ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಜನತೆ ಬಾಪು ಆದರ್ಶ, ತತ್ವ ಪಾಲಿಸಿ’

ಅರಳಾಳುಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್ ಅಭಿಮತ
Last Updated 5 ಫೆಬ್ರುವರಿ 2019, 14:22 IST
ಅಕ್ಷರ ಗಾತ್ರ

ಚನ್ನಪಟ್ಟಣ: ’ಗಾಂಧೀಜಿ ಅವರು ಅಹಿಂಸಾ ತತ್ವದ ಮೂಲಕ ಸ್ವಾತಂತ್ರ್ಯ ಪಡೆದುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟು ಮಹಾತ್ಮರಾಗಿದ್ದಾರೆ‘ ಎಂದು ತಾಲ್ಲೂಕಿನ ಅರಳಾಳುಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್ ಹೇಳಿದರು.

ಭೂಹಳ್ಳಿ ಗ್ರಾಮದ ಕವಿವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ವಿಚಾರ ವೇದಿಕೆಯ ಉದ್ಘಾಟನೆ ಹಾಗೂ ಗಾಂಧಿ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

’ಯುವ ಪೀಳಿಗೆಯು ಗಾಂಧೀಜಿ ಅವರು ನಡೆದು ಬಂದ ದಾರಿ ಮತ್ತು ಆದರ್ಶವನ್ನು ಪಾಲಿಸಬೇಕು.ಅವರು ಗ್ರಾಮ ಸ್ವರಾಜ್ಯವಾದರೆ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದ್ದರು. ದೇಶಕ್ಕಾಗಿ ಹೋರಾಡಿದ ಅವರ ತತ್ವ ಸಿದ್ಧಾಂತವನ್ನು ಎಲ್ಲರೂ ಅನುಸರಿಸಬೇಕು. ಅವರು ನನ್ನ ಜೀವನವೇ ಒಂದು ಸಂದೇಶ ಎಂದಿದ್ದರು. ಅದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು‘ ಎಂದರು.

ಉಪನ್ಯಾಸಕ ದೇವರಾಜು ಮಾತನಾಡಿ, ’ಆಚರಣೆಗಿಂತ ಮಹಾತ್ಮರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿ ಅವರ ಆಶಯದಂತೆ ಒಬ್ಬರು ಮತ್ತೊಬ್ಬರಿಗೆ ಸಹಕಾರಿಯಾಗಬೇಕು. ಗಾಂಧಿ ತತ್ವಗಳು ಎಲ್ಲರಿಗೂ ಆದರ್ಶವಾದುದು. ವಿಶ್ವದ ಅನೇಕ ಸಮಸ್ಯೆಗಳಿಗೆ ಅವರ ಚಿಂತನೆಗಳು ಉತ್ತರವಾಗಿವೆ’ ಎಂದರು.

ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ ಮಾತನಾಡಿ, ’ಬಲಪಂಥೀಯ ಧೋರಣೆ ಹೊಂದಿರುವವರು ಗಾಂಧೀಜಿ, ಬುದ್ಧ, ಬಸವ, ಅಂಬೇಡ್ಕರ್ ಅಂತಹ ಮಹನೀಯರ ಹೆಸರನ್ನು ಅಳಿಸಿಹಾಕುವ ಸಂಚು ನಡೆಸುತ್ತಿದ್ದಾರೆ. ಸಮಾಜವನ್ನು ಅಪಾಯದತ್ತ ಕೊಂಡೊಯ್ಯುತ್ತಿದ್ದಾರೆ. ಇದನ್ನು ತಡೆದು, ಮಹಾಪುರುಷರ ಜೀವನ ಸಾಧನೆ, ಹೋರಾಟ, ಸಂದೇಶ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶ ಹೊಂದಬೇಕು‘ ಎಂದರು.

’ವೇದಿಕೆಯ ವತಿಯಿಂದ ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಕವಿವನದಲ್ಲಿರುವ ಬುದ್ಧೇಶ್ವರ ಸನ್ನಿಧಿಯಲ್ಲಿ ಮಹಾಪುರುಷರ ಸ್ಮರಣೆಯನ್ನು ನಡೆಸಲಾಗುತ್ತದೆ. ಅವರ ತತ್ವ, ಆದರ್ಶಗಳ ಉಪನ್ಯಾಸ ಹಾಗೂ ಕವಿಗೋಷ್ಠಿ ಹಮ್ಮಿಕೊಳ್ಳಲಾಗುತ್ತದೆ. ಹಾಗೆಯೇ ಕರ್ನಾಟಕ ಸಂಗೀತ, ಭರತನಾಟ್ಯ, ಹಿಂದೂಸ್ತಾನಿ ಸಂಗೀತ ತರಗತಿಯನ್ನು ಉಚಿತವಾಗಿ ಮಕ್ಕಳಿಗೆ ಹೇಳಿಕೊಡಲಾಗುತ್ತದೆ‘ ಎಂದು ತಿಳಿಸಿದರು.

ಸಾಹಿತಿ ಎಲ್ಲೇಗೌಡ ಬೆಸಗರಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಾಹಿತಿ ಸಾ.ಮ.ಶಿವಮಲ್ಲಯ್ಯ, ನಿವೃತ್ತ ವಾರ್ಡನ್ ಎಂ.ಎಚ್.ನಾಯಕ್, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಕೂ.ಗಿ.ಗಿರಿಯಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT