ಗುರುವಾರ , ಆಗಸ್ಟ್ 5, 2021
28 °C
ವದಂತಿಗೆ ಯಾರೂ ಕಿವಿಗೊಡಬೇಡಿ: ಶಾಸಕ ವೆಂಕಟರೆಡ್ಡಿ ಮುದ್ನಾಳ ಮನವಿ

ಯುವ ಜನತೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ: ವದಂತಿಗೆ ಯಾರೂ ಕಿವಿಗೊಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೆಲವರು ಲಸಿಕೆ ಬಗ್ಗೆ ತಪ್ಪು ಪ್ರಚಾರ ಮಾಡುತ್ತಿದ್ದಾರೆ. ಯಾರೂ ವದಂತಿಗೆ ಕಿವಿಗೊಡಬಾರದು. ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವ ಜನತೆ ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೊನಾ ಬಂದರೂ ಇದರಿಂದ ನಿಮಗೆ ಯಾವುದೇ ಸಾವು ನೋವುಗಳು ಸಂಭವಿಸುವುದಿಲ್ಲ. ಇದು ನಮ್ಮನ್ನು ಸುರಕ್ಷಿತವಾಗಿ ಇರಿಸುತ್ತದೆ ಎಂದು ಹೇಳಿದರು.

ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕು. ಜನ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಅಂತರ ಕಾಪಾಡಿಕೊಳ್ಳಬೇಕು. ನಿಮ್ಮ ರಕ್ಷಣೆ ಜತೆಗೆ ಬೇರೆಯವರ ರಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ, ಯೂಡಾ ಅಧ್ಯಕ್ಷ ಬಸವರಾಜ ಚಂಡರಕಿ, ಡಾ. ವಿನೀತಾ ಇದ್ದರು.

ವಾರ್ಡ್‌ ಸಂಖ್ಯೆ 23:

ನಗರದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ವಾರ್ಡ್ ಸಂಖ್ಯೆ 23 ರಲ್ಲಿ ಲಸಿಕೆ ಅಭಿಯಾನ ಮಾಡಲಾಯಿತು.

ಈ ವೇಳೆ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅವಿನಾಶ್ ಜಗನ್ನಾಥ ಮಾತನಾಡಿ, ಜನರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿರುವುದು ಕಂಡುಬರುತ್ತಿದೆ. ಲಸಿಕೆ ಹಾಕುವುದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಎಲ್ಲರೂ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ವಿನಂತಿಸಿದರು.

ಸಿದ್ದಯ್ಯ ಸ್ವಾಮಿ ಮಲ್ಲಿಕಾರ್ಜುನ ಭಾವಿಕಟ್ಟಿ, ಶರಣು ಆಶನಾಳ, ಸಿದ್ದು ಪಾಟೀಲ, ವಿರೇಶ ದುಗನೂರ, ಶರಣು ಪಡಶೆಟ್ಟಿ, ಮಲ್ಲಿಕಾರ್ಜುನ ಮಡಿವಾಳ ಇದ್ದರು.

***

ಒಂದೇ 15 ಸಾವಿರ ಜನರಿಗೆ ಲಸಿಕೆ

ಜಿಲ್ಲೆಯಲ್ಲಿ ಸೋಮವಾರ ಮಹಾ ಲಸಿಕೆ ಮೇಳ (ಲಸಿಕಾ ಮೇಳ) ಆಯೋಜಿಸಿದ್ದು, 15,329 ಜನರು ಲಸಿಕೆ ಪಡೆದಿದ್ದಾರೆ.

18 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಮೇಲ್ಪಟ್ಟ ರಾಜ್ಯ ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ಕೊರೊನಾ ಮುಂಚೂಣಿ ಕಾರ್ಯಕರ್ತರಿಗಾಗಿ ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಅಂಗನವಾಡಿಗಳಲ್ಲಿ ಲಸಿಕೆ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.