ಯಾದಗಿರಿ: ಮೂರನೇ ಅವಧಿಯ ಯಾದಗಿರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚಿದ್ದು, ಕಾಂಗ್ರೆಸ್, ಬಿಜೆಪಿ ಸದಸ್ಯರು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
31 ಸದಸ್ಯ ಬಲದ ನಗರಸಭೆಯಲ್ಲಿ ಸದ್ಯಕ್ಕೆ ಬಿಜೆಪಿ ಎರಡು ಅವಧಿಯಲ್ಲಿ ಅಧಿಕಾರ ಮಾಡಿದೆ. ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು, ಏನೂ ಬೇಕಾದರೂ ಬದಲಾಗಬಹುದು ಎನ್ನುತ್ತಾರೆ ಸದಸ್ಯರು.
ನಗರಸಭೆಯಲ್ಲಿ 16 ಬಿಜೆಪಿ ಸದಸ್ಯರು, 12 ಕಾಂಗ್ರೆಸ್ ಸದಸ್ಯರು, 1 ಪಕ್ಷೇತರ, ಇಬ್ಬರು ಜೆಡಿಎಸ್ ಪಕ್ಷದಿಂದ ಆಯ್ಕೆಯಾದ ಸದಸ್ಯರಿದ್ದಾರೆ. ಬಿಜೆಪಿ–ಜೆಡಿಎಸ್ ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಮೈತ್ರಿಯಿದ್ದು, ಹೀಗಾಗಿ ನಮಗೆ ಅಧಿಕಾರ ಸಿಗಲಿದೆ ಎಂದು ಆಶಾ ಭಾವನೆ ಅವರಲ್ಲಿದೆ.
ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ಸುರಪುರ ನಗರಸಭೆ, ಗುರುಮಠಕಲ್, ಕಕ್ಕೇರಾ, ಕೆಂಭಾವಿ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿಯನ್ನು ಹೊಂದಿದೆ. ಪುರಸಭೆಗಳ ಚುನಾವಣೆ ನಂತರ ನಗರಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಯಾದಗಿರಿ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದೆ. ಇದರಿಂದ ಮಹಿಳೆಯರು ಈ ಬಾರಿ ಅಧ್ಯಕ್ಷ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದಾರೆ.
ಬಿಜೆಪಿಯಿಂದ ವಾರ್ಡ್ 5ರ ಸದಸ್ಯೆ ಲಲಿತಾ ಅನಪುರ, ವಾರ್ಡ್ ನಂಬರ್ 9ರ ಸದಸ್ಯೆ ಪ್ರಭಾವತಿ ಮಾರುತಿ ಕಲಾಲ್, ವಾರ್ಡ್ ಸಂಖ್ಯೆ 29ರ ಸದಸ್ಯೆ ಚಂದ್ರಕಲಾ ಮಡ್ಡಿ, ಜೆಡಿಎಸ್‌ನಿಂದ ವಾರ್ಡ್ ಸಂಖ್ಯೆ 10 ಮಹಾದೇವಮ್ಮ ಬೀರನೂರ, ಕಾಂಗ್ರೆಸ್‌ನಿಂದ ವಾರ್ಡ್ ಸಂಖ್ಯೆ 23ರ ಸದಸ್ಯೆ ನಿರ್ಮಲಾ ಭೋಜರಾಜ ಜಗನ್ನಾಥ, ವಾರ್ಡ್ ಸಂಖ್ಯೆ 4ರ ಸವಿತಾ ಶರಣಗೌಡ ಮಾಲಿಪಾಟೀಲ ಲಾಬಿ ನಡೆಸಿದ್ದು, ಚುನಾವಣೆ ದಿನಾಂಕ ನಿಗದಿ ನಂತರ ಮತ್ತಷ್ಟು ಚಟುವಟಿಕೆಗಳು ತೀವ್ರತೆ ಪಡೆಯಲಿವೆ.
ಕಳೆದ ಬಾರಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಈ ಬಾರಿ ಶಾಸಕರು ಪಕ್ಷದ ಹೈಕಮಾಂಡ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಿದರೆ ಸ್ಪರ್ಧೆ ಖಚಿತನಿರ್ಮಲಾ ಭೋಜರಾಜ ಜಗನ್ನಾಥ ವಾರ್ಡ್ ಸಂಖ್ಯೆ 23ರ ಸದಸ್ಯೆ
ಈಗಾಗಲೇ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು ಉಳಿದ ಅವಧಿಗೆ ಅಧ್ಯಕ್ಷ ಸ್ಥಾನ ನೀಡಲು ಸಂಬಂಧಿಸಿದವರ ಗಮನಕ್ಕೆ ತರಲಾಗಿದೆಮಹಾದೇವಮ್ಮ ಬೀರನೂರ ವಾರ್ಡ್ ಸಂಖ್ಯೆ 10ರ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.