ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಗಾಂಧಿ ಭವನಕ್ಕೆ ಕಗ್ಗಂಟಾದ ನಿವೇಶನ

ಭವನ ನಿರ್ಮಾಣಕ್ಕಾಗಿ ₹5 ಕೋಟಿ ಮಂಜೂರು, ಅನುದಾನ ವಾಪಸ್‌ ಕೇಳಿತ್ತಿರುವ ಪ್ರಾಧಿಕಾರ
Published : 2 ಅಕ್ಟೋಬರ್ 2024, 5:09 IST
Last Updated : 2 ಅಕ್ಟೋಬರ್ 2024, 5:09 IST
ಫಾಲೋ ಮಾಡಿ
Comments

ಯಾದಗಿರಿ: ಪ್ರತಿಯೊಂದು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ಭವನ ನಿರ್ಮಾಣ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಿದ್ದರೆ, ಜಿಲ್ಲೆಯಲ್ಲಿ ಮಾತ್ರ ಇದು ಈಡೇರುತ್ತಿಲ್ಲ.

ಜಿಲ್ಲೆಯಾಗಿ 14 ವರ್ಷಗಳಾಗಿದ್ದು, ನಿವೇಶನ ಸಮಸ್ಯೆಯಿಂದ ಗಾಂಧಿ ಭವನ ಇನ್ನೂ ನಿರ್ಮಾಣವಾಗಿಲ್ಲ. ಭವನ ನಿರ್ಮಾಣ ಮಾಡಿ ಮಹಾತ್ಮಗಾಂಧಿ ಚರಿತ್ರೆಯನ್ನು ಒಂದೇ ಸೂರಿನಡಿ ತಿಳಿಸಲು ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಅನುದಾನವಿದ್ದರೂ ಇಲ್ಲಿಯತನಕ ಕಾಲಕೂಡಿ ಬಂದಿಲ್ಲ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಭವನ ನಿರ್ಮಾಣಕ್ಕಾಗಿ ₹5 ಕೋಟಿ ಮಂಜೂರು ಮಾಡಿ ಹಲವಾರು ವರ್ಷಗಳಾಗಿವೆ. ಆದರೂ ಅನುದಾನ ಬಳಕೆಯಾಗಿಲ್ಲ.

₹23 ಲಕ್ಷಕ್ಕೆ ಗುತ್ತಿಗೆ ಜಾಗ: ನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಸಮೀಪ ಕಳೆದ ಕೆಲ ವರ್ಷಗಳ ಹಿಂದೆ ₹23 ಲಕ್ಷಕ್ಕೆ 30 ವರ್ಷಗಳ ತನಕ ಗುತ್ತಿಗೆ ಆಧಾರದ ಮೇಲೆ ಜಾಗವನ್ನು ವಾರ್ತಾ ಇಲಾಖೆಯಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಸ್ವಂತ ಜಾಗದಲ್ಲಿ ಗಾಂಧಿ ಭವನ ನಿರ್ಮಾಣ ಮಾಡಬೇಕು ಎಂದು ಅನುದಾನ ನೀಡಿದ್ದರೆ ವಾರ್ತಾ ಇಲಾಖೆ ಅಧಿಕಾರಿಗಳು ಜಾಗ ಗುತ್ತಿಗೆ ಪಡೆದಿದ್ದರಿಂದ ಭವನ ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿದೆ.

ಗಾಂಧಿ ಭವನ ನಿರ್ಮಾಣಕ್ಕೆ ಅನುದಾನ ಬಂದು ಹಲವಾರು ವರ್ಷಗಳು ಕಳೆದರೂ ಕಟ್ಟಡ ನಿರ್ಮಾಣವಾಗದ ಕಾರಣ ಗಡಿ ಪ್ರಾಧಿಕಾರ ತಮ್ಮ ಪಾಲಿನ ಹಣವನ್ನು ವಾಪಸ್‌ ನೀಡುವಂತೆ ಕೇಳುತ್ತಿದೆ ಎನ್ನಲಾಗಿದೆ.

ಹೋರಾಟದ ಛಾಯಾಚಿತ್ರ ಒಳಗೊಂಡ ಭವನ: ಶಾಂತಿ, ಅಹಿಂಸೆ, ಸತ್ಯ ಎಂಬ ಅಂಶಗಳು ಗಾಂಧೀಜಿಯವರು ಅಸ್ತ್ರಗಳು. ಇವುಗಳನ್ನು ಸಾರ್ವಜನಿಕರು, ಯುವಜನತೆಗೆ ತಿಳಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ. ಆದರೆ, ಅನುದಾನ ಜಿಲ್ಲೆಯಲ್ಲಿ ಬಳಕೆಯಾಗುತ್ತಿಲ್ಲ. ₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ ಬೇಕಿರುವ ಗಾಂಧಿ ಭವನ ಗಾಂಧೀಜಿ ಅವರ ತತ್ವಆದರ್ಶ, ಜೀವನದ ಹೋರಾಟದ ಛಾಯಾಚಿತ್ರ ಕುರಿತ ಮಾಹಿತಿ ಒಳಗೊಂಡ ಗ್ರಂಥಾಲಯವನ್ನೂ ಈ ಭವನದಲ್ಲಿ ಅಳವಡಿಸಲಾಗುತ್ತಿದೆ.

ಡಿಜಿಟಲ್ ಫಲಕದ ಮೂಲಕ ಗಾಂಧೀಜಿ ಅವರ ಚಿತ್ರಾವಳಿ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಗಾಂಧಿ ಭವನ ನಿರ್ಮಾಣ ಪೂರ್ಣಗೊಂಡರೆ, ಒಂದೇ ಸೂರಿನಡಿ ಗಾಂಧೀಜಿಯವರ ಜೀವನ ದರ್ಶನವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದವರು ಪ್ರಯತ್ನ ಮಾಡಬೇಕು ಎನ್ನುವುದು ಜಿಲ್ಲೆಯ ಗಾಂಧಿ ಪ್ರೇಮಿಗಳ ಆಗ್ರಹವಾಗಿದೆ.

ಗಾಂಧಿಭವನ ನಿರ್ಮಾಣಕ್ಕಾಗಿ ಶಾಶ್ವತ ಜಾಗ ಹುಡುಕುವಂತೆ ಸರ್ಕಾರದ ನಿರ್ದೇಶನದಂತೆ ಮತ್ತೊಮ್ಮೆ ಎಲ್ಲ ದಾಖಲೆಗಳನ್ನು ಪುನರ್‌ ಪರಿಶೀಲಿಸಲಾಗುತ್ತಿದೆ
ಸುಲೈಮಾನ್‌ ಡಿ ನದಾಫ್ ಹಿರಿಯ ಸಹಾಯಕ ನಿರ್ದೇಶಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಮಹಾತ್ಮ ಗಾಂಧಿ ಭವನ ನಿರ್ಮಾಣಕ್ಕೆ ಅನುದಾನವಿದ್ದರೂ ಅಧಿಕಾರಿಗಳಲ್ಲಿ ನಿರ್ಮಿಸುವ ಇಚ್ಛಾಶಕ್ತಿ ಕಾಣಬರುತ್ತಿದೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಲಿ
ಬಸವರಾಜ ಪಾಟೀಲ ನಗರ ನಿವಾಸಿ

ಮಹಾತ್ಮ ಗಾಂಧಿಗೆ ಗುಡಿ

ಯಾದಗಿರಿ: ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಶೆಟ್ಟಿಹಾಳ ಗ್ರಾಮದಲ್ಲಿ ಮಹಾತ್ಮಗಾಂಧಿ ಮೇಲಿನ ಅಭಿಮಾನದಿಂದ 1948ರಲ್ಲಿ ಸ್ವಾಂತಂತ್ರ್ಯ ಹೋರಾಟಗಾರ ದಿ. ಹಂಪಣ್ಣ ಸಾಹುಕಾರ ಸ್ವತಃ ಸಿಮೆಂಟ್‌ನಿಂದ ಗಾಂಧಿಜೀ ಅವರ ಪುತ್ಥಳಿ ತಯಾರಿಸಿ ದೇವಸ್ಥಾನ ನಿರ್ಮಿಸಿದ್ದಾರೆ. ‌ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲೇ ಗಾಂಧೀಜಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಇಲ್ಲಿಯೇ ದ್ಯಾವಮ್ಮ ದೇವಸ್ಥಾನ ದರ್ಗಾ ಮಸೀದಿ ಬಸವಣ್ಣ ಆಂಜನೇಯ ದೇವಸ್ಥಾನವೂ ಇದೆ.  ಈ ಹಿಂದೆ ಗಾಂಧಿ ಗುಡಿಯ ಕಟ್ಟೆಯಲ್ಲೇ ಸ್ಥಳೀಯ ನ್ಯಾಯ ಪಂಚಾಯಿತಿಗಳನ್ನೂ ಬಗೆಹರಿಸಿ ಸತ್ಯ ಶಾಂತಿ ಅಹಿಂಸೆಯ ನಿಷ್ಠೆಯ ತತ್ವ ಸಾರುವ ಕೆಲಸಗಳು ನಡೆಯುತ್ತಿದ್ದವು. ಗ್ರಾಮದಲ್ಲಿ ಯಾವುದೇ ಸಂಭ್ರದ ದಿನ ಜಾತ್ರೆಗಳು ಇದ್ದರೆ ಮೊದಲು ಗಾಂಧೀಜಿ ಗುಡಿಗೆ ಮೊದಲು ಪೂಜೆ ಮಾಡಿ ನಂತರ ಗ್ರಾಮದ ದೇವರುಗಳಿಗೆ ಪೂಜೆ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ಹೇಳುವ ಮಾತಾಗಿದೆ.

ಗಾಂಧಿ ಜಯಂತಿ ಇಂದು

ಯಾದಗಿರಿ: ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಗಾಂಧೀಜಿ 155ನೇ ಜಯಂತಿ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ 2024-25ನೇ ಸಾಲಿನ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅ.2ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಯಾದಗಿರಿ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಸುಭಾಷಚಂದ್ರ ಕೌಲಗಿ ಅವರು ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT