ಬುಧವಾರ, ಸೆಪ್ಟೆಂಬರ್ 22, 2021
21 °C
ಕೋಟ್ಯಂತರ ರೂಪಾಯಿ ಖರ್ಚಾದರೂ ತಪ್ಪದ ಸಂಕಷ್ಟ, ಸವಾರರ ಪರದಾಟ

ಯಾದಗಿರಿ ಸಮೀಪದ ಹದಗೆಟ್ಟ ವರ್ಕ‌ನಳ್ಳಿ-ಮೈಲಾಪುರ ರಸ್ತೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಯಾದಗಿರಿ ಗಂಜ್‌ ರಸ್ತೆಯಿಂದ ಮೈಲಾಪುರ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ₹4.18 ಕೋಟಿ ಮಂಜೂರು ಆಗಿ ಡಾಂಬರೀಕರಣವಾಗಿದ್ದರೂ ಪ್ರಯಾಣಿಕರ ಗೋಳು ಮಾತ್ರ ತಪ್ಪಿಲ್ಲ.

ರಸ್ತೆ ಡಾಂಬರೀಕರಣವಾಗಿದ್ದರೂ ಅಲ್ಲಲ್ಲಿ ಕಿರು ಸೇತುವೆಗಾಗಿ ನಿರ್ಮಿಸಲು ಬಿಟ್ಟ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಬೈಕ್‌, ಆಟೊ, ಟಂಟಂ, ಕಾರುಗಳ ಸವಾರರು ತೀವ್ರ ತೊಂದರೆ ಪಡುತ್ತಿದ್ದಾರೆ.

ಮಳೆಗಾಲದಲ್ಲಿ ಮತ್ತಷ್ಟು ಹದಗೆಟ್ಟ ರಸ್ತೆ

ಈಗ ಮಳೆಗಾಲವಾಗಿದ್ದರಿಂದ ಆಗಾಗ ತುಂತುರು ಮಳೆ ಸಿಂಚನವಾಗುತ್ತಿದ್ದು, ರಸ್ತೆಯೂ ಕೆಸರಿನಿಂದ ತುಂಬಿದೆ. ತಗ್ಗು ದಿನ್ನೆಗಳು ಬಿದ್ದು, ವಾಹನ ಸವಾರರು ಹತ್ತಿ ಇಳಿಯಬೇಕಾಗಿದೆ.

ವರ್ಕನಳ್ಳಿವರೆಗೆ ಮಾತ್ರ ಡಾಂಬರು ಹಾಕಲಾಗಿದ್ದು, ವರ್ಕನಳ್ಳಿಯಿಂದ ಮೈಲಾಪುರಕ್ಕೆ ತೆರಳುವ ಮಾರ್ಗ ಸಂಪೂರ್ಣ ಹಾಳಾಗಿದೆ. ಪ್ರತಿನಿತ್ಯ ನೂರಾರು ಜನರು ತಮ್ಮ ಹೊಲ, ಗದ್ದೆಗಳಿಗೆ ಇದೇ ಮಾರ್ಗದಲ್ಲಿ ತೆರಳುತ್ತಾರೆ. ಸರ್ಕಾರಕ್ಕೆ ಹಿಡಿ ಶಾಪ ಹಾಕಿಕೊಂಡು ಹೋಗುತ್ತಾರೆ.

4 ಕಿ.ಮೀ ರಸ್ತೆ ಮಾತ್ರ ಪೂರ್ಣ

ಯಾದಗಿರಿಯ ಗಂಜ್‌ ವೃತ್ತದಿಂದ 4 ಕಿ.ಮೀ ಅಂತರವಿರುವ ವರ್ಕನಳ್ಳಿಗೆ ಮಾತ್ರ ರಸ್ತೆ ಡಾಂಬರೀಕರವಾಗಿದ್ದು, ವರ್ಕನಳ್ಳಿಯಿಂದ ಮೈಲಾ‍ಪುರವರೆಗೆ ತಗ್ಗು ದಿನ್ನೆಗಳ ಮೇಲಾಟ ನಡೆದಿದೆ.

ಯಾದಗಿರಿಯಿಂದ ಮೈಲಾ‍ಪುರಕ್ಕೆ ತೆರಳಲು ವರ್ಕನಳ್ಳಿ ಅಡ್ಡರಸ್ತೆಯಾಗಿದ್ದು, ದುರಸ್ತಿ ಕಾಣದೇ ಸಂಪೂರ್ಣ ಹಾಳಾಗಿದೆ. ಇದರಿಂದ ಸವಾರರು ಒಂದು ಬಾರಿ ಬಂದರೆ ತಿರುಗಿ ದೂರವಾದರೂ ರಾಮಸಮುದ್ರ ಮಾರ್ಗವಾಗಿ ಯಾದಗಿರಿಗೆ ತೆರಳುತ್ತಾರೆ.

ಭಾರಿ ವಾಹನಗಳ ಸಂಚಾರ

ರಸ್ತೆ ಹದಗೆಟ್ಟಲು ಭಾರಿ ವಾಹನಗಳ ಸಂಚಾರವೂ ಕಾರಣವಾಗಿದೆ ಎನ್ನುತ್ತಾರೆ ವರ್ಕನಳ್ಳಿ ಗ್ರಾಮಸ್ಥರು.

ಯಾದಗಿರಿಯಿಂದ ಮೈಲಾಪುರ ವರೆಗೆ ತೆರಳುವ ಮಾರ್ಗದಲ್ಲಿ ಅನೇಕ ಕಂಕರ್‌ ಯಂತ್ರಗಳಿದ್ದು, ಪುಡಿಯನ್ನು ಸಾಗಿಸಲು ಭಾರಿ ವಾಹನಗಳು ಸಂಚಾರ ಮಾಡುತ್ತವೆ. ಇದರಿಂದ ಎಷ್ಟು ಗುಣಮಟ್ಟದ ರಸ್ತೆ ನಿರ್ಮಿಸಿದರೂ ಕೇವಲ ಒಂದು ವರ್ಷದಲ್ಲಿ ಡಾಂಬರು ಕಿತ್ತಿ ಹೋಗುತ್ತದೆ. ಈ ರಸ್ತೆಗೆ ಅನುದಾನ ಭರಪೂರ ಬಂದಿದೆ. ಆದರೆ, ಮತ್ತೆ ಮತ್ತೆ ದುರಸ್ತಿಯಾಗುತ್ತದೆ ಎನ್ನುವುದು ಗ್ರಾಮಸ್ಥರ ದೂರಾಗಿದೆ.

‘ಕಳೆದ ಮೂರು ವರ್ಷದಲ್ಲಿ ಈ ರಸ್ತೆಯನ್ನು ಹಲವಾರು ಬಾರಿ ದುರಸ್ತಿ ಮಾಡಲಾಗಿದೆ. ಕೆಲವು ತಿಂಗಳು ಕಳೆದರೆ ಮತ್ತೆ ದುರಸ್ತಿಗೆ ಬರುತ್ತದೆ. ಗುತ್ತಿಗೆದಾರರಿಗೆ ಇದೊಂದು ಜೂಜಾಗಿದೆ. ರಸ್ತೆ ಹದಗೆಡುವುದು, ದುರಸ್ತಿ ಮಾಡುವುದು ಕೆಲಸವಾಗಿದೆ’ ಎಂದು ಗ್ರಾಮಸ್ಥರಾದ ಮೆಹಬೂಬ್‌, ಬಸವರಾಜ, ಮಲ್ಲಯ್ಯ ಹೇಳುತ್ತಾರೆ.

***

ಒಂದೂವರೆ ವರ್ಷದಿಂದ ಬಾರದ ಬಸ್‌

ಜಿಲ್ಲಾ ಕೇಂದ್ರದಿಂದ ವರ್ಕನಳ್ಳಿ ಕೇವಲ 4 ಕಿ.ಮೀ ಅಂತರವಿದ್ದರೂ ಇಲ್ಲಿಗೆ ಬಸ್‌ ಸಂಚಾರವಿಲ್ಲ. ಖಾಸಗಿ ವಾಹನ, ಬೈಕ್‌, ಟಂಟಂ, ಆಟೊಗಳಿಗೆ ಜನರಿಗೆ ಗತಿಯಾಗಿದೆ. ಆರೋಗ್ಯ ಸಮಸ್ಯೆಯಾದರೆ ಅಂಬುಲೆನ್ಸ್‌ ಬರಲು ಕೂಡ ರಸ್ತೆ ಹದಗೆಟ್ಟಿದ್ದರಿಂದ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತಿದೆ.

‘ಈ ಹಿಂದೆ ಬಸ್‌ ಕಾರ್ಯಾಚರಣೆ ಮಾಡುತ್ತಿತ್ತು. ಆದರೆ, ಪ್ರಯಾಣಿಕರೇ ಬಸ್‌ಗೆ ಬರದ್ದರಿಂದ ಬಸ್‌ ನಿಲ್ಲಿಸಲಾಗಿದೆ. ಆದಾಯವೂ ಇಲ್ಲದಿದ್ದರಿಂದ ಬಸ್‌ ನಿಲ್ಲಿಸಲಾಗಿದೆ’ ಎಂದು ಸಾರಿಗೆ ಅಧಿಕಾರಿಗಳು ಹೇಳುತ್ತಾರೆ. 

***

ವರ್ಕನಳ್ಳಿ–ಮೈಲಾಪುರ ರಸ್ತೆ ಕೆಲ ಭಾಗದಲ್ಲಿ ನ್ಯಾಯಾಲಯದಲ್ಲಿ ದಾವೆ ಇದೆ. ಇದರಿಂದ ರಸ್ತೆ ದುರಸ್ತಿಗೆ ಸಮಸ್ಯೆ ಆಗಿದೆ
ವೆಂಕಟರೆಡ್ಡಿ ಮುದ್ನಾಳ, ಯಾದಗಿರಿ ಶಾಸಕ

***

ವರ್ಕನಳ್ಳಿ–ಮೈಲಾಪುರ ರಸ್ತೆ ಹಾಳಾಗಿರುವ ಬಗ್ಗೆ ಪರಿಶೀಲಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು
ಅಮೀನ್‌ ಮುಕ್ತಾರ, ಪಿಡಬ್ಲ್ಯೂಡಿ ಎಇ

***

ಯಾದಗಿರಿಯ ಮೈಲಾಪುರ ಅಗಸಿಯಿಂದ ಮಸ್ಕನಳ್ಳಿವರೆಗೆ ಬಸ್‌ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಆದರೆ, ಪ್ರಯಾಣಿಕರು ಬಾರದ ಬಸ್‌ ನಿಲ್ಲಿಸಲಾಗಿದೆ
ಶಿವಶಂಕರ ಬಿರಾದಾರ್, ಟ್ರಾಫಿಕ್‌ ಇನ್ಸ್‌ಪೆಕ್ಟರ್‌

***

ಅಧಿಕಾರಿಗಳು, ಜನಪ್ರತಿನಿಧಿಗಳು ತಗ್ಗು ಬಿದ್ದ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು
ಮಹಮ್ಮದ್‌ ಇಸ್ಮಾಯಿಲ್‌, ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.