ಶುಕ್ರವಾರ, ಮಾರ್ಚ್ 31, 2023
26 °C
ಕ್ಷೇತ್ರದ ಮೇಲೆ ತೆರೆಮರೆಯಲ್ಲಿ ಹಲವರು ಕಣ್ಣು

ಯಾದಗಿರಿ ಕ್ಷೇತ್ರ ಸ್ಥಿತಿ-ಗತಿ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮೂರು ತಾಲ್ಲೂಕುಗಳನ್ನು ಹಂಚಿಕೊಂಡಿರುವ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇದೆ. ಯಾದಗಿರಿ, ಶಹಾಪುರ, ವಡಗೇರಾ ತಾಲ್ಲೂಕಿನ ಗ್ರಾಮಗಳನ್ನು ಕ್ಷೇತ್ರ ಒಳಗೊಂಡಿದೆ. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು 2018ರಲ್ಲಿ ಬಿಜೆಪಿ ತನ್ನ ತೆಕ್ಕೆಗೆ ಪಡೆಯಿತು.

ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ವಡಗೇರಾ ತಾಲ್ಲೂಕು ಕೇಂದ್ರವಾದರೂ ಇನ್ನೂ ಗ್ರಾಮ ಪಂಚಾಯಿತಿ ಸ್ಥಾನಮಾನದಲ್ಲಿದೆ. ಜಿಲ್ಲಾ ಕೇಂದ್ರ ಯಾದಗಿರಿಗಿಯಿಂದ ಭೀಮಾ ನದಿ ದಾಟಿದರೆ ವಡಗೇರಾ ತಾಲ್ಲೂಕು ವ್ಯಾಪ್ತಿ ಹೊಂದಿದೆ. ಎರಡು ನದಿಗಳಿದ್ದರೂ ಸಂಪೂರ್ಣ ನೀರಾವರಿ ಹೊಂದಿಲ್ಲ. ಗುಳೆ, ಅನಕ್ಷರತೆ, ಬಡತನ ಸಾಮಾನ್ಯವಾಗಿದೆ.

ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಬಿಜೆಪಿ ಶಾಸಕರಾಗಿದ್ದು, ಪುನರಾಯ್ಕೆ ಬಯಸಿದ್ದಾರೆ. ಟಿಕೆಟ್‌ ಸಿಕ್ಕರೆ ಸ್ಪರ್ಧಿಸುವುದಾಗಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ‌ಮಾಜಿ ಶಾಸಕ ವೀರಬಸವಂತರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್‌ನ ಭದ್ರಕೋಟೆ: ಒಂದು ಕಾಲದಲ್ಲಿ ಯಾದಗಿರಿ ಮತಕ್ಷೇತ್ರ ಕಾಂಗ್ರೆಸ್‌ನ ಭದ್ರವಾದ ಕೋಟೆಯಾಗಿತ್ತು. ಎ.ಬಿ.ಮಾಲಕರಡ್ಡಿ 6 ಬಾರಿ ಗೆದ್ದು ಇದೇ ಕ್ಷೇತ್ರದಿಂದ ಸಚಿವರು ಆಗಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಕಾಂಗ್ರೆಸ್‌ ಕೋಟೆಯನ್ನು ಛಿದ್ರಮಾಡಿತು. ಈಗ ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್‌ ಯತ್ನಿಸಿದರೆ, ಜೆಡಿಎಸ್‌ ಇನ್ನೂ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದಿದ್ದರೆ ಜೆಡಿಎಸ್‌ನಿಂದ ಸ್ಪರ್ಧಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಕ್ಷೇತ್ರವನ್ನು ಉಳಿಸಿಕೊಳ್ಳಲು ಕಸರತ್ತು ನಡೆಸಿರುವ ಬಿಜೆಪಿ ಗ್ರಾಮೀಣ ಪ್ರದೇಶದಲ್ಲಿ ಕ್ರಿಕೆಟ್‌ ಟೂರ್ನಿ ಏರ್ಪಡಿಸಿತ್ತು. ಕಾಂಗ್ರೆಸ್‌ ಹೊನಲು ಬೆಳಕಿನ ಕಬ್ಬಡ್ಡಿ, ಕ್ರಿಕೆಟ್‌, ವಾಲಿಬಾಲ್‌ ಟೂರ್ನಿ  ಆಯೋಜಿಸಿತ್ತು.

ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸಬೇಕು ಎಂದು ಪಣ ತೊಣಪಟ್ಟಿರುವ ಹಲವು ಮುಖಂಡರು ಟಿಕೆಟ್‌ ಆಕಾಂಕ್ಷಿಗಳು ತಮ್ಮ ಟ್ರಸ್ಟ್‌, ಫೌಂಡೇಷನ್‌ಗಳಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯುವ ಕೆಲಸಗಳು ಬಿರುಸು ಪಡೆದಿವೆ.

ಯಾದಗಿರಿ ಮತಕ್ಷೇತ್ರದಲ್ಲಿ 2018ರಲ್ಲಿ 10 ಪಕ್ಷಗಳು ಸ್ಪರ್ಧಿಸಿದ್ದವು. ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ 62,227 ಮತ ಪಡೆದು ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಅಭ್ಯರ್ಥಿ ಎ.ಬಿ.ಮಾಲಕರಡ್ಡಿ ಅವರನ್ನು ಮಣಿಸಿದ್ದರು. 12,881 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಯಾದಗಿರಿ ಮತಕ್ಷೇತ್ರ

ಹಾಲಿ ಶಾಸಕ

ವೆಂಕಟರೆಡ್ಡಿ ಮುದ್ನಾಳ (ಬಿಜೆಪಿ)

ಹಾಲಿ ಮತದಾರರ ವಿವರ

ಪುರುಷರು;ಮಹಿಳೆಯರು;ಒಟ್ಟು

1,81,033;1,82,559;3,63,592

2018ರ ಚುನಾವಣಾ ಫಲಿತಾಂಶ

ಬಿಜೆಪಿ;ಕಾಂಗ್ರೆಸ್‌;ಜೆಡಿಎಸ್‌

62,227;49,346;25,774

ರಡ್ಡಿ, ಲಿಂಗಾಯತ, ಹಿಂದುಳಿದ ವರ್ಗ

ಯಾದಗಿರಿ ಮತಕ್ಷೇತ್ರದಲ್ಲಿ ರಡ್ಡಿ, ಲಿಂಗಾಯತ, ಹಿಂದುಳಿದ ವರ್ಗದ ಮತದಾರರು ಹೆಚ್ಚಿದ್ದಾರೆ. ಹಲವು ಸಲ ಮೇಲ್ವರ್ಗಕ್ಕೆ ಟಿಕೆಟ್‌ ನೀಡಲಾಗಿದ್ದು, ಅಹಿಂದ ಸಮಯದಾಯದವರಿಗೆ ಈ ಬಾರಿ ಟಿಕೆಟ್‌ ನೀಡಬೇಕು ಎಂಬುದು ಹಿಂದುಳಿದ ವರ್ಗಗಳ ಬೇಡಿಕೆಯಾಗಿದೆ. ಈ ಬಾರಿಯೂ ಹಿಂದುಳಿದ ವರ್ಗದಿಂದ ಹಲವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ರಡ್ಡಿ ನಡೆ ಕುತೂಹಲ

ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವ ಎ.ಬಿ.ಮಾಲಕರಡ್ಡಿ ನಡೆ ನಿಗೂಢವಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸೋತ ಬಳಿಕ ಬಿಜೆಪಿ ಸೇರಿದ್ದು, ಬಿಜೆಪಿಯಿಂದಲೂ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಇವರ ಪುತ್ರಿ ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದು, ಅವರ ನಡೆ ಏನು ಎಂಬುದು ಕ್ಷೇತ್ರದ ಜನರಲ್ಲಿ  ಕುತೂಹಲ ಮೂಡಿಸಿದೆ.

ಮಾಲಕರಡ್ಡಿ ಸೋತರೂ ಕ್ಷೇತ್ರದಲ್ಲಿ ತಮ್ಮ ಹಿಡಿದ ಕಾಪಾಡಿಕೊಂಡಿದ್ದಾರೆ. 6 ಬಾರಿ ಗೆದ್ದಿರುವ ಅವರಿಗೆ ರಾಜಕೀಯ ಪಟ್ಟುಗಳು ಸಲಿಸಲಾಗಿವೆ. ಕೆಲ ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವನನ್ನು ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯ ಬಿಜೆಪಿಯಲ್ಲೇ ಇದ್ದೇನೆ ಎಂದು ಹೇಳಿಕೊಂಡರೂ ಪಕ್ಷದ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಇದರಿಂದ ಅವರು ಯಾವ ಕಡೆ ಹೆಜ್ಜೆ ಇಡುತ್ತಾರೆ ಎಂಬದು ಸದ್ಯಕ್ಕೆ ನಿಗೂಢವಾಗಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು