ಶುಕ್ರವಾರ, ಜನವರಿ 24, 2020
21 °C
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ

‘ಕೃಷಿ ಹೊಂಡ’ ಮಾಹಿತಿಗೆ ಜಟಾಪಟಿ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸದಸ್ಯರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೃಷಿ ಹೊಂಡಗಳ ಮಂಜೂರಾತಿ, ನಿರ್ಮಾಣ, ಪಂಪ್‌ಸೆಟ್‌ ಮತ್ತು ಪೈಪ್‌ಗಳ ವಿತರಣೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೃಷಿ ಹೊಂಡಗಳ ಕುರಿತು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯೆ ಭುವನೇಶ್ವರಿ ಬಗಲಿ ಮಾತನಾಡಿ, ‘ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಜುಲೈ ತಿಂಗಳಿನಲ್ಲಿ ಕೆಲವು ಮಾಹಿತಿ ಕೇಳಿದ್ದೇನೆ. ಇದುವರೆಗೂ ತಲುಪಿಸಿಲ್ಲ. ಹೀಗಾದರೆ ಹೇಗೆ, ಸದಸ್ಯರಿಗೆ ಗೌರವ ಇಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ನಿರ್ದೇಶಕ ಡಾ.ಶಿವಕುಮಾರ್, ‘ಇಲಾಖೆಯ ಲೆಕ್ಕ ಪರಿಶೋಧನೆ, ಬೆಳೆ ವಿಮೆ ಮಾಹಿತಿಯನ್ನು ಕ್ರೋಡೀಕರಿಸುತ್ತಿರುವ ಕಾರಣ ವಿಳಂಬವಾಗಿದೆ. ಸಂಜೆಯೊಳಗೆ ಮಾಹಿತಿ ನೀಡಲಾಗುವುದು’ ಎಂದರು.

ಇದಕ್ಕೆ ಒಪ್ಪದ ಭುವನೇಶ್ವರಿ, ‘ಕೇಳಿದ ಮಾಹಿತಿ ಕೊಡಲು ಇಷ್ಟುಸಮಯ ಬೇಕು ಅಂದರೆ ಹೇಗೆ,ಪ್ರತಿ ಬಾರಿಯೂ ನೀವು ಹೀಗೆಯೇಮಾಡುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ ರೆಡ್ಡಿ, ‘ನೀವು ಕೇಳಿದ ಮಾಹಿತಿಯನ್ನು ಸಕಾಲಕ್ಕೆ ಕೊಡುವುದಿಲ್ಲ ಎಂಬುದು ನಿಮ್ಮ ಮೇಲಿನ ಮುಖ್ಯ ಆರೋಪವಾಗಿದೆ. ಎರಡು ದಿನದಲ್ಲಿ ಮಾಹಿತಿ ಕೊಡಬೇಕು’ ಎಂದು ಸೂಚಿಸಿದರು.

ಸದಸ್ಯ ಬಿ.ಆರ್.ಎಂಟಮಾನ ಮಾತನಾಡಿ, ‘ಕೃಷಿ ಹೊಂಡಗಳಿಗೆ ತಾಡಪತ್ರಿ, ಪಂಪ್‌ಸೆಟ್‌, ಪೈಪ್‌ಗಳನ್ನು ಕೊಟ್ಟಿಲ್ಲ. ನನ್ನ ಬಳಿ ಫಲಾನುಭವಿಯ ಮಾಹಿತಿ ಇದೆ. ಹೀಗಾದರೆ ಹೇಗೆ?’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯ ಮಹಾಂತಗೌಡ ಪಾಟೀಲ ಮಾತನಾಡಿ, ‘ನಿಮ್ಮ ಬಳಿಕೃಷಿ ಹೊಂಡದ ಮಾಹಿತಿಯೇ ಇಲ್ಲ. ಅಕ್ರಮ ಮತ್ತು ಸಕ್ರಮ ಹೊಂಡಗಳು ಎಷ್ಟಿವೆ ಹೇಳಿ’ ಎಂದು ಸವಾಲು ಹಾಕಿದರು.

ಇದಕ್ಕೆ ಉತ್ತರಿಸಿದ ಡಾ.ಶಿವಕುಮಾರ್, ‘2014–15ರಿಂದ ಇಲ್ಲಿಯವರೆಗೆ 13 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಮಳೆ ಆಗದ್ದರಿಂದ ಮತ್ತು ನೀರಿನ ಮೂಲ ಲಭ್ಯವಾಗದ ಕಾರಣ ರೈತರೇ ಒಪ್ಪಿಗೆ ಸೂಚಿಸಿ 249 ಕೃಷಿ ಹೊಂಡಗಳನ್ನು ಮುಚ್ಚಿಕೊಂಡಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ‌ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು