ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಬಹುಮಹಡಿ ಕಟ್ಟಡಗಳಲ್ಲಿ ಕಾಣದ ‘ಪಾರ್ಕಿಂಗ್‌’

ವಿವಿಧೆಡೆ ವಾಹನ ನಿಲುಗಡೆಗೆ ನಿಗದಿಯಾಗದ ಸ್ಥಳ; ಅಧಿಕಾರಿಗಳ ದಿವ್ಯ ಮೌನ
Last Updated 21 ನವೆಂಬರ್ 2021, 16:27 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಪಟ್ಟಣ, ನಗರಗಳು ಬೆಳೆಯುವುದರ ಜೊತೆಗೆ ಹೊಸ ಹೊಸ ಮಾದರಿಯ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಆದರೆ, ವಾಹನಗಳ ಸಂಖ್ಯೆಗೆ ತಕ್ಕಂತೆ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ವಿವಿಧ ಕಡೆಗಳಲ್ಲಿ ರಸ್ತೆಯೇ ವಾಹನ ನಿಲ್ಲಿಸುವ ತಾಣವಾಗಿದೆ.

ನಗರ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳು ಎಲೆ ಎತ್ತುತ್ತಿವೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಪಾರ್ಕಿಂಗ್‌ ಸ್ಥಳ ಗುರುತಿಸಿ ಮೀಸಲೀಡಬೇಕು. ಆದರೆ, ನಗರದಲ್ಲಿ ಇದ್ಯಾವುದು ಪಾಲನೆಯಾಗುತ್ತಿಲ್ಲ. ಕಟ್ಟಡ ಮಾಲಿಕರು ಈ ಬಗ್ಗೆ ಕಿಂಚಿತ್ತೂ ಯೋಚನೆ ಮಾಡಿಲ್ಲ.

ಜಿಲ್ಲೆಯ ನಗರ ಪ್ರದೇಶಗಳಲ್ಲಿ ಕಟ್ಟಡ ಪರವಾನಗಿಯನ್ನು ನಗರಸಭೆ, ಪುರಸಭೆಗಳು ನೀಡುತ್ತವೆ. ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗುತ್ತಿದೆ. ಎರಡು ಅಂತಸ್ತು ನಿರ್ಮಾಣಕ್ಕೆ ಮಾತ್ರ ಪರವಾನಗಿ ನೀಡಿದರೆ ಮತ್ತಷ್ಟು ಅಂತಸ್ತು ನಿರ್ಮಾಣಕ್ಕೆ ಬೆಂಗಳೂರಿಗೆ ತೆರಳಿ ಅಲ್ಲಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ, ಪರವಾನಗಿಯಲ್ಲಿ ಹೇಳಿದಂತೆ ಯಾವುದೂ ಪಾಲನೆಯಾಗುವುದಿಲ್ಲ.

ಜಿಲ್ಲಾ ಕೇಂದ್ರವಾದ ನಗರದಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿವೆ. ಆದರೆ, ವಾಹನಗಳ ಪಾರ್ಕಿಂಗ್‌ಗಾಗಿ ಎಲ್ಲಿಯೂ ಪ್ರತ್ಯೇಕ ಸ್ಥಳ ಕಾಣಸಿಗುವುದಿಲ್ಲ. ಕೇವಲ ಕಟ್ಟಡ ನಿರ್ಮಾಣ ಮಾತ್ರ ಮಾಡಿ ರಸ್ತೆಯ ಬದಿಯೇ ವಾಹನ ನಿಲ್ಲಿಸುವಂತ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ.

ಇದು ಕಟ್ಟಡಗಳ ಪರಿಸ್ಥಿತಿಯಾದರೆ ನಗರದಲ್ಲಿ ರೈಲ್ವೆ ನಿಲ್ದಾಣ, ಮಹಾತ್ಮ ಗಾಂಧಿ ವೃತ್ತ ಬಿಟ್ಟರೆ ಬೇರೆ ಕಡೆ ವಾಹನಗಳ ಪಾರ್ಕಿಂಗ್‌ ಸ್ಥಳವನ್ನೇ ಪೊಲೀಸರು ಗುರುತಿಸಿಲ್ಲ. ಇದರಿಂದ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದು ಸಾಮಾನ್ಯವಾಗಿದೆ.

ಪಾದಚಾರಿ ಮಾರ್ಗ ಅತಿಕ್ರಮಣ

ಪಾರ್ಕಿಂಗ್‌ ಸ್ಥಳ ಇಲ್ಲದಿರುವುದು ಒಂದೊಂಡೆಯಾದರೆ ಪಾದಚಾರಿ ಮಾರ್ಗದ ಅತಿಕ್ರಮಣ ಮತ್ತೊಂದು ಬಗೆಯದ್ದಾಗಿದೆ. ಇದರಿಂದ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಲಾಗುತ್ತಿದೆ.

ಬಸವೇಶ್ವರ ಗಂಜ್‌ನಿಂದ ಜಿಲ್ಲಾಧಿಕಾರಿ ಕಚೇರಿ ಇರುವ ಚಿತ್ತಾಪುರ ರಸ್ತೆಯೂ ಯಾವಾಗಲೂ ವಾಹನಗಳಿಂದ ಗಿಜಿಗುಡುತ್ತದೆ. ಅಲ್ಲಲ್ಲಿ ವಾಹನ ದಟ್ಟಣೆಯೂ ಆಗುತ್ತದೆ. ಗಂಜ್‌ ವೃತ್ತದಲ್ಲಿ ಹೋಟೆಲ್‌ಗಳಿದ್ದು, ರಸ್ತೆ ಬದಿಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಎರಡು ವಾಹನಗಳು ಎದುರು ಬಂದರೆ ಪರದಾಡುವ ಪರಿಸ್ಥಿತಿ ಇದೆ.

ಇನ್ನು, ತಹಶೀಲ್ದಾರ್‌ ಕಚೇರಿ, ನ್ಯಾಯಾಲಯದ ರಸ್ತೆ, ರೈಲ್ವೆ ಸ್ಟೇಷನ್‌ ರಸ್ತೆ, ಹೊಸ, ಹಳೆ ಬಸ್‌ ನಿಲ್ದಾಣ ರಸ್ತೆಯ ಬದಿಯಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಲಾಗುತ್ತಿದೆ. ಇಲ್ಲಿ ಸಂಚಾರ ಪೊಲೀಸರು ಕಾರ್ಯನಿರ್ವಹಿಸಿದರೂ ಅವರು ಅಸಹಾಯಕರಾಗಿದ್ದಾರೆ.

‘ಬಹುಮಹಡಿ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು. ವಿದ್ಯುತ್‌ ಪರಿವರ್ತಕವೂ ತಮ್ಮ ಆವರಣದಲ್ಲಿ ಅಳವಡಿಸಿಕೊಳ್ಳಬೇಕು. ಆದರೆ, ಪಾರ್ಕಿಂಗ್‌ಗೆ ಜಾಗ ಬಿಡದೇ ರಸ್ತೆ ಬದಿ ನಿಲ್ಲಿಸುವಂತೆ ಮಾಡಲಾಗಿದೆ. ಈ ಬಗ್ಗೆ ಕಟ್ಟಡ ಪರವಾನಗಿ ನೀಡುವ ಎಂಜಿನಿಯರ್‌ಗಳಿಗೆ ತಿಳಿಸಿ ಸರ್ವೆ ಮಾಡಿಸಲಾಗುವುದು. ಎಲ್ಲ ಕಟ್ಟಡ ಮಾಲೀಕರು ಸರ್ಕಾರದ ಮಾರ್ಗಸೂಚಿಯಂತೆ ಕಟ್ಟಡ ನಿರ್ಮಾಣ ಮಾಡಬೇಕು’ ಎನ್ನುತ್ತಾರೆ ಯಾದಗಿರಿ ಪ್ರಭಾರಿ ನಗರಸಭೆ ಪೌರಾಯುಕ್ತ ಬಕ್ಕಪ್ಪ ಹೊಸಮನಿ ಅವರು.

ಸುರಪುರ: ಪಾರ್ಕಿಂಗ್ ಸಮಸ್ಯೆಯಿಂದ ಕಿರಿಕಿರಿ

ಸುರಪುರ: ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದೆ. ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಪೊಲೀಸರು ಮಾರುಕಟ್ಟೆ, ಇತರ ಮುಖ್ಯ ರಸ್ತೆಗಳಲ್ಲಿ ಒಂದು ದಿನ ಒಂದು ಬದಿಗೆ ಮರು ದಿನ ಇನ್ನೊಂದು ಬದಿಗೆ ವಾಹನ ನಿಲ್ಲಿಸಲು ಆದೇಶ ಮಾಡಿದ್ದರೂ ಪಾಲನೆಯಾಗುತ್ತಿಲ್ಲ.

ಬಸ್‌ ನಿಲ್ದಾಣ, ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ ಇತರ ಜನನಿಬಿಡ ಪ್ರದೇಶದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಜನರಿಗೆ ಕಿರಕಿರಿಯಾಗಿದೆ.

ಕೆನರಾ ಬ್ಯಾಂಕ್, ಎಸ್‌ಬಿಐ, ಕರ್ಣಾಟಕ ಬ್ಯಾಂಕ್ ಇತರ ಬ್ಯಾಂಕ್‌ಗಳ ಮುಂದೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ಹನುಮಾನ ಟಾಕೀಜ ರಸ್ತೆಯಲ್ಲಿ ವಾಹನಗಳನ್ನು ರಸ್ತೆಯ ಬದಿಗೆ ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಗಾಂಧಿವೃತ್ತದಿಂದ ತಹಶೀಲ್ದಾರ್ ಕಚೇರಿ ರಸ್ತೆ, ಬಸ್‌ನಿಲ್ದಾಣದಿಂದ ಗಾಂಧಿವೃತಕ್ಕೆ ತೆರಳಲು ಸಾರಿಗೆ ಬಸ್‌ಗಳ ಚಾಲಕರು ಪರದಾಡುವಂತಾಗಿದೆ.

ಹೆದ್ದಾರಿಯೇ ವಾಹನ ನಿಲುಗಡೆಯ ತಾಣ

ಶಹಾಪುರ: ಶಹಾಪುರ ನಗರದ ಹೃದಯಭಾಗವನ್ನು ಸೀಳಿ ಬೀದರ್‌-ಶ್ರೀರಂಗಪಟ್ಟಣದ ರಾಜ್ಯ ಹೆದ್ದಾರಿ ಸಾಗಿದೆ. ನಗರದಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕವಾದ ವ್ಯವಸ್ಥೆ ಇಲ್ಲ. ಹೆದ್ದಾರಿ ಮೇಲೆ ವಾಹನ ನಿಲ್ಲಿಸುವುದು ಇಲ್ಲಿ ಸಾಮಾನ್ಯವಾಗಿದೆ.

‘ನಗರದ ರಾಕಂಗೇರಾದಿಂದ ಆರಂಭವಾಗಿ ಭೀಮರಾಯನಗುಡಿವರೆಗೆ ವಿಪರೀತ ವಾಹನ ದಟ್ಟಣೆ ಇದೆ. ಸುಮಾರು 10 ಕಿ.ಮೀ ರಸ್ತೆದಾಟಲು 45 ನಿಮಿಷ ಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಹೆದ್ದಾರಿ ಮೇಲೆ ವಾಹನ ನಿಲ್ಲಿಸುವುದು ಆಗಿದೆ’ ಎನ್ನುತ್ತಾರೆ ನಗರದ ನಿವಾಸಿಯೊಬ್ಬರು.

ನಗರದ ಹಳೆ ಬಸ್ ನಿಲ್ದಾಣದ ಸುತ್ತಮುತ್ತಲು ವಸತಿಗೃಹ, ಸಿನಿಮಾ ಥೇಟರ್, ಆಸ್ಪತ್ರೆ, ಮದ್ಯದಂಗಡಿ, ಬ್ಯಾಂಕ್ ಹಾಗೂ ಶಾಲಾ–ಕಾಲೇಜುಗಳಿವೆ. ಇದರಿಂದ ಹೆಚ್ಚಿನ ಜನದಟ್ಟಣೆ ಇದೆ.

‘ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ನಗರಸಭೆಯು ಪ್ರತ್ಯೇಕವಾಗಿ ವಾಹನ ನಿಲುಗಡೆಯ ಜಾಗವನ್ನು ಕಾಯ್ದಿರಿಸಿದ ನಂತರ ಪರವಾನಗಿ ನೀಡಿರುತ್ತದೆ. ಅದರಂತೆ ಕಟ್ಟಡ ನಿರ್ಮಾಣದ ನಕ್ಷೆಯಲ್ಲಿ ಇರುತ್ತದೆ. ಆದರೆ, ನಂತರ ಎಲ್ಲವೂ ಉಲ್ಟಾ ಪಲ್ಟಾ ಆಗುತ್ತದೆ. ಕಟ್ಟಡದ ನೆಲಮಹಡಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ನೀಡುತ್ತಾರೆ. ವಿಚಿತ್ರವೆಂದರೆ ಅದೇ ಕಟ್ಟಡದ ಮುಂದಿನ ಹೆದ್ದಾರಿ ಜಾಗದಲ್ಲಿ ವಾಹನ ನಿಲ್ಲಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ರಾಜಕೀಯ ಒತ್ತಡ ಹಾಕಿ ಮೌನಕ್ಕೆ ಶರಣಾಗಬೇಕು. ಏನೂ ಮಾಡದ ಅಸಹಾಯಕ ಸ್ಥಿತಿ ನಮ್ಮದಾಗಿದೆ’ ಎನ್ನುತ್ತಾರೆ ನಗರಸಭೆಯ ಸಿಬ್ಬಂದಿ ಒಬ್ಬರು.

‘ಪಾದಚಾರಿಗಳ ಜಾಗದಲ್ಲಿ ಅನಧಿಕೃತವಾಗಿ ಡಬ್ಬಗಳನ್ನು ಇಟ್ಟಿದ್ದಾರೆ. ಅಲ್ಲದೆ ತಳ್ಳು ಬಂಡಿ ಹೆದ್ದಾರಿಗೆ ಹೊಂದಿಕೊಂಡು ನಿಲ್ಲಿಸುವುದು ಇಲ್ಲಿ ಸಾಮಾನ್ಯವಾಗಿದೆ. ಹೆದ್ದಾರಿ ಮೇಲೆ ವಾಹನ ನಿಲ್ಲಿಸಿರುವುದನ್ನು ಗಮನಿಸಿ ಪೊಲೀಸರು ದಂಡ ಹಾಕಲು ಮುಂದಾದರೆ ಮೊದಲು ವಾಹನ ನಿಲುಗಡೆಯ ಜಾಗ ತೋರಿಸಿ. ಅಲ್ಲದೆ ಕಟ್ಟಡ ಮಾಲೀಕರು ಅಕ್ರಮವಾಗಿ ನಿರ್ಮಿಸಿದ ವಾಣಿಜ್ಯ ಮಳಿಗೆಯ ಜಾಗದಲ್ಲಿ ವಾಹನ ನಿಲುಗಡೆ ಸ್ಥಳದ ವ್ಯವಸ್ಥೆ ಕಲ್ಪಿಸಿ ಎಂದು ಮರು ಪ್ರಶ್ನಿಸುತ್ತಾರೆ’ ಎಂದು ಪೊಲೀಸ್‌ ಅಧಿಕಾರಿ ಒಬ್ಬರು ಬೇಸರ ವ್ಯಕ್ತಪಡಿಸಿದರು.

ಹೆದ್ದಾರಿ ಮೇಲಿನ ಸುಗಮ ಸಂಚಾರಕ್ಕೆ ಪ್ರತ್ಯೇಕ ವಾಹನ ನಿಲುಗಡೆ ಸ್ಥಳದ ವ್ಯವಸ್ಥೆ ಮಾಡಿ. ಕಟ್ಟಡದಲ್ಲಿ ಅಕ್ರಮವಾಗಿ ವಾಹನ ನಿಲುಗಡೆಯ ಸ್ಥಳವನ್ನು ದುರ್ಬಳಕೆ ಮಾಡಿಕೊಂಡು ಮಳಿಗೆ ನಿರ್ಮಿಸಿದ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಾಹನ ದಟ್ಟಣೆಯ ಬವಣೆಯನ್ನು ಎದುರಿಸುತ್ತಿರುವ ಜನತೆ ಮನವಿ ಮಾಡಿದ್ದಾರೆ.

***

ನಗರದಲ್ಲಿ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳಲ್ಲಿ ಪಾರ್ಕಿಂಗ್‌ ಸ್ಥಳ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸರ್ವೆ ಮಾಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು

- ಬಕ್ಕಪ್ಪ ಹೊಸಮನಿ, ಪ್ರಭಾರಿ ನಗರಸಭೆ ಪೌರಾಯುಕ್ತ ಯಾದಗಿರಿ

***

ನಗರ ಪ್ರದೇಶದಲ್ಲಿ ಬೇಕಾಬಿಟ್ಟಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಪಾರ್ಕಿಂಗ್‌ಗೆ ಸೂಕ್ತ ಸ್ಥಳ ನಿಗದಿ ಮಾಡಬೇಕು

- ಚಂದ್ರಶೇಖರ ದಾಸನಕೇರಿ, ನಗರ ನಿವಾಸಿ

***

ನಗರಸಭೆ ಸೂಕ್ತ ಸ್ಥಳ ಗುರುತಿಸಿ ಅಲ್ಲಿ ಪಾರ್ಕಿಂಗ್‌ಗೆ ಅನುಕೂಲ ಕಲ್ಪಿಸಬೇಕು. ಟೆಂಡರ್ ಕರೆದು ವ್ಯವಸ್ಥೆ ಮಾಡಿದರೆ ವಾಹನಗಳ ನಿಲುಗಡೆಗೆ ಅನುಕೂಲವಾಗುತ್ತದೆ

- ಭೀಮರಾಯ ಸಿಂಧಗಿರಿ, ಸಾಮಾಜಿಕ ಕಾರ್ಯಕರ್ತ ಸುರಪುರ

***

ಪಾರ್ಕಿಂಗ್ ವ್ಯವಸ್ಥೆ ನಮ್ಮ ಸುಪರ್ದಿಗೆ ಬರುವುದಿಲ್ಲ. ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸ್ಥಳ ಇಲ್ಲ. ಪೊಲೀಸರು ಸಂಚಾರ ನಿಯಂತ್ರಣ ಮಾಡುತ್ತಾರೆ

- ಜೀವನಕುಮಾರ ಕಟ್ಟಿಮನಿ,ಪೌರಾಯುಕ್ತ ಸುರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT