ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಮತದಾರರ ಪಟ್ಟಿಯ ಪರಿಷ್ಕರಣೆಗೆ ಚಾಲನೆ

Last Updated 10 ನವೆಂಬರ್ 2021, 15:30 IST
ಅಕ್ಷರ ಗಾತ್ರ

ಸುರಪುರ: ‘ಮತದಾರರ ಪಟ್ಟಿಗೆ 18 ವರ್ಷ ಮೇಲ್ಪಟ್ಟ ನೂತನ ಮತದಾರರನ್ನು ಸೇರಿಸುವುದು ಮತ್ತು ಹೆಸರು ಬಿಟ್ಟು ಹೋಗಿದ್ದರೆ, ಡಿಲಿಟ್ ಆಗಿದ್ದರೆ, ಸಾಕ್ಷಿ ಪಡೆದು ಮತದಾರ ಪಟ್ಟಿಯಲ್ಲಿ ಸೇರಿಸಿ ಮತದಾನ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸುವಂತೆ ಮಾಡುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಮತ್ತು ಬೂತ್ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಅ. 9 ರಿಂದ ಜ. 22ರವರೆಗೆ ಮತದಾರ ಪಟ್ಟಿಯ ಪರಿಷ್ಕರಣೆ ಹಾಗೂ ನ. 26 ರಿಂದ 28ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

‘ಮರಣ ಹೊಂದಿದವರು, ಸ್ಥಳಾಂತರ ಮಾಡಿದವರನ್ನು ಸಾಕ್ಷಿದಾರರನ್ನು ಸಂಪರ್ಕಿಸಿ ಮತದಾರ ಪಟ್ಟಿಯಿಂದ ತೆಗೆದು ಹಾಕಬೇಕು. ದ್ವಿತೀಯ ಪಿಯು ಮುಗಿಸಿದ, ಫೇಲಾದ, ಬೇರೆ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡುತ್ತಿರುವವರ ಮಾಹಿತಿಯನ್ನು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಂದ ಪಡೆದು ಮತದಾರರ ಪಟ್ಟಿಗೆ ಸೇರ್ಪಡೆ ಗೊಳಿಸಬೇಕು. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು’ ಎಂದು ಸೂಚಿಸಿದರು.

‘ಶತಾಯುಷಿಗಳು, 82 ರಿಂದ 99 ವಯೋಮಾನದ 846 ಜನರಿದ್ದು ವಯಸ್ಸಿನ ದಾಖಲಾತಿಯನ್ನು ಪುನರ್ ಪರಿಶೀಲಿಸಬೇಕು. ದಾಖಲಾತಿಯಲ್ಲಿ ತಪ್ಪಾಗಿದ್ದರೆ ಸರಿಪಡಿಸಿಕೊಡಬೇಕು. ಅವರು ಜೀವಂತವಾಗಿದ್ದಾರೆಯೇ ಇಲ್ಲವೇ ಎಂಬುದುನ್ನು ಖಾತರಿಪಡಿಸಿಕೊಳ್ಳಬೇಕು. ವಯಸ್ಸಿನ ಖಚಿತ ಮಾಹಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿ ನಿರ್ಧರಿಸಿ ಖಚಿತವಾಗಿಸಿಕೊಳ್ಳಬೇಕು’ ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಮಹಾದೇವ ರೆಡ್ಡಿ, ತರಬೇತುದಾರ ಹಣಮಂತ ಪೂಜಾರಿ, ಚುನಾವಣೆ ಶಿರಸ್ತೇದಾರ ಸುನೀಲ್ ಪುಲ್ಸೆ, ವಿಷಯ ನಿರ್ವಾಹಕ ಕಾರ್ತಿಕ್, ಇಬ್ರಾಹಿಂ, ಗ್ರಾಮ ಲೆಕ್ಕಿಗರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT