ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಆರೋಗ್ಯಾಧಿಕಾರಿಗಳ ಪ್ರತಿಭಟನೆ

ಮನವಿ ಸ್ವೀಕರಿಸದ ಡಿಎಚ್‌ಒ ವಿರುದ್ಧ ಆಕ್ರೋಶ, ಪ್ರೋತ್ಸಾಹ ಧನ ಕಡಿತ ಆರೋಪ
Last Updated 12 ಜನವರಿ 2022, 17:19 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಪೂರ್ಣ ಪ‍್ರಮಾಣದಲ್ಲಿ ಪ್ರೋತ್ಸಾಹ ಧನ ವಿತರಿಸದೇ ಜಿಲ್ಲಾ ಮತ್ತು ಕುಟುಂಬ ಕಲ್ಯಾಣಧಿಕಾರಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ ಸಮುದಾಯ ಆರೋಗ್ಯಾಧಿಕಾರಿಗಳು ಬುಧವಾರ ರಾತ್ರಿ ದಿಢೀರ್‌ ಪ‍್ರತಿಭಟನೆ ನಡೆಸಿದರು.

ಬುಧವಾರ ಸಂಜೆ 4 ಗಂಟೆಗೆ ಡಿಎಚ್‌ಒ ಡಾ.ಇಂದುಮತಿ ಕಾಮಶೆಟ್ಟಿ ಅವರಿಗೆ ಸಮುದಾಯ ಆರೋಗ್ಯಾಧಿಕಾರಿಗಳು ಮನವಿ ಪತ್ರ ಸಲ್ಲಿಸಲು ಆಗಮಿಸಿದ್ದರು. ಆದರೂ ಡಿಎಚ್ಒ ನಮ್ಮ ಮನವಿ ಆಲಿಸದೇ ತೆರಳಿದ್ದಾರೆ ಎಂದು ಆರೋಪಿಸಿ ಕಚೇರಿ ಮುಂದೆಯೇ ವಿವಿಧ ತಾಲ್ಲೂಕುಗಳಿಂದ ಆಗಮಿಸಿದವರು ಪ್ರತಿಭಟನೆ ನಡೆಸಿದರು.

ಇದೇ ವೇಳೆ ಡಿಎಚ್‌ಒ ನಿರ್ಲಕ್ಷ್ಯವನ್ನು ಖಂಡಿಸಿದರು. ದೇವರು ವರ ಕೊಟ್ಟರೂ ಪೂಜಾರಿ ವರ ಕೊಟ್ಟಿಲ್ಲ ಎನ್ನುವಂತೆ ಸರ್ಕಾರ ಹಣ ಬಿಡುಗಡೆ ಮಾಡಿದರೂ ಡಿಎಚ್‌ಒ ಕಡಿಮೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

15 ಅಂಶಗಳನ್ನು ಪಾಲನೆ ಮಾಡಿ ಆಯಾ ವೈದ್ಯಾಧಿಕಾರಿಗಳ ಸಹಿ ‍ಪಡೆದು ಸಲ್ಲಿಸಿದರೂ ಡಿಎಚ್‌ಒ ಅವರು ಹಣ ಕಡಿತ ಮಾಡುತ್ತಿದ್ದಾರೆ. ವೈದ್ಯಾಧಿಕಾರಿ ಸಹಿಗೆ ಬೆಲೆಯೇ ಕೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ಪ್ರತಿ ತಿಂಗಳು ವೇತನ ಪಾವತಿ ಮಾಡಬೇಕು. ಪ್ರೋತ್ಸಾಹ ಧನ ₹8,000 ಪಾವತಿಸಬೇಕು. ವಿನಾಕಾರಣ ಪ್ರೋತ್ಸಾಹ ಧನ ಕಡಿತ ಮಾಡಬಾರದು ಎಂದು ಆಗ್ರಹಿಸಿದರು.

ಹಣ ಕಡಿತದಿಂದ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ.ಅಧಿಕಾರಿಗೆ ನಮ್ಮ ನೋವು ತೋಡಿಕೊಳ್ಳಲು ಬಂದರೆ ನಮ್ಮ ಆಲಿಸುತ್ತಿಲ್ಲ. ನಮಗೆ ಕಿರುಕುಳ ಆಗುತ್ತಿದೆ. ಡಿಎಚ್‌ಒ ಬಂದು ನಮ್ಮ ಮನವಿ ಸ್ವೀಕರಿಸಬೇಕು. ಇಲ್ಲದಿದ್ದರೆ ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.

ಈ ವೇಳೆ ಸಮುದಾಯ ಆರೋಗ್ಯಾಧಿಕಾರಿಗಳ ಸಂಘದ ಜಿಲ್ಲಾ ಸಂಚಾಲಕ ಮಾತನಾಡಿ, ‘ಕೋವಿಡ್‌ ಸಂದರ್ಭದಲ್ಲಿ ಕರ್ತವ್ಯ ಮಾಡಿದವರಿಗೆ ₹8 ಸಾವಿರ ಪ್ರೋತ್ಸಾಹ ಧನ ನೀಡಲು ಸರ್ಕಾರ ತಿಳಿಸಿದೆ. ಆದರೂ ಮೇಲಾಧಿಕಾರಿಗಳು ಒಂದು ಸಾವಿರ, ಎರಡು ಸಾವಿರ ನೀಡುತ್ತಿದ್ದಾರೆ. ಅಲ್ಲದೇ ನಮ್ಮ ಕರ್ತವ್ಯಕ್ಕಿಂತ ಬೇರೆದರಲ್ಲಿ ದುಡಿಸಿಕೊಂಡರೂ ಪ್ರೋತ್ಸಾಹ ಧನ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ ಸೇರಿದಂತೆ ವಿವಿಧ ಕಡೆಯಿಂದ ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಪಾಟೀಲ ಅವರಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT