ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮೈಲಾರಲಿಂಗೇಶ್ವರ ಜಾತ್ರೆ ರದ್ದು

ಜಿಲ್ಲಾಧಿಕಾರಿ ಭೇಟಿ; ಗ್ರಾಮದ ಸುತ್ತ ಸೆಕ್ಷನ್ 144 ಜಾರಿ
Last Updated 14 ಜನವರಿ 2022, 5:16 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್ ರೂಪಾಂತರಿ ತಳಿ ಓಮೈಕ್ರಾನ್ ಸೋಂಕು ನಿಯಂತ್ರಣಕ್ಕೆ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ರದ್ದು ಮಾಡಲಾಗಿದ್ದು, ನೆರೆ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಭಕ್ತರು ಮತ್ತು ಇತರೆ ವಾಹನಗಳು ಬರದಂತೆ ತಡೆದು ವಾಪಸ್ ಕಳುಹಿಸಿ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಮೈಲಾಪುರ ಗ್ರಾಮಕ್ಕೆ ಗುರುವಾರ ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಶೀಲಿಸಿದರು.

ದೇವಸ್ಥಾನದ ಜಾತ್ರೆಯಲ್ಲಿ ಕುರಿಗಳನ್ನು ಹಾರಿಸುವ ಮುಖಾಂತರ ಭಕ್ತರು ಕಾಣಿಕೆ ಕೊಡುವ ವಾಡಿಕೆ ಇದೆ. ಚೆಕ್‌ಪೋಸ್ಟ್‌ನಲ್ಲಿ ಕುರಿಗಳನ್ನು ತಡೆದು ವಶಕ್ಕೆ ಪಡೆದು, ಭಕ್ತರಿಗೆ ರಸೀದಿ ಕೊಡುವಂತೆ ತಿಳಿಸಿದರು.

ಜಾತ್ರಾ ಚೆಕ್‌ಪೋಸ್ಟ್‌ನಲ್ಲಿ ಕೋವಿಡ್ ತಪಾಸಣೆ ಮಾಡಿ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸಿಬ್ಬಂದಿ ನಿಯೋಜಿತರಾಗಿದ್ದಾರೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ದೇವಸ್ಥಾನದಲ್ಲಿ ಸುಮಾರು 20 ತಂಡ ರಚಿಸಲಾಗಿದೆ ಎಂದು ಹೇಳಿದರು.

ಜಾತ್ರೆಯ‌ಲ್ಲಿ ಜನದಟ್ಟಣೆ ಸೇರುವುದರಿಂದ ಗ್ರಾಮದ ಸುತ್ತ ಒಂದು ಕಿ.ಮೀ. ವ್ಯಾಪ್ತಿ ಪ್ರದೇಶಕ್ಕೆ ಅನ್ವಯಿಸುವಂತೆ ಸೆಕ್ಷನ್144 ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ದೇವಸ್ಥಾನಕ್ಕೆ ಸ್ಥಳೀಯ ಗ್ರಾಮಗಳಿಂದ ಬರುವ 50 ಜನಕ್ಕೆ ಮಾತ್ರ ಅವಕಾಶ ಕಲ್ಪಿಸಿ ಸರಳವಾಗಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಸಲಾಗಿದೆ. ವ್ಯಕ್ತಿಗತ ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ ಹಾಗೂ ಸ್ಯಾನಿಟೈಸರ್ ಬಳಸಿ ಕೋವಿಡ್‌ ಮಾರ್ಗಸೂಚಿ ಪಾಲಿಸುವಂತೆ ತಿಳಿಹೇಳಿದರು.

ಚೆಕ್‌ಪೋಸ್ಟ್ ಮಾತ್ರವಲ್ಲದೇ ಪ್ರತಿ 100 ಮೀಟರ್ ಅಂತರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಇಬ್ಬರು ಡಿವೈಎಸ್ಪಿ, 15 ಸಿಪಿಐ, 30 ಪಿಎಸ್ಐ ಹಾಗೂ 350ಕ್ಕೂ ಅಧಿಕ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಹೆಡ್ ಕಾನ್‌ಸ್ಟೆಬಲ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ವಿವಿಧ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಮ್ಮ ಜಿಲ್ಲೆಯಿಂದ ಭಕ್ತರು ಬರದಂತೆ ತಡೆಯಲು ಮನವಿ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಧ್ವನಿವರ್ಧಕ ಬಳಸಿ ಸಾರ್ವಜನಿಕವಾಗಿ ಜಾತ್ರೆ ನಿಷೇಧದ ಕುರಿತು ಪ್ರಕಟಣೆ ಹೊರಡಿಸಿ ಎಂದು ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ವೇದಮೂರ್ತಿ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ, ಇತರೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT