಮ ಪಂಚಾಯಿತಿ ಚುನಾವಣೆ ಎದುರಾಗಲಿದೆ. ಹೀಗಾಗಿ ಬಿಜೆಪಿ ಇತ್ತ ಗಮನಹರಿಸುವುದು ಕಡಿಮೆ. ಆದರೆ, ಕಾಂಗ್ರೆಸ್‌ ಪಕ್ಷ ಸಂಘಟನೆ ದೃಷ್ಟಿಯಿಂದ ಎಲ್ಲರನ್ನು ಸಮಾನವಾಗಿ ಕರೆದೊಯ್ಯವ ಅಭ್ಯರ್ಥಿಗೆ ಮಣೆ ಹಾಕಲಿದೆ ಎನ್ನಲಾಗುತ್ತಿದೆ.

***

ಸದಸ್ಯರು, ಮುಖಂಡರು ಸೇರಿ ಮಾತುಕತೆ ನಡೆಸಿದ್ದೇವೆ. ಸದಸ್ಯರ ಅಭಿಪ್ರಾಯ ಪಡೆದಿದ್ದೇವೆ. ಇನ್ನೂ 10 ತಿಂಗಳು ಅಧಿಕಾರ ಅವಧಿ ಇದೆ.
-ಮರಿಗೌಡ ಹುಲಕಲ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT