ಸೋಮವಾರ, ಡಿಸೆಂಬರ್ 6, 2021
24 °C
ಕಟಾವಿಗೆ ಬಂದಿದ್ದ ಭತ್ತಕ್ಕೆ ಹಾನಿ, ಜೋಳ, ಹತ್ತಿಗೂ ಮಳೆ ಕಂಟಕ; ನಗರದ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಯಾದಗಿರಿ; ಅಕಾಲಿಕ ಮಳೆಯಿಂದ ಬೆಳೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ವಿವಿಧೆಡೆ ಭತ್ತಕ್ಕೆ ಹಾನಿಯಾಗಿದ್ದು, ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ.

ಮಂಗಳವಾರ ರಾತ್ರಿ 10 ಗಂಟೆಯಿಂದ 11 ಗಂಟೆಯವರೆಗೆ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ. ಅಕಾಲಿಕ ಮಳೆಗೆ ಕೊಯ್ಲಿಗೆ ಬಂದ ಭತ್ತ ಸಂಪೂರ್ಣ ನೆಲಕಚ್ಚಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಹುಣಸಗಿ ತಾಲ್ಲೂಕಿನ ಯಡಿಯಾಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದುನಿಂತ ಭತ್ತ ಬೆಳೆ ಅಕಾಲಿಕ ಮಳೆಯಿಂದ ಸಂಪೂರ್ಣ ನೆಲಕಚ್ಚಿದ್ದು, ಅಪಾರ ಹಾನಿಯಾಗಿದೆ. ಕಟಾವಿಗೆ ಬಂದ ‌ಬೆಳೆ ನೆಲಕ್ಕೆ ಬಿದ್ದ ಕಾರಣ ಭತ್ತದ ಕಾಳುಗಳು ಭೂಮಿ ಪಾಲಾಗಿವೆ. ಭತ್ತದ ಬೆಳೆ ಹಾಳಾಗಿದ್ದು, ಸರ್ಕಾರ ಶೀಘ್ರವೇ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಹತ್ತಿ, ಜೋಳಕ್ಕೆ ಹಾನಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬಿಳಿಜೋಳಕ್ಕೆ ಧಾರಾಕಾರ ಮಳೆಯಿಂದ ಹಾನಿಯಾಗಿದೆ. ಜೋಳದ ಜಮೀನುಗಳಲ್ಲಿ ಮಳೆ ನೀರು ನುಗ್ಗಿವೆ. ಅಲ್ಲದೇ ಹತ್ತಿ ಜಮೀನಿನಲ್ಲಿ ಮಳೆ ನೀರು ನಿಂತ ಪರಿಣಾಮ ಹತ್ತಿ ಬಿಡಿಸಲು ಸಮಸ್ಯೆಯಾಗಿದೆ.

1,342 ಹೆಕ್ಟೇರ್‌ ಬೆಳೆ ಹಾನಿ: ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ನವೆಂಬರ್‌ 22ರ ವರೆಗೆ 1,342 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಮಂಗಳವಾರ ಸುರಿದ ಮಳೆಯಿಂದ ಹಾನಿ ವರದಿ ತಯಾರಾಗಬೇಕಿದೆ. ಶಹಾಪುರ, ಸುರಪುರ, ಹುಣಸಗಿ, ಕಕ್ಕೇರಾ, ವಡಗೇರಾ ತಾಲ್ಲೂಕಿನಲ್ಲಿ ಭತ್ತ ಹೆಚ್ಚು ಹಾನಿಯಾಗಿದೆ.

ಹುಣಸಗಿ ತಾಲ್ಲೂಕಿನಲ್ಲಿ 580 ಹೆಕ್ಟೇರ್, ಕಕ್ಕೇರಾ ಹೋಬಳಿ ವ್ಯಾಪ್ತಿಯಲ್ಲಿ 550, ವಡಗೇರಾ ತಾಲ್ಲೂಕಿನಲ್ಲಿ 124 ಹೆಕ್ಟೇರ್‌ ಭತ್ತ ನಾಶವಾಗಿದೆ. ಕೆಂಭಾವಿ ವ್ಯಾಪ್ತಿಯಲ್ಲಿ 74.4 ಹೆಕ್ಟೇರ್‌ ಕಬ್ಬು, ಶಹಾಪುರ ತಾಲ್ಲೂಕಿನಲ್ಲಿ 0.8 ಹೆಕ್ಟೇರ್‌ ಹತ್ತಿ, ತೊಗರಿ 1.2 ಹೆಕ್ಟೇರ್‌ ಬೆಳೆಹಾನಿಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಉದ್ಯಾನ, ತಗ್ಗು ಪ್ರದೇಶದಲ್ಲಿ ನೀರು: ನಗರದ ತಗ್ಗು ಪ್ರದೇಶದಲ್ಲಿರುವ ನಗರಗಳಿಗೆ ನೀರು ನುಗ್ಗಿತ್ತು. ಬೆಳಿಗ್ಗೆವರೆಗೆ ನೀರು ಆವರಿಸಿತ್ತು. ಹೊಸಳ್ಳಿ ಕ್ರಾಸ್‌ನ ನಜರಾತ್‌ ಕಾಲೊನಿಯ ಉದ್ಯಾನ ವನದಲ್ಲಿ ಮಳೆ ನೀರು ನಿಂತು ಕೆರೆಯಂತೆ ಭಾಸವಾಗುತ್ತಿತ್ತು. ಮಕ್ಕಳ ಆಟಿಕೆಗಳು ನೀರಿನಲ್ಲಿ ಮುಳಗಿದ್ದವು. ಬಿಸಿಲು ಏರಿಕೆಯಾಗುತ್ತಿದ್ದಂತೆ ನೀರು ಆವಿಯಾಗಿ ಕೆಸರು ಮಾತ್ರ ಇತ್ತು.

ಇನ್ನೂ ಎಪಿಎಂಸಿ ಮುಂಭಾಗದ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದೆ. ಚರಂಡಿ ಹೂಳು ತುಂಬಿದ್ದರಿಂದ ನೀರು ರಸ್ತೆ ಮೇಲೆ ಹರಿಯುತ್ತಿದೆ. ವಾಹನ ಸವಾರರು ಪರದಾಡುವ ಪರಿಸ್ಥಿತಿ ಏರ್ಪಟ್ಟಿದೆ.

ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ ಮಳೆಯಿಂದ ಮತ್ತಷ್ಟು ಹದಗೆಟ್ಟಿದೆ. ತಗ್ಗು ದಿನ್ನೆಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಧಾರಾಕಾರ ಮಳೆ ಸುರಿದ್ದರಿಂದ ರಸ್ತೆ ಮೇಲೆ ನೀರು ಹರಿದಿದೆ.

ಹಳೆ ಜಿಲ್ಲಾಸ್ಪತ್ರೆ ಒಳಗೆ ನುಗ್ಗಿದ ನೀರು:
ನಗರದ ಹಳೆ ಜಿಲ್ಲಾಸ್ಪತ್ರೆಯ ಒಳಗಡೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಆಸ್ಪತ್ರೆ ಹಿಂಭಾಗದ ಪೈಪ್‌ ಒಡೆದು ಆ ನೀರೆಲ್ಲ ಆಸ್ಪತ್ರೆ ಒಳಗಡೆ ನುಗ್ಗಿತ್ತು. ಒಂದೇ ಗಂಟೆಯ ನಂತರ ನೀರು ಹರಿದು ಹೋಗಿದೆ.

ರೋಗಿಗಳು, ಸಂಬಂಧಿಕರು ಮಳೆ ನೀರಿನಿಂದ ಬೆಡ್‌ ಕೆಳಗಡೆ ಇಳಿಯಲು ಸಮಸ್ಯೆಯಾಗಿತ್ತು. ದಾದಿಯರು ನೀರಿನ ಮಧ್ಯೆದಲ್ಲಿಯೇ ಚಿಕಿತ್ಸೆ ನೀಡುವುದನ್ನು ಮುಂದುವರಿಸಿದ್ದರು.

‘ಆಸ್ಪತ್ರೆಯ ಪೈಪ್‌ ಒಡೆದುಹೋಗಿದ್ದರಿಂದ ನೀರು ನುಗ್ಗಿತ್ತು. ಮಳೆ ಕಡಿಮೆಯಾದ ನಂತರ ನೀರು ಹರಿದುಹೋಗಿದೆ. ಇದರಿಂದ ರೋಗಿಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ ತಿಳಿಸಿದರು.

ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರಾದ್ದಾಗಿದೆ. ಭತ್ತ ಕಟಾವು ಮಾಡಿ ಒಣಗಿಸಲು ಹಾಕಿದ್ದ ಭತ್ತವೂ ಮೊಳಕೆಯೊಡೆದು ರೈತರು ಕಣ್ಣೀರು ಹಾಕುವಂತೆ ಆಗಿದೆ.

****

ತಾಲ್ಲೂಕುವಾರು ಮಳೆ ವಿವರ

ಯಾದಗಿರಿ: ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 15.2 ಎಂಎಂ ಮಳೆಯಾಗಿದೆ. ವಡಗೇರಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದರೆ, ಗುರುಮಠಕಲ್‌ ತಾಲ್ಲೂಕಿನಲ್ಲಿ ಕಡಿಮೆ ಮಳೆಯಾಗಿದೆ.

ಶಹಾಪುರ ತಾಲ್ಲೂಕಿನಲ್ಲಿ 20.02 ಎಂಎಂ, ಸುರಪುರ ತಾಲ್ಲೂಕಿನಲ್ಲಿ 14.5 ಎಂಎಂ, ಯಾದಗಿರಿ ತಾಲ್ಲೂಕಿನಲ್ಲಿ 21.7, ಗುರುಮಠಕಲ್‌ ತಾಲ್ಲೂಕಿನಲ್ಲಿ 1.8, ವಡಗೇರಾ ತಾಲ್ಲೂಕಿನಲ್ಲಿ 25.2, ಹುಣಸಗಿ ತಾಲ್ಲೂಕಿನಲ್ಲಿ 4.7 ಮಿಲಿಮೀಟರ್‌ ಮಳೆ ಸುರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು