ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಇಂದು ವೇದಿಕೆ ಸಜ್ಜು

ಶಹಾಪುರದಲ್ಲಿಂದು ಅಭಿನಂದನಾ ಸಮಾರಂಭ, ಪದಗ್ರಹಣ ಕಾರ್ಯಕ್ರಮ
ಟಿ.ನಾಗೇಂದ್ರ
Published 28 ಜನವರಿ 2024, 6:48 IST
Last Updated 28 ಜನವರಿ 2024, 6:48 IST
ಅಕ್ಷರ ಗಾತ್ರ

ಶಹಾಪುರ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭಾನುವಾರ (ಜ.28) ನಗರಕ್ಕೆ ಬರುತ್ತಿದ್ದು, ನಗರದಲ್ಲಿ ಬಿಜೆಪಿ ಚಟುವಟಿಕೆಗಳು ಗರಿಗೆದರಿವೆ. ನಗರದ ತುಂಬೆಲ್ಲ ಬಾವುಟ, ಬ್ಯಾನರ್, ತೋರಣ ಕಟ್ಟಲಾಗಿದ್ದು, ಕೇಸರಿಮಯವಾಗಿ ಕಾಣುತ್ತಿದೆ.

ರಾಜ್ಯ ಘಟಕದ ಅಧ್ಯಕ್ಷರಾದ ಮೇಲೆ ಜಿಲ್ಲೆಗೆ ಮೊದಲ ಸಲ ‌ಬರುತ್ತಿರುವ ವಿಜಯೇಂದ್ರ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅದೇ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಮೀನರಡ್ಡಿ ಪಾಟೀಲ್ ಯಾಳಗಿ ಅವರ ಪದಗ್ರಹಣವೂ ನಡೆಯಲಿದೆ. ಇದಕ್ಕಾಗಿ ನಗರದ ಸಿಪಿಎಸ್ ಶಾಲಾ ಮೈದಾನ ಸಜ್ಜುಗೊಂಡಿದೆ. ಭಾನುವಾರ ಮ.3.30 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

ಶಹಾಪುರವು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮತಕ್ಷೇತ್ರವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಹಾಪುರದಿಂದ ಸ್ಪರ್ಧಿಸಿ ಸೋತರೂ, ಅಮೀನರಡ್ಡಿ ಪಾಟೀಲ ಯಾಳಗಿ 52 ಸಾವಿರ ಮತಗಳನ್ನು ಪಡೆದು ಗಮನ ಸೆಳೆದಿದ್ದರು. ಬಳಿಕ ಅವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಒಲಿದಿದ್ದು,  ಶಹಾಪುರ ಮತಕ್ಷೇತ್ರ ರಾಜಕೀಯ ಶಕ್ತಿ ಕೇಂದ್ರವಾಗಿ ಬದಲಾಗಿದೆ.

ಅಭಿನಂದನಾ ಸಮಾರಂಭ ಹಾಗೂ ಪದಗ್ರಹಣ ಕಾರ್ಯಕ್ರಮವು ಸ್ಮರಣೀಯವಾಗಿಸಲು ಬಿಜೆಪಿ ಮುಖಂಡರು ಶ್ರಮಿಸುತ್ತಿದ್ದಾರೆ.

ಸಾಮಾನ್ಯವಾಗಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣವನ್ನು ಜಿಲ್ಲಾ ಕೇಂದ್ರದಲ್ಲಿ ಮಾಡುವುದು ವಾಡಿಕೆ. ಆದರೆ, ಅಮೀನರಡ್ಡಿ ಯಾಳಗಿ ಅವರು ಜಿದ್ದಿಗೆ ಬಿದ್ದು ಶಹಾಪುರದಲ್ಲಿಯೇ ಪದಗ್ರಹಣಕ್ಕೆ ಮುಂದಾಗಿದ್ದಾರೆ. ಪ್ರಭಾವಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕರೂ ಆಗಿರುವ ಶರಣಬಸಪ್ಪ ದರ್ಶನಾಪುರ ಅವರನ್ನು ರಾಜಕೀಯವಾಗಿ ಕಟ್ಟಿಹಾಕುವ ಉದ್ದೇಶ ಇದರ ಹಿಂದಿದೆ. ಲೋಕಸಭಾ ಚುನಾವಣೆಯ ಸಿದ್ಧತೆಯ ರಣಕಹಳೆ ಮೊಳಗಿಸುವುದೂ ರಾಜಕೀಯ ತಂತ್ರಗಾರಿಕೆಯ ಭಾಗವಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಈಗಾಗಲೇ ಜಿಲ್ಲೆಯಲ್ಲಿ ₹2.6 ಕೋಟಿ ಮೌಲ್ಯದ 6,077 ಕ್ವಿಂಟಲ್ ಅಕ್ಕಿ ನಾಪತ್ತೆ ಪ್ರಕರಣ ಜೋರಾಗಿ ಸದ್ದು ಮಾಡಿದೆ. ಪಕ್ಷದ ಮುಖಂಡರು ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ನೇತೃತ್ವದಲ್ಲಿ ಶಹಾಪುರದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಜೊತೆಗೆ ಬೆಳೆದು ನಿಂತ ಮೆಣಸಿನಕಾಯಿ ಬೆಳೆ ಸಂರಕ್ಷಣೆಗೆ ಕಾಲುವೆ ನೀರು ಹರಿಸುವಂತೆ ಮಾಡಿದ ಹೋರಾಟವು ರಾಜಕೀಯ ಸ್ವರೂಪ ಪಡೆದಿತ್ತು.

ಈ ಎಲ್ಲದರ ನಡುವೆಯೇ ಶಹಾಪುರದಲ್ಲಿ ರಾಜಕೀಯ ಜಿದ್ದಾಜಿದ್ದಿಯ ತಾಲೀಮು ಶುರುವಾಗಿದೆ ಎನ್ನುತ್ತಾರೆ ಕ್ಷೇತ್ರದ ಜನ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಜಿಲ್ಲೆಗೆ ಮೊದಲ ಸಲ ಬರುತ್ತಿದ್ದು ಅವರಿಗೆ‌ ಅದ್ದೂರಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ
ಅಮೀನರಡ್ಡಿ ಪಾಟೀಲ ಯಾಳಗಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT