ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಬಳಕೆಗೆ ಒತ್ತು

ಎಲ್ಲೆಡೆ ಮೊಳಗಿದ ಕನ್ನಡ ಡಿಂಡಮ; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
Last Updated 1 ನವೆಂಬರ್ 2021, 16:23 IST
ಅಕ್ಷರ ಗಾತ್ರ

ಯಾದಗಿರಿ: ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಬಳಕೆಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಇದನ್ನು ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ನಾವೆಲ್ಲರೂ ಮುಂದಾಗಬೇಕಾಗಿದೆ. ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗಳ ಉತ್ತೇಜನಕ್ಕೂ ಸರ್ಕಾರವು ಸಾಕಷ್ಟು ಒತ್ತು ನೀಡಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್, ಹೇಳಿದರು.

ನಗರದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಭಾವೈಕ್ಯತಾ ಸಮಿತಿ ಹಾಗೂ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಿತಿ ಸಹಯೋಗದಲ್ಲಿ ಸೋಮವಾರ ನಡೆದ 66ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬಹುಭಾಷೆ, ಧರ್ಮ ಮತ್ತು ಬಹು ಸಂಸ್ಕೃತಿಗಳ ಜಿಲ್ಲೆಯಾಗಿರುವ ಯಾದಗಿರಿ ಜಿಲ್ಲೆ, ವಿವಿಧ ಕ್ಷೇತ್ರಗಳ ಪರಿಣಿತರನ್ನು ಹೊಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಆದ ಹಿರಿಮೆ ಗಳಿಸಿಕೊಂಡಿದೆ ಎಂದರು.

ತಂತ್ರಜ್ಞಾನದ ವೇಗದಲ್ಲಿ ಹಾಗೂ ಇಂದಿನ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಯು ಹಿಂದುಳಿಯದಂತೆ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕನ್ನಡ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಕನ್ನಡದಲ್ಲಿ ಯೂನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಮೊಬೈಲ್‌ನಲ್ಲಿ ಕನ್ನಡ ಬಳಕೆ, ಬ್ರೈಲ್ ಲಿಪಿಯಲ್ಲಿ ಕನ್ನಡ ಬಳಕೆ ಮತ್ತಿತರ ತಂತ್ರಾಂಶ ಅಭಿವೃದ್ಧಿಪಡಿಸಿ, ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ಬೆಳವಣಿಗೆಯಾಗಿರುತ್ತದೆ ಎಂದು ಅಭಿಪ‍್ರಾಯ ಪಟ್ಟರು.

ಕನ್ನಡವನ್ನು ಹೆಚ್ಚೆಚ್ಚು ಜನರು ಮಾತನಾಡಿದಾಗ ಮತ್ತು ಬಳಸಿದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ. ಕನ್ನಡದ ಲಿಪಿಯನ್ನು ಮುಂದಿನ ಜನಾಂಗಕ್ಕೂ ಬರೆಯಲು ಕಲಿಸಿದಾಗ ಈ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಪೌರಕಾರ್ಮಿಕರಾದ ರತ್ನಮ್ಮ ಶಿವಪ್ಪ ಸ್ವಂತಿ ಆವರು ಆಯ್ಕೆಗೊಂಡಿರುವುದು ಜಿಲ್ಲೆಗೆ ಅಭಿಮಾನದ ಸಂಗತಿಯಾಗಿದೆ ಎಂದರು.

ನೀತಿ ಆಯೋಗವು ಆಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಅಡಿಯಲ್ಲಿ ಸವಾಲು ವಿಧಾನದ ಮೂಲಕ ಶ್ರೇಣಿಗಳನ್ನು ಪಡೆಯುವ ಜಿಲ್ಲೆಗಳಿಗೆ ಹೆಚ್ಚುವರಿ ಹಂಚಿಕೆಯನ್ನು ಒದಗಿಸುತ್ತದೆ. 2021ರ ಜೂನ್-ಜುಲೈ ತಿಂಗಳಲ್ಲಿ ಜಿಲ್ಲೆಯು ಮೂಲಭೂತ ಸೌಕರ್ಯಗಳಲ್ಲಿ ಉತ್ತಮ ಶ್ರೇಣಿಯನ್ನು ಪಡೆದುಕೊಂಡಿದೆ. ₹3 ಕೋಟಿಗಳ ಹೆಚ್ಚುವರಿ ಹಂಚಿಕೆಯನ್ನು ಪಡೆಯಲು ಅರ್ಹವಾಗಿದೆ. ಈ ಸಂಬಂಧವಾಗಿ ಹೆಚ್ಚುವರಿ ಹಂಚಿಕೆ ₹3 ಕೋಟಿ ರೂಪಾಯಿ ಪಡೆಯಲು ಪ್ರಸ್ತಾವನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

‘ಭೂಮಿ’ ಯೋಜನೆಯಡಿ ಜಿಲ್ಲೆ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳ ವಿಲೇವಾರಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದು, ಹೆಮ್ಮೆಯ ಸಂಗತಿ ಎಂದರು.

ಸ್ಥಳೀಯ ಶಾಸಕ‌ ವೆಂಕಟರೆಡ್ಡಿ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಶಾ ಆಲಂ ಹುಸೇನ್, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಯೂಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ನಗರಸಭೆ ಪ್ರಭಾರಿ ಪೌರಾಯುಕ್ತ ಬಕ್ಕಪ್ಪ ಹೊಸಮ‌ನಿ ಇದ್ದರು.

*******

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಯಾದಗಿರಿ: ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಶೋಕ ಸಾಲವಾಡಗಿ, ಸಾಹಿತ್ಯ ಕ್ಷೇತ್ರದಲ್ಲಿ ಶಿವಣ್ಣ ಇಜೇರಿ, ಸಂಗೀತ ಕ್ಷೇತ್ರದಲ್ಲಿ ಬಸಲಿಂಗಮ್ಮ ಎಸ್‌ ಹಡಪದ, ಸಮಾಜ ಸೇವೆ ಕ್ಷೇತ್ರದಲ್ಲಿ ಕೇರ್‌ ಇಂಡಿಯಾ ಫೌಂಡೇಷನ್‌, ಕ್ರೀಡಾ ಕ್ಷೇತ್ರದಲ್ಲಿ ಮೌನೇಶಕುಮಾರ ದೇವಾಪುರ, ಶಿಕ್ಷಣ ಕ್ಷೇತ್ರದಲ್ಲಿ ಅಮರೇಶ ಕುಂಬಾರ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಕೊರೊನಾ ಯೋಧರನ್ನು ಸನ್ಮಾನಿಸಲಾಯಿತು.

ಮೂಢನಂಬಿಕೆ ವಿರುದ್ಧ ಜಾಗೃತಿ: ಗ್ರಾಮಗಳಲ್ಲಿ ಮೂಢನಂಬಿಕೆಯಿಂದ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿರುವುದರಿಂದ ಜಾಗೃತಿ ಕಾರ್ಯಕ್ರಮ ನಡೆಯಿತು. ಕಲಾವಿದೆಯೊಬ್ಬರು ಕೈಯಲ್ಲಿ ಬೇವಿನ ತಪ್ಪಲು ಹಿಡಿದು ದೇವರು ಮೈಮೇಲೆ ಬಂದತೆ ನಟಿಸಿ ಲಸಿಕೆ ತೆಗೆದುಕೊಳ್ಳಲು ಜಾಗೃತಿ ಮೂಡಿದರು.

ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಇದಕ್ಕೂ ಮುನ್ನ ಕನ್ನಡದಲ್ಲಿಯೇ ಪಥ ಸಂಚಲನ ಕಾವಾಯತ್‌ ನಡೆಯಿತು, ನಂತರ ನಗರಸಭೆಯಿಂದ ಸ್ವಚ್ಛತಾ ಲಾಂಛನ, ಸಂಗೋಳ್ಳಿ ರಾಯಣ್ಣ, ಆರೋಗ್ಯ ಇಲಾಖೆಯಿಂದ ಸಂಚಾರಿ ಡಯಗ್ನೋಸ್ಟಿಕ್‌ ವಾಹನ, ಪೊಲೀಸ್‌ ಇಲಾಖೆಯಿಂದ ಮಹಿಳಾ ಸುರಕ್ಷಾ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.
********
‘ಪ್ರಗತಿಯತ್ತ ಲಸಿಕಾರಕರಣ’

ಕೋವಿಡ್ ನಿಯಂತ್ರಣಕ್ಕೆ ಲಸಿಕಾ ಮಹಾಮೇಳದಲ್ಲಿ ಜಿಲ್ಲೆಯಲ್ಲಿ ಗುರಿ ಸಾಧಿಸುವತ್ತ ದಿಟ್ಟ ಹೆಜ್ಜೆ ಇಡುತ್ತಿದ್ದೇವೆ. ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಂದಾಯ, ಆರೋಗ್ಯ, ಪಂಚಾಯತ್‌ ರಾಜ್‌, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಮಟ್ಟದಲ್ಲಿ ಶ್ರಮಿಸಿದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಿಕ್ಷಕರ ಪರಿಶ್ರಮದಿಂದ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

****

ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಮತ್ತಷ್ಟು ಆಕರ್ಷಣೀಯವನ್ನಾಗಿಸಲು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹಲವು ಯೋಜನೆ, ಕಾಮಗಾರಿಗಳು ಪ್ರಗತಿಯಲ್ಲಿವೆ
ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT