ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು ‌| ರಸ್ತೆ ಡಾಂಬರೀಕರಣ ಕಾಮಗಾರಿ ಸ್ಥಗಿತ

ಡಿ.ಎಚ್.ಕಂಬಳಿ
Published 28 ನವೆಂಬರ್ 2023, 6:20 IST
Last Updated 28 ನವೆಂಬರ್ 2023, 6:20 IST
ಅಕ್ಷರ ಗಾತ್ರ

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ 40ನೇ ಕಾಲುವೆಗೆ ಹೊಂದಿಕೊಂಡಿರುವ ಗಂಗಾನಗರಕ್ಕೆ ತೆರಳುವ ರಸ್ತೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿದ ಸಿಸಿ ರಸ್ತೆಗಳ ಮೇಲೆ ಡಾಂಬರ್ ಹಾಕುವುದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಕೆಲಸ ಸ್ಥಗಿತಗೊಳಿಸಿದೆ.

ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಗಂಗಾವತಿ– ರಾಯಚೂರು ಮುಖ್ಯರಸ್ತೆಯಿಂದ 40ನೇ ವಿತರಣಾ ಕಾಲುವೆಗೆ ಹೊಂದಿಕೊಂಡು ಬಸಯ್ಯಸ್ವಾಮಿಯವರ ಮನೆಯವರೆಗೆ 1 ಕಿ.ಮೀ ರಸ್ತೆ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ₹3 ಕೋಟಿ ಮಂಜೂರಾಗಿತ್ತು. ಅದರಲ್ಲಿ ಅಮರೇಶಪ್ಪ ಮೈಲಾರ ಮನೆಯವರೆಗೆ 1 ಕಿ.ಮೀ ನಲ್ಲಿ ಕಾಲುಭಾಗದಷ್ಟು ಮಾತ್ರ ರಸ್ತೆ ನಿರ್ಮಿಸಿ ₹2 ಕೋಟಿ ಬಿಲ್ ಎತ್ತುವಳಿ ಮಾಡಿರುವುದಲ್ಲದೆ ಸಿಸಿ ರಸ್ತೆಯನ್ನು ಅತ್ಯಂತ ಕಳಪೆಯಾಗಿ ನಿರ್ಮಿಸಿದ್ದರಿಂದ ಕಂಕರ್‌ಗಳು ಒಂದೆರಡು ತಿಂಗಳಲ್ಲಿಯೇ ತೇಲಿದ್ದವು. ರಸ್ತೆಯಲ್ಲಿ ವಾಹನ ಸಂಚರಿಸಿದರೆ ಸಾಕು ಮಣ್ಣಿನ ರಸ್ತೆಯಲ್ಲಿ ಹರಡುವಂತೆ ದೂಳು ಹರಡುತ್ತಿತ್ತು. ಕಳಪೆ ಮಟ್ಟದಲ್ಲಿ ರಸ್ತೆ ನಿರ್ಮಿಸಿದ ಪ್ರಯುಕ್ತ ಈ ರೀತಿ ಕಂಕರ್ ತೇಲಿ ದೂಳು ಹರಡುತ್ತಿದೆ ಎಂದು ವೆಂಕಟೇಶ್ವರ ನಗರ, ಖದರಿಯಾ ಕಾಲೊನಿ, ಗಂಗಾನಗರ ಮತ್ತು ಬಸವನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ನಿಗಮದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು.

ನಾಗರಿಕರ ಆಕ್ರೋಶ ಗಮನಿಸಿದ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಸಿಸಿ ರಸ್ತೆಯ ಮೇಲೆ ಡಾಂಬರ್ ಹಾಕಿ ಮೇಲೆ ಇದ್ದ ಕಂಕರ್ ಮುಚ್ಚಲು ಪ್ರಯತ್ನಿಸಿದ್ದರು. ಗಂಗಾನಗರ ಸೇರಿ ವಿವಿಧ ಬಡಾವಣೆಗಳಲ್ಲಿ ಡಾಂಬರ್ ಹಾಕುತ್ತಿರುವುದನ್ನು ಗಮನಿಸಿದ ಕೆಪಿಸಿಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಕಿಸಾನ್‍ಸಭಾ ತಾಲ್ಲೂಕು ಘಟಕದ ಸಂಚಾಲಕ ಚಂದ್ರಶೇಖರ ಕ್ಯಾತ್ನಟ್ಟಿ, ಎಐಟಿಯುಸಿ ಮುಖಂಡ ವೆಂಕನಗೌಡ ಗದ್ರಟಗಿ ಸೇರಿದಂತೆ ಹಲವು ಸಂಘ–ಸಂಸ್ಥೆಗಳ ಮುಖಂಡರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಕೆಆರ್‌ಐಡಿಎಲ್ ಮುಖ್ಯ ಎಂಜಿನಿಯರ್ ಅವರು ಭೇಟಿ ನೀಡಿ ತಮ್ಮ ಸಂಸ್ಥೆಯಿಂದ ನಿರ್ಮಿಸಿದ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಖಿಲ ಗೋಖಲೆ ಮತ್ತು ಸಹಾಯಕ ಎಂಜಿನಿಯರ್ ಮಹಾಂತೇಶ ಅವರನ್ನು ಸಾರ್ವಜನಿಕರ ಎದುರಿನಲ್ಲಿಯೇ ತೀವ್ರ ತರಾಟೆಗೆ ತೆಗೆದುಕೊಂಡು ಸೂಕ್ತ ಕ್ರಮಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದರು.

ಕಾಮಗಾರಿ ಸ್ಥಗಿತ: ಮುಖ್ಯ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಡಾಂಬರ್ ಹಾಕುವ ಕೆಲಸ ಸ್ಥಗಿತಗೊಳಿಸಲಾಗಿದೆ. ಸ್ಥಗಿತ ಕಾರಣ ಕೇಳಲು ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಸಂಪರ್ಕಿಸಲು ಮಾಡಿದ ದೂರವಾಣಿ ಕರೆಗೆ ಅವರು ಲಭ್ಯವಾಗಲಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಜೊತೆಗೆ ಕಳಪೆಯಾಗಿರುವುದನ್ನು ಸರಿಪಡಿಸುವಂತೆ ನಗರಾಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ವೀರಭದ್ರಪ್ಪ ಕುರಕುಂದಿ ಮತ್ತು ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT