ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ

ಸುಗಮ ಪರೀಕ್ಷೆ, ಫಲಿತಾಂಶದತ್ತ ವಿದ್ಯಾರ್ಥಿಗಳ ಚಿತ್ತ; ಶೇ 99 ಪ್ರತಿಶತ ಹಾಜರು
Last Updated 23 ಜುಲೈ 2021, 6:27 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು. ಶೇ 99ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಎಲ್ಲರ ಚಿತ್ತ ಇದೀಗ ಫಲಿತಾಂಶದತ್ತ ತಿರುಗಿದೆ.

ಕೋವಿಡ್‌ ಮಧ್ಯೆಯೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಪೋಷಕರು ನಿಟ್ಟುಸಿರು ಬಿಟ್ಟರು. ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ಎದುರಿಸಿದರು.

ಎರಡು ಪರೀಕ್ಷೆ (ತಲಾ ಮೂರು ವಿಷಯಗಳು) ಮುಗಿದಿದ್ದು, ಇನ್ನೇನ್ನಿದ್ದರೂ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಬಾರಿ ಒಎಂಆರ್‌ ಶೀಟ್‌ನಲ್ಲಿ ಸರಿ ಉತ್ತರ ಗುರುತಿಸುವುದು ಬಹುತೇಕ ಎಲ್ಲರಿಗೂ ಸುಲಭವಾಗಿತ್ತು.

ಎಲ್ಲರೂ ಪಾಸ್‌: ಪರೀಕ್ಷೆ ನಡೆಸಿದರೂ ಯಾರನ್ನೂ ಅನುತ್ತೀರ್ಣ ಮಾಡುವಂತಿಲ್ಲ. ಇದರಿಂದ ಪರೀಕ್ಷೆ ಬರೆದವರು ಎಲ್ಲರೂ ಪಾಸ್‌ ಆಗುತ್ತಾರೆ. ಇದು ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳಿಗೆ ವರದಾನವಾಗಿದೆ.

ಹಾಜರಾತಿ, ಗೈರಾದವರ ವಿವರ: ಕನ್ನಡ ಪರೀಕ್ಷೆಗೆ ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ 15,645 ಇದ್ದರೆ 15,472 ಹಾಜರು, 173 ಗೈರಾಗಿದ್ದಾರೆ. ಇಂಗ್ಲಿಷ್ ಪರೀಕ್ಷೆಗೆ 16,081 ಹೆಸರು ನೋಂದಾಯಿಸಿದ್ದರೆ, 15,898 ಹಾಜರಾಗಿದ್ದು, 183 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಹಿಂದಿ ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ 15,594, ಹಾಜರಾದವರ ಸಂಖ್ಯೆ 15,424, 170 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

ಸರ್ಕಾರಿ, ಖಾಸಗಿ ವಸತಿ ನಿಲಯಗಳಲ್ಲಿದ್ದು, 13 ಕನ್ನಡ, 11 ಇಂಗ್ಲಿಷ್ ಹಾಗೂ 5 ಹಿಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜಿಲ್ಲೆಯ 92 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

371 ವಲಸೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು ಪರೀಕ್ಷೆ ಬರೆದಿದ್ದಾರೆ. ಗುರುವಾರ ಬೆಳಿಗ್ಗೆ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಆತಂಕ ಉಂಟಾಗಿತ್ತು. ಆದರೆ, ಪರೀಕ್ಷೆ ಸಮಯಕ್ಕೆ ಮಳೆ ನಿಂತಿದ್ದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗಲಿಲ್ಲ.

ಜಿಲ್ಲಾಧಿಕಾರಿ, ಸಿಇಒ ಭೇಟಿ: ನಗರದ ಡಾನ್ ಬೋಸ್ಕೋ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಅವರು ಭೇಟಿ ನೀಡಿ ಪರಿಶೀಲಿಸಿದರು.

ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಡಾ. ಮಲ್ಲಪ್ಪ ಯರಗೋಳ, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಇದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಅವರು ಜಿಲ್ಲೆಯ ಶಹಾಪುರ ಹಾಗೂ ಸುರಪುರ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿದರು.

‘ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ ಜಿಲ್ಲೆಯಲ್ಲಿ ಪರೀಕ್ಷೆ ಯಶಸ್ವಿಗೊಳಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ತಿಳಿಸಿದರು.

ಹಾಜರಾತಿವಿವರ: ಜುಲೈ19 ಮತ್ತು 22 ರಂದು ತಲಾ ಮೂರು ವಿಷಯ 120 ಅಂಕಗಳಿಗೆ ಪರೀಕ್ಷೆ ನಡೆದಿದ್ದು, ಶೇ 98 ಮತ್ತು 99 ಹಾಜರಾತಿ ಇದೆ.

ಜುಲೈ19ರ ಮೊದಲ ಪರೀಕ್ಷೆಯಲ್ಲಿಗಣಿತ,ವಿಜ್ಞಾನ, ಸಮಾಜ ವಿಜ್ಞಾನವಿಷಯಗಳಿಗೆ ಶೇ 98ರಷ್ಟು ಹಾಜರಾತಿ, ಜುಲೈ 22ರಂದು ನಡೆದ ಪ್ರಥಮ ಭಾಷೆ,ದ್ವಿತೀಯ ಭಾಷೆ,ತೃತೀಯ ಭಾಷೆ ವಿಷಯಗಳ ಪರೀಕ್ಷೆಗೆ ಶೇ 99ರಷ್ಟು ಪ್ರತಿಶತ ಹಾಜರಾತಿ ದಾಖಲಾಗಿದೆ.

ಆಗಸ್ಟ್‌ 10ರ ಒಳಗಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಬರುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಶಹಾಪುರ ವರದಿ:

ತಾಲ್ಲೂಕಿನ 29 ಕೇಂದ್ರದಲ್ಲಿ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 46 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಅದರಂತೆ 4,936 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. 4,890 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ತಿಳಿಸಿದ್ದಾರೆ.

ಗುರುವಾರ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಪತ್ರಿಕೆ ಬರಿದಿದ್ದೇನೆ. ಎಲ್ಲವೂ ಸರಳವಾಗಿದ್ದವು. ಪೂರ್ಣ ಪ್ರಮಾಣದ ಪರೀಕ್ಷೆ ಬರೆದರೆ ಮಾತ್ರ ನಿಜವಾದ ಸಾಮರ್ಥ್ಯ ಗೊತ್ತಾಗುತ್ತದೆ.
-ಬಸವರಾಜ ಮಹಾದೇವಪ್ಪ, ವಿದ್ಯಾರ್ಥಿ

***
ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯದೇ ಇರುವುದರಿಂದ ಸಮಸ್ಯೆ ಆಗಿದೆ.

- ಎಜಾಜ್‌ ಪಟೇಲ್‌, ಪೋಷಕ

***

ವಿದ್ಯಾರ್ಥಿಗಳು ಅತ್ಯಂತ ಹುಮ್ಮಸ್ಸಿನಲ್ಲಿ ಪರೀಕ್ಷೆಯನ್ನು ಎದುರಿಸಿದರು. ನಿಗದಿ ಪಡಿಸಿದ ಸಮಯಕ್ಕಿಂತಲೂ ಮುಂಚಿತವಾಗಿ ತಮ್ಮ ಉತ್ತರಗಳನ್ನು ಪೂರ್ಣಗೊಳಿಸಿದ್ದಾರೆ.
-ನಾಗನಗೌಡ ಪಾಟೀಲ, ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT