ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆ: ಮೂವರ ವಿಚಾರಣೆ

Published 28 ಅಕ್ಟೋಬರ್ 2023, 10:59 IST
Last Updated 28 ಅಕ್ಟೋಬರ್ 2023, 10:59 IST
ಅಕ್ಷರ ಗಾತ್ರ

ಯಾದಗಿರಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆಯು ಶನಿವಾರ ಆರಂಭವಾಗಿದ್ದು, ಒಬ್ಬ ಅಭ್ಯರ್ಥಿ ಬ್ಲೂಟೂತ್‌ ಬಳಕೆ ಮಾಡಿರುವ ಶಂಕೆ ಮೇರೆಗೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಮೊದಲ ಪತ್ರಿಕೆ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆ ಮಾಡಿರುವ ಶಂಕೆಯ ಮೇರೆಗೆ ನಗರ ಪೊಲೀಸರು ಅಭ್ಯರ್ಥಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ನಕಲು ಅಭ್ಯರ್ಥಿಯೇ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಬಂದಿದ್ದಾಗಿ ಮಾಹಿತಿ ಸಿಕ್ಕಿದೆ. ಪೊಲೀಸರು ಅಭ್ಯರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಬ್ಲೂಟೂತ್‌ ಬಳಕೆ ಸಂಬಂಧ ಒಬ್ಬ ಅಭ್ಯರ್ಥಿಯನ್ನು ವಶಕ್ಕೆ ಪಡೆಯಲಾಗಿದೆ. ಇವರ ಜೊತೆ ಎಷ್ಟು ಜನ ಇದ್ದಾರೆ ಎನ್ನುವುದು ವಿಚಾರಣೆ ನಂತರ ತಿಳಿದುಬರಲಿದೆ. ಆನಂತರ ಎಲ್ಲ ಮಾಹಿತಿ ನೀಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿಸಿದ್ದಾರೆ.

‘ಮೂವರು ಅಭ್ಯರ್ಥಿಗಳನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಇವರ ಹಿಂದೆ ಯಾರಿದ್ದಾರೆ ಎಂದು ಪೂರ್ಣ ವಿಚಾರಣೆ ನಂತರ ಮಾಹಿತಿ ತಿಳಿಸಲು ಸಾಧ್ಯ. ಒಬ್ಬರು ಕೇಂದ್ರದ ಒಳಗೆ ಸಿಕ್ಕಿದ್ದಾರೆ. ಇನ್ನಿಬ್ಬರು ಕೇಂದ್ರ ಹೊರಗೆ ಸಿಕ್ಕಿಬಿದ್ದಿದ್ದಾರೆ. ಅಭ್ಯರ್ಥಿಯಿಂದ ಬ್ಲೂಟೂತ್‌ ಮತ್ತು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಸದ್ಯ ಬ್ಲೂಟೂತ್ ಬಳಕೆ ಮಾಡಿದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. 6 ಜನರನ್ನು ಠಾಣೆಗೆ ಕರೆ ತಂದ ಬಳಿಕ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ.

ಅ.28, 29 ರಂದು ಬೆಳಿಗ್ಗೆ 10.30 ರಿಂದ 12.30 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯ ವರೆಗೆ ಪರೀಕ್ಷೆ ನಡೆಸಲಾಗುತ್ತಿದೆ.

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಬೆಂಗಳೂರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಮತ್ತು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಅಕ್ರಮ ನಡೆದ ಬಳಿಕ ಎಚ್ಚೆತ್ತ ಪೊಲೀಸರು:

ಪತ್ರಿಕೆ–1 ರಲ್ಲಿ ನಡೆದ ಬ್ಲೂಟೂತ್‌ ಬಳಸಿ ಅಕ್ರಮ ನಡೆಸಿರುವುದು ಪತ್ತೆಯಾಗಿದ್ದರಿಂದ ಪತ್ರಿಕೆ–2ನೇ ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶ ಮಾಡುತ್ತಿರುವ ಪರೀಕ್ಷಾರ್ಥಿಗಳಿಗೆ ಮೆಟಲ್ ಡಿಟೆಕ್ಟರ್ ಮೂಲಕ ಪೊಲೀಸರು ತಪಾಸಣೆ ಮಾಡಿದರು. ಮಧ್ಯಾಹ್ನ 2:30 ಕ್ಕೆ ಆರಂಭವಾಗಿರುವ ಎರಡನೇ ಪೇಪರ್‌ನ ಪರೀಕ್ಷೆ. ಬೆಳಿಗ್ಗೆ ಒಂದನೇ ಪೇಪರ್‌ನ ಪರೀಕ್ಷೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT