ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಐದು ವರ್ಷಗಳಲ್ಲಿ 1.73 ಲಕ್ಷ ಮತದಾರರ ಹೆಚ್ಚಳ

ಈ ಬಾರಿ 3.77 ಲಕ್ಷ ಪುರುಷರು, 3.75 ಲಕ್ಷ ಮಹಿಳಾ ಮತದಾರರು
Last Updated 9 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 1,73,916 ಮತದಾರರು ಹೆಚ್ಚಳವಾಗಿದ್ದಾರೆ.

2015ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 5,79,517 ಮತದಾರರು ಇದ್ದರು. ಈ ಬಾರಿಯ ಚುನಾವಣೆಯಲ್ಲಿ ಸದ್ಯಕ್ಕೆ 7,53,433 ಮತದಾರರು ಇದ್ದಾರೆ. ಈ ಸಂಖ್ಯೆ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ. ಈಗಾಗಲೇ ಮತದಾರರ ಪಟ್ಟಿಗೆ ನೋಂದಾಯಿಸುವ ಕಾರ್ಯಕ್ಕೆ ಜಿಲ್ಲೆಯಲ್ಲಿ ಚಾಲನೆ ಸಿಕ್ಕಿದೆ.

ಕಳೆದ ಐದು ವರ್ಷಗಳಲ್ಲಿ ಶೇ 23.08ರಷ್ಟು ಮತದಾರರು ಹೆಚ್ಚಳವಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಜಿಲ್ಲೆಯಲ್ಲಿ ಮೂರು ತಾಲ್ಲೂಕುಗಳು ಮಾತ್ರ ಇದ್ದವು. 2017ರ ನಂತರ ಮೂರು ಹೊಸ ತಾಲ್ಲೂಕುಗಳನ್ನು ಘೋಷಿಸಲಾಗಿತ್ತು. ಹೀಗಾಗಿ ಈಗ ಆರು ತಾಲ್ಲೂಕುಗಳನ್ನಾಗಿ ವಿಂಗಡಿಸಲಾಗಿದೆ.

ಕಳೆದ ಬಾರಿ ಇದ್ದ ಶಹಾಪುರ, ಸುರಪುರ, ಯಾದಗಿರಿ ತಾಲ್ಲೂಕುಗಳಲ್ಲಿ 118 ಗ್ರಾ.ಪಂಗಳಿಗೆ ಚುನಾವಣೆ ನಡೆದಿತ್ತು. ಯಾದಗಿರಿ ತಾಲ್ಲೂಕಿನಲ್ಲಿ 40, ಶಹಾಪುರ ತಾಲ್ಲೂಕಿನಲ್ಲಿ 41, ಸುರಪುರ ತಾಲ್ಲೂಕಿನಲ್ಲಿ 37 ಗ್ರಾಮ ಪಂಚಾಯಿಗಳಿದ್ದವು. ಪುರುಷರು 2,91,794, ಮಹಿಳೆಯರು 2,87,723 ಸೇರಿದಂತೆ ಒಟ್ಟಾರೆ 5,79, 517 ಮತದಾರರು ಇದ್ದರು.

ಮೂರು ತಾಲ್ಲೂಕುಗಳ ಮತದಾರರಲ್ಲಿ 2,17,782 ಪುರುಷರು, 2,08,833 ಮಹಿಳೆಯರು ಸೇರಿದಂತೆ ಒಟ್ಟು 4,26,615 ಮತದಾರರು ಮತದಾನ ಮಾಡಿದ್ದರು. ಯಾದಗಿರಿ ತಾಲ್ಲೂಕಿನಲ್ಲಿ ಶೇ 69.17, ಶಹಾಪುರ ತಾಲ್ಲೂಕಿನಲ್ಲಿ ಶೇ 75.28, ಸುರಪುರ ತಾಲ್ಲೂಕಿನಲ್ಲಿ ಶೇ 77.03 ಸೇರಿದಂತೆ ಒಟ್ಟಾರೆ 73.62ರಷ್ಟು ಜಿಲ್ಲೆಯಲ್ಲಿ ಶೇಕಡವಾರು ಮತದಾನವಾಗಿತ್ತು. ಅವಿಭಜಿತ ಸುರಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾನವಾಗಿದ್ದರೆ, ಯಾದಗಿರಿ ತಾಲ್ಲೂಕಿನಲ್ಲಿ ಕಡಿಮೆ ಮತಚಲಾವಣೆ ಆಗಿತ್ತು.

ಆಗಸ್ಟ್‌ 31 ವರೆಗಿನ ಮತದಾರರ ಸಂಖ್ಯೆ: ಜಿಲ್ಲೆಯಲ್ಲಿ ಮತದಾರರನ್ನು ನೋಂದಾಯಿಸುವ ಪ್ರಕ್ರಿಯೆ ನಿರಂತರ ಚಾಲನೆಯಲ್ಲಿದೆ. ಅದರಂತೆ 2020ರ ಆಗಸ್ಟ್‌ 31ರ ತನಕ ಮತದಾರರ ಪಟ್ಟಿ ತಯಾರಿಸಲಾಗಿತ್ತು. ಪುರುಷ, ಮಹಿಳೆ ಸೇರಿ 7,51,327 ಮತದಾರರನ್ನು ಪಟ್ಟಿ ಮಾಡಲಾಗಿದೆ. ಇತರೆ 23 ಮತದಾರರು ಇದ್ದಾರೆ. ಇದರಲ್ಲಿ ಮೊದಲ ಹಂತದ ಚುನಾವಣೆಯಲ್ಲಿ 3,92,677 ಮತದಾರರು, ಎರಡನೇ ಹಂತದಲ್ಲಿ 3,58,655 ಮತದಾರರು ಇದ್ದಾರೆ.

23 ಇತರೆ ಮತದಾರರು: ಮೊದಲ ಹಂತದ ಚುನಾವಣೆಯಲ್ಲಿ 16, ಎರಡನೇ ಹಂತದಲ್ಲಿ 7 ಇತರೆ ಮತದಾರರು ಇದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಶಹಾಪುರ ತಾಲ್ಲೂಕಿನಲ್ಲಿ 1, ಸುರಪುರ ತಾಲ್ಲೂಕಿನಲ್ಲಿ 4, ಹುಣಸಗಿ ತಾಲ್ಲೂಕಿನಲ್ಲಿ 11, ಎರಡನೇ ಹಂತದ ಚುನಾವಣೆಯಲ್ಲಿ ಯಾದಗಿರಿ ತಾಲ್ಲೂಕಿನಲ್ಲಿ 3, ಗುರುಮಠಕಲ್‌ ತಾಲ್ಲೂಕಿನಲ್ಲಿ 2, ವಡಗೇರಾ ತಾಲ್ಲೂಕಿನಲ್ಲಿ 2 ಸೇರಿದಂತೆ 23 ಇತರೆ ಮತದಾರರು ಇದ್ದಾರೆ.

ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 539, ಎರಡನೇ ಹಂತದಲ್ಲಿ 510 ಒಟ್ಟು 1,049 ಮತಗಟ್ಟೆಗಳಿವೆ.

ಯುವ ಮತದಾರರ ಸೇರ್ಪಡೆಗೆ ಹಿನ್ನಡೆ
ಯಾದಗಿರಿ:
ಯುವ ಮತದಾರರ ಸೇರ್ಪಡೆ ಮಾಡುವಲ್ಲಿ ಜಿಲ್ಲೆ ರಾಜ್ಯದ ಬೇರೆ ಜಿಲ್ಲೆಗಳಿಗಿಂತಲೂ ಹಿಂದೆ ಬಿದ್ದಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ ವಿಶೇಷ ಅಭಿಯಾನ ಮಾಡಿ ಮತದಾರರ ನೋಂದಣಿ ಮಾಡುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದೆ.

ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜುಗಳ ಶಿಕ್ಷಕ ಮತ್ತು ಉಪನ್ಯಾಸಕರು, ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಸಿಬ್ಬಂದಿಗೆ ಕಡ್ಡಾಯವಾಗಿ ಮತದಾರರಿಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಈಚೆಗೆ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಪಿ.ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸ್ವೀಪ್‌ ಸಮಿತಿ ಮೂಲಕ ವ್ಯಾಪಕ ಪ್ರಚಾರ ಮಾಡಿ ಮತದಾರರ ನೋಂದಣಿ ಮಾಡುವಂತೆ ಸೂಚಿಸಿದ್ದರು.

****

ಹೊಸ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು.
-ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT