ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಜೀವಿಗಳಿಗೆ ಕಾನೂನು ಸೇವಾ ಪ್ರಾಧಿಕಾರ ನೆರವು

Last Updated 11 ಜನವರಿ 2012, 9:45 IST
ಅಕ್ಷರ ಗಾತ್ರ

ಶಹಾಪುರ: ಪಟ್ಟಣದ ಸಿಪಿಎಸ್ ಶಾಲಾ ಮೈದಾನದ ಹಿಂದುಗಡೆ ಸುಮಾರು 24 ಡಬ್ಬಾಗಳನ್ನು ಇಟ್ಟುಕೊಂಡು ಉಪ ಜೀವಿಸುತ್ತಿರುವ ಶ್ರಮ ಜೀವಿಗಳ ಸಂಘದ ಸದಸ್ಯರಿಗೆ ಪುರಸಭೆ ಮುಖ್ಯಾಧಿಕಾರಿ ಲಿಖಿತ ನೋಟಿಸ್ ಜಾರಿ ಮಾಡಿ ನೋಟಿಸ್ ತಲುಪಿದ 7 ದಿನಗಳಲ್ಲಿ ತೆರವುಗೊಳಿಸುವಂತೆ ಸೂಚಿಸಿದ್ದರು. ಕಾನೂನು ಸೇವಾ ಸಮಿತಿ ಮೂಲಕ ನೆರವಿನ ಅಭಯ ಪಡೆದ ಸದಸ್ಯರು ಸ್ಥಳೀಯ ಕೋರ್ಟ್‌ನಲ್ಲಿ ನಿರ್ಬಂಧಾಜ್ಞೆ ದಾವೆ ಸಲ್ಲಿಸಿದರು. ನ್ಯಾಯಾಧೀಶರಾದ ಸತೀಶ ಎಸ್.ಟಿ. ಪುರಸಭೆ ಮುಖ್ಯಾಧಿಕಾರಿಗೆ ತುರ್ತು ನೋಟಿಸು ಜಾರಿ ಮಾಡಿ ಡಬ್ಬಾಗಳನ್ನು ತೆಗೆಯದಂತೆ `ಯಥಾಸ್ಥಿತಿ~ ಕಾಪಾಡುವಂತೆ ಆದೇಶ ನೀಡಿದ್ದಾರೆ.

ಏನಿದು ಪ್ರಕರಣ: ಪಟ್ಟಣ ಸರ್ಕಾರಿ ಶಾಲಾ ಮೈದಾನದ ಕಂಪೌಂಡ್‌ಹಿಂದುಗಡೆ ಹಾಗೂ ಚರಂಡಿಯ ಮೇಲೆ ಚಿಕ್ಕದಾದ ಡಬ್ಬಾದಲ್ಲಿ ಟೇಲರ್ ಅಂಗಡಿ, ಕ್ಷೌರ ಅಂಗಡಿ, ಸೂಚಿ, ಪಿನ್ನ ಮಾರಾಟ ಅಂಗಡಿ, ಟಿ.ವಿ. ಫ್ಯಾನ್, ರಿಪೇರಿ ಅಂಗಡಿ, ಮಡಿಕೆ ಮಾರಾಟ ಅಂಗಡಿ, ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟದ ಅಂಗಡಿ ಹೀಗೆ 24 ಅಂಗಡಿಗಳು ಹಲವಾರು ವರ್ಷಗಳ ಹಿಂದೆ ಸ್ಥಾಪಿಸಿ ಬರುವ ಒಂದಿಷ್ಟು ದಿನದ ಆದಾಯ ಮೂಲಕ ಬದುಕು ಸಾಗಿಸುತ್ತಾರೆ.

ಕಳೆದ 30ರಂದು ಪುರಸಭೆ ಮುಖ್ಯಾಧಿಕಾರಿಯವರು ಲಿಖಿತವಾಗಿ ನೋಟಿಸ್ ಜಾರಿ ಮಾಡಿ ನೋಟಿಸು ತಲುಪಿದ 7 ದಿನಗಳ ಒಳಗೆ ಡಬ್ಬಾಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಇಡೀ ಕುಟುಂಬ ಡಬ್ಬಾಗಳ ಮೇಲೆ ಅವಲಂಬಿತವಾಗಿರುವಾಗ ಶ್ರಮಜೀವಿಗಳ ಸಂಘದ ಸದಸ್ಯರಿಗೆ ದಿಕ್ಕು ತೋಚದಾಯಿತು.

ಸಂಘದ ಅಧ್ಯಕ್ಷರಾದ ಬಸವರಾಜ ಕುಂಬಾರ ಹಾಗೂ ಇತರ ನೊಂದ ಜನತೆ ನೇರವಾಗಿ ಪ್ರತಿ ಶುಕ್ರವಾರ ನಡೆಯುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಭೆಯ ಮುಂದೆ ಹಾಜರಾಗಿ ಸಮಸ್ಯೆಯನ್ನು ಬಿಚ್ಚಿಟ್ಟರು.

ಶ್ರಮಜೀವಿಗಳ ಸಮಸ್ಯೆಯನ್ನು ಆಲಿಸಿದ ಪ್ರಾಧಿಕಾರದ ಅಧ್ಯಕ್ಷರಾದ ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ ಅವರು ಉಚಿತ ಕಾನೂನು ಸೇವಾ ಸಮಿತಿಗೆ ಶಿಫಾರಸು ಮಾಡಿದರು. ಅದರಂತೆ ಸ್ಥಳೀಯ ಕೋರ್ಟ್‌ನಲ್ಲಿ ನಿರ್ಬಂಧಕಾಜ್ಞೆ ದಾವೆ ಸಲ್ಲಿಸಿದರು.

ಹತಾಶೆಗೊಂಡ ಬಡ ಜನತೆಗೆ ಕಾನೂನು ಸೇವಾ ಸಮಿತಿಯು ಹೊಸ ಭರವಸೆ ಮೂಡಿಸಿದ್ದು ತುಸು ನೆಮ್ಮದಿಯನ್ನು ಉಂಟು ಮಾಡಿದೆ. ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಿಗೆ ನೊಂದ ಜನತೆ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT